ಸಿಬಿಐನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ
ಮೈಸೂರು

ಸಿಬಿಐನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ

November 6, 2020

ಧಾರವಾಡ, ನ.5-ನಾಲ್ಕು ವರ್ಷ ಗಳ ಹಿಂದೆ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯ ಯೋಗೇಶ್‍ಗೌಡ ಕೊಲೆ ಪ್ರಕರಣ ದಲ್ಲಿ ಕಾಂಗ್ರೆಸ್‍ನ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಗುರುವಾರ ಸಿಬಿಐ ಬಂಧಿಸಿದೆ.

ಇಂದು ಬೆಳಗ್ಗೆಯೇ ವಿನಯ್ ಕುಲಕರ್ಣಿ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅವರನ್ನು ವಶಕ್ಕೆ ಪಡೆದು ಸಂಜೆವರೆಗೂ ವಿಚಾರಣೆ ನಡೆಸಿ ನಂತರ ಬಂಧಿಸಿ ಧಾರವಾಡ ಜಿಲ್ಲಾ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕುಲಕರ್ಣಿ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಅರ್ಜಿ ಸಲ್ಲಿಸಿದರು. ಆದರೆ ವಿನಯ್ ಕುಲಕರ್ಣಿ ಅವರನ್ನು ಶುಕ್ರವಾರ ಸಂಜೆವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ನ್ಯಾಯಾಧೀಶರಾದ ಹೆಚ್. ಪಂಚಾಕ್ಷರಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ. ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯ ಲಿದ್ದು, ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸ ಲಾಗುತ್ತದೆಯೇ ಅಥವಾ ನ್ಯಾಯಾಂಗ ಬಂಧನ ಮುಂದು ವರೆಸಲಾಗುತ್ತದೆಯೇ ಎಂಬುದು ನಾಳೆ ತಿಳಿಯಲಿದೆ.

ಹಿನ್ನೆಲೆ: ಧಾರವಾಡ ಜಿಪಂನ ಬಿಜೆಪಿ ಸದಸ್ಯ ಯೋಗೇಶ್‍ಗೌಡ 2016ರ ಜೂನ್ 15ರಂದು ಹತ್ಯೆಗೀಡಾಗಿದ್ದರು. ಜೂನ್ 17ರಂದು ಬಸವರಾಜ್ ಮುತ್ತಿಗೆ ಎಂಬಾತನೂ ಸೇರಿದಂತೆ 6 ಮಂದಿ, ತಾವೇ ಯೋಗೇಶ್‍ಗೌಡ ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಶರಣಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಈ 6 ಮಂದಿ ವಿರುದ್ಧ ಸೆಪ್ಟೆಂಬರ್ 9ರಂದು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದರು.

ಆದರೆ ಯೋಗೇಶ್‍ಗೌಡ ಕೊಲೆ ಪ್ರಕರಣದಲ್ಲಿ ಅಂದಿನ ಸಚಿವ ವಿನಯ್ ಕುಲಕರ್ಣಿ ಕೈವಾಡವಿದೆ ಎಂದು ಆತನ ಸಹೋದರ ಗುರುನಾಥ್‍ಗೌಡ ಹೈಕೋರ್ಟ್ ಮೊರೆ ಹೋಗಿ ದ್ದರು. ಅದೇ ವೇಳೆ ಯೋಗೇಶ್ ಗೌಡ ಅವರ ಪತ್ನಿ ಕಾಂಗ್ರೆಸ್‍ಗೆ ಸೇರ್ಪಡೆ ಗೊಳ್ಳುವ ಮೂಲಕ ಈ ಪ್ರಕರಣಕ್ಕೆ ತಿರುವು ನೀಡಿ ದ್ದರು. ಮತ್ತೊಂದೆಡೆ ಗುರು ನಾಥ್‍ಗೌಡ ತನ್ನ ಕಾನೂನು ಹೋರಾಟವನ್ನು ನಿಲ್ಲಿಸಿರಲಿಲ್ಲ. ಈ ಮಧ್ಯೆ ಬೆಳಗಾವಿ ಐಜಿಪಿ ಕಚೇರಿಯಲ್ಲಿ ಡಿವೈಎಸ್‍ಪಿ ಆಗಿದ್ದ ತುಳಸಪ್ಪ ಸುಲ್ಫಿ ಅವರು 2017ರ ಅಕ್ಟೋಬರ್ 27ರಂದು ಗುರುನಾಥ್ ಗೌಡ ಅವರ ಮನೆಗೆ ಭೇಟಿ ನೀಡಿ ವಿನಯ್ ಕುಲಕರ್ಣಿ ಅವರ ಜೊತೆ ರಾಜೀ ಆಗುವಂತೆ ಒತ್ತಡ ಹೇರಿದ್ದರು. ಡಿವೈಎಸ್‍ಪಿ, ಗುರುನಾಥ್‍ಗೌಡ ಮನೆಗೆ ಭೇಟಿ ನೀಡಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದೇ ವೇಳೆ ಗುರುನಾಥ್‍ಗೌಡ ಅವರೂ ಡಿವೈಎಸ್‍ಪಿ ಸುಲ್ಫಿ ಅವರು ತಮ್ಮ ಮನೆಗೆ ಭೇಟಿ ನೀಡಿ ಒತ್ತಡ ಹೇರಿದ್ದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದರು.

ಈ ಪ್ರಕರಣದಲ್ಲಿ ಗುರುನಾಥ್‍ಗೌಡರಿಗೆ ಸಹಕಾರ ನೀಡುತ್ತಿದ್ದ ವಕೀಲ ಆನಂದ್ ಅವರಿಗೆ 2017ರ ನವೆಂಬರ್ 10ರಂದು ಕರೆ ಮಾಡಿದ್ದ ವಿನಯ್ ಕುಲಕರ್ಣಿ ಬೆದರಿಕೆ ಹಾಕಿದ್ದನ್ನು ಆ ವಕೀಲರು ರೆಕಾರ್ಡ್ ಮಾಡಿದ್ದರು. ಇವೆಲ್ಲಾ ಸಾಕ್ಷ್ಯಾಧಾರಗಳನ್ನು ಇಟ್ಟು ಕೊಂಡು ತಮ್ಮ ಸಹೋದರನ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಕೈವಾಡವಿದೆ ಎಂದೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದೂ ಗುರುನಾಥ್‍ಗೌಡ ಹೋರಾಟ ನಡೆಸುತ್ತಲೇ ಬಂದಿದ್ದರು. 2019ರ ಸೆಪ್ಟೆಂಬರ್ 6ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಕರಣವನ್ನು ಸಿಬಿಐಗೆ ವಹಿಸಿದರು. ಆದರೆ ಅದಕ್ಕೆ ಹೈಕೋರ್ಟ್‍ನಿಂದ ತಡೆಯಾಜ್ಞೆ ತರಲಾಗಿತ್ತು. ಸಿಬಿಐ ಅಧಿಕಾರಿಗಳು ತಡೆಯಾಜ್ಞೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಪರಿಣಾಮ 2020ರ ಫೆ.20ರಂದು ಹೈಕೋರ್ಟ್ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಪ್ರಾರಂಭವಾಯಿತು.

ಸಿಬಿಐ ಅಧಿಕಾರಿಗಳು ಮಾರ್ಚ್ 1ರಂದು 6 ಮಂದಿ ಸುಪಾರಿ ಕಿಲ್ಲರ್‍ಗಳನ್ನು ಬಂಧಿಸಿ ದ್ದರು. ಈ ಮೂಲಕ 2016ರಲ್ಲಿ ಪೊಲೀಸರಿಗೆ ಶರಣಾಗಿದ್ದವರು ನೈಜ ಹಂತಕರಲ್ಲ ಎಂಬುದು ಬೆಳಕಿಗೆ ಬಂದಿತ್ತು. ಅಲ್ಲದೇ ಈ ಪ್ರಕರಣವನ್ನು ತಿರುಚಲು ಹಾಗೂ ಸಾಕ್ಷ್ಯಾ ಧಾರಗಳನ್ನು ನಾಶಪಡಿಸಲು ಪ್ರಯತ್ನಗಳು ನಡೆದಿತ್ತು. ಅದರಲ್ಲಿ ಸ್ಥಳೀಯ ಪೊಲೀಸರು ಶಾಮೀಲಾಗಿದ್ದರು ಎಂಬ ಸಂಶಯ ದಟ್ಟವಾಗಿ ಹರಡಿತ್ತು. ಸಿಬಿಐ ಅಧಿಕಾರಿಗಳು ಅಂದಿನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಪಾಂಡುರಂಗ ರಾಣೆ ಸೇರಿದಂತೆ 20 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದ್ದರು. ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದಾರೆ.

Translate »