ಬೆಂಗಳೂರು, ಜೂ.11- ರಾಜ್ಯದಲ್ಲಿ ಪುಟ್ಟ ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಎಲ್‍ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಹಂತದ 5ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣವನ್ನು ರದ್ದುಗೊಳಿಸಿದ್ದು, ಅದನ್ನು 7ನೇ ತರಗತಿವರೆಗೂ ವಿಸ್ತರಿಸಲು ಮುಂದಾಗಿದೆ. ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು, ಆನ್ ಲೈನ್ ಶಿಕ್ಷಣದ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಆನ್ ಲೈನ್ ಶಿಕ್ಷಣವನ್ನು 5ನೇ ತರಗತಿ ಬದಲು 7ನೇ ತರಗತಿವರೆಗೂ ರದ್ದುಗೊಳಿಸುವ ಚಿಂತನೆ ಇದೆ ಎಂದರು. ನಿನ್ನೆಯಷ್ಟೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ ನಂತರ 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ್ದರು. ಇಂದು ಸಹ ಈ ಕುರಿತು ಟ್ವೀಟ್ ಮಾಡಿರುವ ಸುರೇಶ್‍ಕುಮಾರ್, ಸಂಪುಟ ಸಭೆಯಲ್ಲಿ 7ನೇ ತರಗತಿವರೆಗೂ ಆನ್‍ಲೈನ್ ಶಿಕ್ಷಣ ರದ್ದುಗೊಳಿಸುವ ಬಗ್ಗೆ ಚರ್ಚೆಯಾಗಿದೆ. ಆದರೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
