ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಗೆ ನೆರವಿನ ನೆಪದಲ್ಲಿ ವಂಚನೆ
ಮೈಸೂರು

ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಗೆ ನೆರವಿನ ನೆಪದಲ್ಲಿ ವಂಚನೆ

February 8, 2022

ಹುಣಸೂರು, ಫೆ. 7(ಕೆಕೆ)- ತಂದೆಯಿಂ ದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಗಿರಿಜನ ಅಪ್ರಾಪ್ತ ಬಾಲಕಿಗೆ ಸರ್ಕಾರದಿಂದ ಬಂದಿದ್ದ 5 ಲಕ್ಷ ರೂ. ಪರಿಹಾರ ಹಣವನ್ನು ಲಪಟಾ ಯಿಸಿದ್ದ ವ್ಯಕ್ತಿಯನ್ನು ಹುಣಸೂರು ಗ್ರಾಮಾಂ ತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಮಾಜಿ ಗ್ರಾಪಂ ಸದಸ್ಯ ದಿವಂಗತ ನಸರುಲ್ಲಾ ಷರೀಫ್ ಪುತ್ರ ಚಾಂದ್ ಪಾಷಾ, ಗಿರಿಜನ ಬಾಲಕಿಯ ಪರಿಹಾರದ ಹಣ ಲಪಟಾಯಿಸಿ ಬಂಧನಕ್ಕೊಳ ಗಾದವನಾಗಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಬಲ್ಲೇನಹಳ್ಳಿ ಗ್ರಾಮದ ಗಿರಿಜನ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಆಕೆ ತನ್ನ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು 2019ರಲ್ಲಿ ಆಕೆಯ ತಂದೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖ ಲಿಸಿ, ಆತನನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಬಾಲಕಿ ತಂದೆ ಜೈಲು ಸೇರಿದ್ದಾನೆ.

ಈ ಬಾಲಕಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2020ರಲ್ಲಿ 5 ಲಕ್ಷ ರೂ. ಪರಿಹಾರ ಬಂದಿತ್ತು. ಬಾಲಕಿ ತಾಯಿ ಅನಕ್ಷರಸ್ಥೆಯಾಗಿದ್ದು, ಅವರನ್ನು ಸಂಪರ್ಕಿಸಿದ್ದ ಚಾಂದ್ ಪಾಷಾ ಬ್ಯಾಂಕ್‍ನಲ್ಲಿ ಹಣ ಜಮೆ ಮಾಡಿಸುವುದಾಗಿ ಹುಣಸೂರಿನ ಆಸ್ಪತ್ರೆ ಕಾವಲ್‍ನಲ್ಲಿರುವ ಕರ್ಣಾಟಕ ಗ್ರಾಮೀಣ ಬ್ಯಾಂಕ್‍ಗೆ 2020ರ ಅಕ್ಟೋಬರ್ 15ರಂದು ಕರೆ ದೊಯ್ದು ಅವರ ಹೆಸರಿನಲ್ಲಿ ಖಾತೆ ತೆರೆಸಿ, ಪಾಸ್ ಬುಕ್ ಮತ್ತು ಎಟಿಎಂ ಕಾರ್ಡ್‍ನ್ನು ತಾನೇ ಇಟ್ಟುಕೊಂಡಿದ್ದಾನೆ. 2021ರ ಏಪ್ರಿಲ್ 3ರಂದು ಚಾಂದ್‍ಪಾಷಾ, ಬಾಲಕಿ ತಾಯಿ ಖಾತೆಯಿಂದ 2.50 ಲಕ್ಷ ರೂ.ಗಳನ್ನು ನೆಫ್ಟ್ (ಓಇಈಖಿ) ಮೂಲಕ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ನಂತರ ತನ್ನ ಬಳಿಯೇ ಇದ್ದ ಎಟಿಎಂ ಕಾರ್ಡ್‍ನಿಂದ ಹಂತ ಹಂತವಾಗಿ ಉಳಿದ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಕಳೆದ ಜನವರಿ 17ರಂದು ಬಾಲಕಿಯ ತಾಯಿ
ಬ್ಯಾಂಕ್‍ಗೆ ಹೋಗಿ ವಿಚಾರಿಸಿದಾಗ, ತನ್ನ ಮಗಳಿಗೆ ಬಂದಿದ್ದ ಪರಿಹಾರದ ಹಣ ಈಗಾಗಲೇ ಡ್ರಾ ಮಾಡಿಕೊಳ್ಳಲಾಗಿದೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಬಾಲಕಿ ಮತ್ತು ಆಕೆಯ ತಾಯಿ ಜನವರಿ 20ರಂದು ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಅವರಿಗೆ ದೂರು ನೀಡಿದ್ದಾರೆ. ಆ ವೇಳೆ ಚಾಂದ್ ಪಾಷಾನನ್ನು ಕರೆಸಿ ವಿಚಾರಿಸಿದಾಗ, ಆತ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದ ಎನ್ನಲಾಗಿದ್ದು, ಈವರೆವಿಗೂ ಹಣ ಹಿಂತಿರುಗಿಸದ ಕಾರಣ ತಾಯಿ ಮತ್ತು ಮಗಳು ಹುಣಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ತಮಗೆ ಆಗಿದ್ದ ಅನ್ಯಾಯವನ್ನು ವಿವರಿಸಿದರು. ಅದೇ ವೇಳೆ ಡಿವೈಎಸ್ಪಿ ರವಿಪ್ರಸಾದ್ ನಿರ್ದೇಶನದ ಮೇರೆಗೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಚಾಂದ್ ಪಾಷಾ ವಿರುದ್ಧ ಎಫ್‍ಐಆರ್ ದಾಖಲಿಸಿ, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Translate »