ಮೇಕೆದಾಟು ಅಣೆಕಟ್ಟು ಕಾಮಗಾರಿ ಆರಂಭಕ್ಕೆ ಸರ್ಕಾರದ ವಿಳಂಬ: ಸಿದ್ದರಾಮಯ್ಯ ಟೀಕೆ
ಮೈಸೂರು

ಮೇಕೆದಾಟು ಅಣೆಕಟ್ಟು ಕಾಮಗಾರಿ ಆರಂಭಕ್ಕೆ ಸರ್ಕಾರದ ವಿಳಂಬ: ಸಿದ್ದರಾಮಯ್ಯ ಟೀಕೆ

November 10, 2021

ಮೈಸೂರು, ನ.9(ಆರ್‍ಕೆಬಿ)- ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಡಿಪಿಆರ್ ಮಾಡುವುದು ತಡವಾಗಿತ್ತು. ಆದರೂ ನಾವು ಡಿಪಿಆರ್ ಮಾಡಿ ಮುಗಿಸಿದ್ದೇವೆ. ಆದರೆ ಈಗಿನ ಸರ್ಕಾರ ಕಾಮಗಾರಿ ಆರಂಭಿಸಲು ವಿಳಂಬ ಮಾಡುತ್ತಿದೆ. ಕಾಂಗ್ರೆಸ್‍ನವರು ತಡವಾಗಿ ಡಿಪಿಆರ್ ಮಾಡಿ ದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದು ವಿರೋಧಪಕ್ಷದ ನಾಯಕರೂ ಆದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೇಕೆದಾಟು ಕಾಮಗಾರಿ ಆರಂಭಿಸುವಂತೆ ನಾವು ಕೇಳುತ್ತಿದ್ದೇವೆ. ಸರ್ಕಾರ ವಿಳಂಬ ಮಾಡುತ್ತಿದೆ. ಒತ್ತಡ ಏರಲೇಬೇಕಾದ ಸನ್ನಿವೇಶದಲ್ಲೇ ಇದ್ದೇವೆ. ಹಾಗಾಗಿ ಒತ್ತಡ ಹೇರಿದ್ದೇವೆ. ನಾವು ಸರ್ಕಾರದ ಮೇಲೆ ಒತ್ತಡ ಹೇರದಿದ್ದರೆ ಅವರು ಕೆಲಸ ಆರಂಭಿಸುವುದಿಲ್ಲ ಎಂದರು.

ಮೇಕೆದಾಟು ಯೋಜನೆಗೆ ಕೋರ್ಟ್ ಅಡ್ಡಿ ಇದೆ ಎಂಬುದೆಲ್ಲವೂ ಸುಳ್ಳು. ಕೇಂದ್ರದಿಂದ ಒಪ್ಪಿಗೆ ಪಡೆದು ತುರ್ತಾಗಿ ಯೋಜನೆ ಆರಂಭಿಸಬೇಕೆಂದು ಆಗ್ರಹಿಸಿ ನಾವು ಕಾಂಗ್ರೆಸ್ ಪಾದಯಾತ್ರೆ ಮಾಡಲಿದೆ ಎಂದು ಹೇಳಿದರು.

ಬಿಟ್ ಕಾಯಿನ್ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರು ಯಾರೇ ಇರಲಿ, ಚುರುಕಾಗಿ ಏಕೆ ತನಿಖೆ ಆರಂಭಿಸುತ್ತಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅದರ ಸಾಕ್ಷಿ ಹುಡುಕಬೇಕಾದವರು, ತನಿಖೆ ಮಾಡಬೇಕಾದವರು ತನಿಖಾಧಿಕಾರಿಗಳು. ಆ ಕೆಲಸವನ್ನು ಸರ್ಕಾರ ಮಾಡಿಸಲಿ. ನನ್ನ ಬಳಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಇನ್ನೂ ಸಾಕ್ಷಿಗಳು ಬೇಕಿದೆ. ನಾನು ಸಾಕ್ಷಿ ಸಂಗ್ರಹದಲ್ಲಿದ್ದೇನೆ. ನನ್ನ ಬಳಿ ಇರುವ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

Translate »