ಜಿಲೆಟಿನ್ ಸ್ಫೋಟ ದುರಂತಕ್ಕೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣ: ಡಿಕೆಶಿ
ಮೈಸೂರು

ಜಿಲೆಟಿನ್ ಸ್ಫೋಟ ದುರಂತಕ್ಕೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣ: ಡಿಕೆಶಿ

February 24, 2021

ಬೆಂಗಳೂರು,ಫೆ.23(ಕೆಎಂಶಿ)-‘ಚಿಕ್ಕಬಳ್ಳಾಪುರದ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟದಿಂದ 6 ಜನ ಜೀವ ಕಳೆದುಕೊಂಡಿರುವುದಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಸರ್ಕಾರದ ಅಸಡ್ಡೆಗೆ ಇನ್ನೆಷ್ಟು ಅಮಾ ಯಕ ಜೀವಗಳು ಬಲಿಯಾಗಬೇಕು?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಳೆದ ಒಂದು ತಿಂಗಳಲ್ಲೇ 2ನೇ ಬಾರಿ ಇಂತಹ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದಲ್ಲಿನ ಸ್ಫೋಟ ಸಮಯದಲ್ಲೇ, ಈ ಸ್ಫೋಟಕಗಳ ನಿರ್ವಹಣೆ, ಸಾಗಣೆ ಬಗ್ಗೆ ಒಂದು ಸುರಕ್ಷಿತ ವ್ಯವಸ್ಥೆ ನಿರ್ಮಿಸಬೇಕು, ನೀತಿ-ನಿಯಮಗಳ ಕಟ್ಟುನಿಟ್ಟು ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ನಾನು ಹೇಳಿದ್ದೆ. ಆದರೆ ತನ್ನ ಆಂತರಿಕ ಸಮಸ್ಯೆಗಳಲ್ಲೇ ಮುಳುಗಿರುವ ಈ ಸರಕಾರಕ್ಕೆ ಇತ್ತ ಗಮನ ಹರಿಸಲು ಸಾಧ್ಯವಾಗಿಲ್ಲ. ಮಾಧ್ಯಮಗಳ ಮುಂದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಕೈಗೊಂಡಿ ದ್ದರೆ ಇಂತಹ ದುರಂತ ಮರುಕಳಿಸುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ. ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Translate »