ಜಿ.ಟಿ.ದೇವೇಗೌಡರು ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ  ಹೇಳಿಕೆ ಎಲ್ಲೂ ಕೊಟ್ಟಿಲ್ಲ
News

ಜಿ.ಟಿ.ದೇವೇಗೌಡರು ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆ ಎಲ್ಲೂ ಕೊಟ್ಟಿಲ್ಲ

September 8, 2021

ಬೆಂಗಳೂರು, ಸೆ.7- ಶಾಸಕರಾದ ಜಿ.ಟಿ.ದೇವೇಗೌಡ ಪಕ್ಷದಿಂದ ದೂರ ಇದ್ದಾರೆ. ಆದರೆ ಅವರು ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಕೊಟ್ಟಿಲ್ಲ ಎಂದು ಹೇಳುವ ಮೂಲಕ ತಮ್ಮ ನೆಚ್ಚಿನ ಪಕ್ಷ ಸಂಘಟಕ `ಮರಿ’ ದೇವೇ ಗೌಡರ ಮೇಲೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಮಕಾರ ತೋರಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ಜಿ.ಟಿ.ದೇವೇಗೌಡರು ನನಗೂ, ನನ್ನ ಮಗನಿಗೂ ಟಿಕೆಟ್ ಕೊಡುವ ವಿಚಾರವಾಗಿ ಸಿದ್ದರಾಮಯ್ಯ ಹತ್ತಿರ ಮಾತನಾಡಿದ್ದೀನಿ ಎಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದು ಕೂಡ ಹೇಳಿದ್ದಾರೆ. ಆದರೆ ಎಲ್ಲಿಯೂ ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಕೊಟ್ಟಿಲ್ಲ. ಹಾಗಾಗಿ ಅವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ ಎಂದರು. ಜಿ.ಟಿ.ದೇವೇಗೌಡರ ಜೊತೆ ನಾನು ರಾಜಕೀಯ ಮಾತನಾಡಿಲ್ಲ. ತಿರುಪತಿಗೆ ಹೋಗಿದ್ದಾಗ ಜಿ.ಟಿ.ದೇವೇಗೌಡರು ಸಿಕ್ಕಿದ್ದರು. ಆಗ ನಾನೇ ನೋಡಿ, ಕರೆದು ತಮಾಷೆ ಮಾಡಿದ್ದೆ. ‘ನಿನ್ನ ದರ್ಶನ ಇಲ್ಲಿ ಆಯ್ತಲ್ಲಪ್ಪಾ’ ಎಂದಿದ್ದೆ. ಆಗ ‘ನಿಮ್ಮ ದರ್ಶನ ಇಲ್ಲಿ ಆಗಿದ್ದು ಖುಷಿ ಆಯ್ತು ಸರ್’ ಅಂದಿದ್ದರು ಅಷ್ಟೇ. ಯಾವುದೇ ರಾಜಕೀಯ ಮಾತುಕತೆ ನನ್ನ, ಅವರ ನಡುವೆ ಆಗಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದರು.

ಕಲಬುರಗಿ ಪಾಲಿಕೆಯಲ್ಲಿ ನಾಲ್ಕು ಸೀಟ್ ಬಂದಿವೆ. ಇಷ್ಟು ಸೀಟ್ ಬರುತ್ತೆ ಅಂತಾ ನಾನು ಅಂದುಕೊಂಡಿರಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಹೋಗಿ ಪ್ರಚಾರ ಮಾಡಿದ್ದರು. ಜೆಡಿಎಸ್ ಪಕ್ಷ ಎಲ್ಲಿಯೂ ಇಲ್ಲವೇ ಇಲ್ಲ ಅನ್ನುವ ಸ್ಥಿತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ನಮ್ಮ ಸ್ಥಿತಿ ಚೆನ್ನಾಗಿ ಇರಲಿಲ್ಲ. ಅಲ್ಲಿ ಬಿಜೆಪಿ ಸ್ವೀಪ್ ಮಾಡಿದೆ. ಕಾಂಗ್ರೆಸ್ ಬಗ್ಗೆ ಮಾತಾಡಲು ಹೋಗಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ
ಮೂರ್ನಾಲ್ಕು ಸೀಟ್ ನಿರೀಕ್ಷೆ ಮಾಡಿದ್ದೆವು. ಆದರೆ ಒಂದು ಸೀಟ್ ಬಂದಿದೆ. ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲ ಕಡೆ ಪೈಪೋಟಿ ಕೊಟ್ಟಿದ್ದೇವೆ ಎಂದರು. ಯಾರೂ ನಿರಾಶೆಯಾಗಬೇಕಿಲ್ಲ. ನಾವು ಹೆಚ್ಚಿನ ಸದಸ್ಯತ್ವ ನೋಂದಣಿ ಬಗ್ಗೆ ಗಮನ ಕೊಡುತ್ತೇವೆ. ಪಕ್ಷ ಕಟ್ಟುವ ಕಡೆ ಹೆಚ್ಚು ಗಮನ ಕೊಡುತ್ತೇವೆ. ನಾನು ಮತ್ತು ಪಕ್ಷದ ಎಲ್ಲಾ ನಾಯಕರು ಒಳಗೊಂಡಂತೆ ಪಕ್ಷ ಕಟ್ಟುವ ಕೆಲಸಕ್ಕೆ ಆದ್ಯತೆ ಕೊಡುತ್ತೇವೆ. ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ. ಸೋಲು-ಗೆಲುವು ಅಂತಾ ನೋಡಿ ಕುಳಿತುಕೊಳ್ಳಲು ಆಗಲ್ಲ. ಸೋಲು-ಗೆಲುವು, ಸಿಹಿ-ಕಹಿ ಸಾಕಷ್ಟು ನೋಡಿದ್ದೇವೆ ಎಂದು ಹೆಚ್.ಡಿ.ದೇವೇಗೌಡರು ತಿಳಿಸಿದರು.

ಕೋಲಾರ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಜೊತೆ ಸೇರಿ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಮಾತಾಡಿದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ. ದೇವೇಗೌಡರು, ಅವರ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮ ತೆಗೆದುಕೊಳ್ಳುತ್ತಾರೆ. ಕೋಲಾರ ವಿಚಾರದಲ್ಲಿ ಸಹಿಸಲು ಆಗಲ್ಲ, ಕೀಳಾಗಿ ಮಾತನಾಡಿದ್ದರೆ ಕ್ರಮ ಅನಿವಾರ್ಯವಾಗಿದೆ. ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಸಂಬಂಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ. ಕುಮಾರಸ್ವಾಮಿ ಹತ್ತಿರವೂ ಮಾತಾಡಿದ್ದಾರೆ. ಆದರೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ತೀರ್ಮಾನ ಮಾಡಬಾರದು ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ. ಬಿಜೆಪಿ ಅವರು ನನ್ನ ಜೊತೆ ಯಾರೂ ಮಾತನಾಡಿಲ್ಲ. ಖರ್ಗೆ ಅವರು ಪಕ್ಷದವರನ್ನೇ ಸಂಪರ್ಕಿಸಿ ಮಾತಾಡಿದ್ದಾರೆ ಅನ್ಸುತ್ತೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಅವರು ಕೂತು ಮಾತನಾಡುತ್ತಾರೆ, ಆಮೇಲೆ ನೋಡೋಣ ಎಂದರು. ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತಾಡಿರಬಹುದು. ನನ್ನ ಜೊತೆ ಬಿಜೆಪಿಯ ಯಾವ ನಾಯಕರೂ ಮಾತನಾಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸ್ಪಷ್ಟಪಡಿಸಿದರು.

Translate »