ಮೊದಲ ಟಿ20 ಪಂದ್ಯ: ವಿಂಡೀಸ್ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
ಮೈಸೂರು

ಮೊದಲ ಟಿ20 ಪಂದ್ಯ: ವಿಂಡೀಸ್ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

November 5, 2018

ಕೋಲ್ಕತ್ತಾ:  ಇಲ್ಲಿನ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟ್ವೆಂಟಿ -20 ಪಂದ್ಯದಲ್ಲಿ ಭಾರತ 5 ವಿಕೆಟ್‍ಗಳ ಪ್ರಯಾಸದ ಗೆಲುವು ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಭಾರತೀಯ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 109 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. 47 ರನ್‍ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು, ದಿನೇಶ್ ಕಾರ್ತಿಕ್ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 31 ರನ್ ಹಾಗೂ ಕೃನಾಲ್ ಪಾಂಡ್ಯ 9 ಎಸೆತ ಗಳಲ್ಲಿ 3 ಬೌಂಡರಿನೆರವಿನಿಂದ 21 ರನ್ ಗಳಿಸಿದರು. ಈ ಜೋಡಿಯ ಸಂಯಮದ ಬ್ಯಾಟಿಂಗ್‍ನಿಂದ ತಂಡ ಗೆಲುವಿನ ದಡ ಮುಟ್ಟಿಸಿತು. ಒಟ್ಟಾರೆ ಭಾರತ 17.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಉಳಿದಂತೆ ನಾಯಕ ರೋಹಿತ್ ಶರ್ಮಾ 6, ಶಿಖರ್ ಧವನ್ 3, ಕೆ.ಎಲ್.ರಾಹುಲ್ 16, ಮನೀಷ್ ಪಾಂಡ್ಯ 19 ರನ್ ಗಳಿಸಿದರು. ವಿಂಡೀಸ್ ಪರ ಥಾಮಸ್ ಮತ್ತು ಬ್ರಾಥೈಟ್ ತಲಾ 2 ವಿಕೆಟ್, ಪಿಯರೆ ಒಂದು ವಿಕೆಟ್ ಉರುಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‍ಇಂಡೀಸ್ ಕೂಡ ಆರಂಭಿಕ ಆಘಾತ ಅನುಭವಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ಹೋಪ್ 14, ರಮ್ದಿನ್ 2 ಬಹುಬೇಗನೇ ವಿಕೆಟ್ ಒಪ್ಪಿಸಿದರು. ಉಳಿದಂತೆ ಹೆಟ್ಮರ್ 10, ಕೀರನ್ ಪೊಲಾರ್ಡ್ 14, ಅಲೇನ್ 24 ರನ್ ಗಳಿಸಿ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲು ಪರದಾಡಿದರು.

ಭಾರತ ಪರ ಕುಲದೀಪ್ ಯಾದವ್ 3, ಉಮೇಶ್ ಯಾದವ್, ಬುಮ್ರಾ, ಖಲೀಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು. 4 ಓವರ್‌ಗಳಲ್ಲಿ 13 ರನ್ ನೀಡಿ 3 ವಿಕೆಟ್ ಉರುಳಿಸಿದ ಕುಲದೀಪ್ ಯಾದವ್ ಪಂದ್ಯಶೇಷ್ಠ ಪ್ರಶಸ್ತಿಗೆ ಭಾಜನರಾದದರು. ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ. ಸರಣಿಯ ಎರಡನೇ ಪಂದ್ಯ ಲಕ್ನೋದಲ್ಲಿನ. 6ರಂದು ನಡೆಯಲಿದೆ.

Translate »