ಸ್ಥಳಾಂತರದ ನಂತರ `ಅಂಬಾರಿ’ಗೆ ಉತ್ತಮ ಪ್ರತಿಕ್ರಿಯೆ
ಮೈಸೂರು

ಸ್ಥಳಾಂತರದ ನಂತರ `ಅಂಬಾರಿ’ಗೆ ಉತ್ತಮ ಪ್ರತಿಕ್ರಿಯೆ

February 23, 2022

ಮೈಸೂರು, ಫೆ.22(ಆರ್‍ಕೆ)-ಮೈಸೂ ರಿನ ಅರಮನೆ ದಕ್ಷಿಣ ದ್ವಾರದಿಂದ ಕಾರ್ಯ ನಿರ್ವಹಿಸುತ್ತಿರುವ `ಅಂಬಾರಿ’ ಡಬಲ್ ಡೆಕ್ಕರ್ ಬಸ್‍ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಏSಖಿಆಅ) ದಿಂದ ಆಯೋಜಿಸಿರುವ ಅಂಬಾರಿ ಮೈಸೂರು ನಗರ ಪ್ರದಕ್ಷಿಣೆಗೆ ದಸರಾ ಮಹೋತ್ಸವದ ವೇಳೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತಾದರೂ, ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಪ್ರವಾಸಿಗರೇ ಬಾರದ ಕಾರಣ ಬಸ್ಸುಗಳ ಕಾರ್ಯಾಚರಣೆ ಕುಂಠಿತಗೊಂಡು, ಉದ್ದೇಶವೇ ನಿರರ್ಥಕವಾಗಿತ್ತು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರ ಹೊಯ್ಸಳ ಆವರಣದ ಕೆಎಸ್‍ಟಿಡಿಸಿ ಕಚೇರಿಯಿಂದ ಹೊರಡುತ್ತಿದ್ದ ಡಬಲ್ ಡೆಕ್ಕರ್ ಬಸ್‍ಗಳು ಎರಡು ತಾಸು ಸಂಚರಿಸಿ, ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡ, ಸ್ಮಾರಕ, ನೈಸರ್ಗಿಕ ತಾಣಗಳ ದರ್ಶನ ಮಾಡಿಸಿ, ತೋರಿಸಿಕೊಂಡು ಮರಳಿ ಬರುತ್ತಿದ್ದವು. ಹೋಟೆಲ್ ಆವರಣದಲ್ಲೇ ನಿಲ್ಲುತ್ತಿದ್ದ ಬಸ್ಸುಗಳು ಪ್ರವಾಸಿಗರಿಗೆ ಮಾಹಿತಿಯೇ ಇಲ್ಲದೆ, ನಿಂತಲ್ಲೇ ನಿಂತಿದ್ದವು. ಕೋವಿಡ್ ಪ್ರಕರಣಗಳು ಕಡಿಮೆಯಾಗಿ ನಿರ್ಬಂಧ ಗಳನ್ನು ಸಂಪೂರ್ಣ ತೆರವುಗೊಳಿಸಿದ ನಂತರವೂ ಅಂಬಾರಿ ಸವಾರಿಗೆ ಜನರೇ ಬರುತ್ತಿರಲಿಲ್ಲ. ಇತ್ತೀಚೆಗಷ್ಟೇ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಜಿ.ಜಗದೀಶ್ (ಈ ಹಿಂದೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ದ್ದರು) ಅವರು ಮೈಸೂರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ದಾಗ ಅಂಬಾರಿ ಬಸ್ ಸೇವೆಗೆ ಜನರೇ ಬಾರದಿರುವುದು ತಿಳಿಯಿತು. ಪ್ರವಾಸಿಗರಿಗೆ ಮಾಹಿತಿಯೇ ಇಲ್ಲದೆ ಕಾಂಪೌಂಡ್ ಒಳಗೆ ಬಸ್ ನಿಲ್ಲಿಸಿಕೊಂಡರೆ ಯಾರಿಗೂ ತಿಳಿ ಯುವುದೇ ಇಲ್ಲ ಎಂಬುದನ್ನು ಮನಗಂಡ ಜಗದೀಶ್ ಅವರು, ಅರಮನೆ ದಕ್ಷಿಣ ಪ್ರವೇಶ ದ್ವಾರ (ಗನ್‍ಹೌಸ್ ಬಳಿ)ಕ್ಕೆ ಅಂಬಾರಿ ಬಸ್ ಅನ್ನು ಸ್ಥಳಾಂತರಿಸುವಂತೆ ಸಲಹೆ ನೀಡಿದ್ದರು. ಅದರಂತೆ ನಿಗಮದ ಅಧಿಕಾರಿ ಗಳು ಕಳೆದ ವಾರ ಹೊಸ ಜಾಗದಿಂದ ಡಬಲ್ ಡೆಕ್ಕರ್ ಬಸ್ ಆಪರೇಟ್ ಮಾಡಲಾರಂಭಿಸಿದ್ದರಿಂದ ಪ್ರತೀ ದಿನ ಸರಾಸರಿ 25 ರಿಂದ 30 ಮಂದಿ ಅಂಬಾರಿ ಯಲ್ಲಿ ಸವಾರಿ ಮಾಡುತ್ತಿದ್ದಾರೆ. ಅರಮನೆ ದಕ್ಷಿಣ ಪ್ರವೇಶ ದ್ವಾರದ ಬಳಿಯೇ ಬಸ್ ನಿಲ್ಲುವುದರಿಂದ ಪ್ರವಾಸಿಗರು ಉತ್ಸಾಹದಿಂದ ನಗರ ಪ್ರದಕ್ಷಿಣೆ ಮಾಡಲು ಆಸಕ್ತಿ ತೋರುತ್ತಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ತಲಾ 250 ರೂ. ಇದ್ದ ಅಂಬಾರಿ ಬಸ್ ಪ್ರಯಾಣ ದರವನ್ನು 150 ರೂ.ಗಳಿಗೆ ಕಡಿತಗೊಳಿಸಿರುವುದು ಹಾಗೂ ಪ್ರವಾಸಿಗರಿಗೆ ಗೋಚರಿಸುವಂತೆ ಬಸ್ ನಿಲ್ಲಿಸುತ್ತಿರುವುದು ಉತ್ತಮ ಪ್ರತಿಕ್ರಿಯೆ ಬರಲು ಕಾರಣವಾಗಿದ್ದು, ಮುಂದೆ ಬೇಡಿಕೆಗೆ ತಕ್ಕಂತೆ ಹೆಚ್ಚು ಬಸ್ಸುಗಳನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Translate »