ಮಡಿಕೇರಿ ಸಮೀಪ ಭಾರೀ ಜಲಸ್ಫೋಟ
ಕೊಡಗು

ಮಡಿಕೇರಿ ಸಮೀಪ ಭಾರೀ ಜಲಸ್ಫೋಟ

July 20, 2022

ಮಡಿಕೇರಿ, ಜು.19- ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ 2ನೇ ಮೊಣ್ಣಂಗೇರಿಯಲ್ಲಿ ಸೋಮವಾರ ರಾತ್ರಿ ಭಾರೀ ಶಬ್ದದೊಂದಿಗೆ ‘ಜಲ ಸ್ಫೋಟ’ ಸಂಭವಿಸಿದ್ದು, ನಿಶಾನಿ ಬೆಟ್ಟದಲ್ಲಿ ಭಾರೀ ಭೂ ಕುಸಿತವಾಗಿದೆ. ಮಳೆ ಪ್ರಮಾಣ ಕುಗ್ಗಿದ್ದರೂ ರಾತ್ರೋ ರಾತ್ರಿ ಜಲಸ್ಫೋಟ ಸಂಭವಿಸಿರುವುದು ಗ್ರಾಮಸ್ಥರು ಸೇರಿದಂತೆ ಆಡಳಿತ ವ್ಯವಸ್ಥೆಯನ್ನೇ ಬೆಚ್ಚಿ ಬೀಳಿಸಿದೆ.

ತೊರೆಯ ನೀರಿನಲ್ಲಿ ಭಾರೀ ಪ್ರಮಾಣದ ಮರದ ದಿಮ್ಮಿಗಳು ಕೊಚ್ಚಿ ಬಂದಿದ್ದರೆ, ಬೃಹತ್ ಕಲ್ಲು ಬಂಡೆಗಳು ಉರುಳಿ ಬಂದು 2ನೇ ಮೊಣ್ಣಂಗೇರಿಯಲ್ಲಿರುವ ರಾಮನಕೊಲ್ಲಿ ಸೇತುವೆಗೆ ಅಳವಡಿಸಿದ್ದ ಮರದ ಸೇತುವೆಯನ್ನು ಧ್ವಂಸಗೊಳಿಸಿದೆ. ಜಲಸ್ಫೋಟದ ಶಬ್ದ ಕೇಳಿ ಬಂದ ತಕ್ಷಣವೇ ಗ್ರಾಮಸ್ಥರು
ಎಚ್ಚೆತ್ತುಕೊಂಡಿದ್ದು, ಗ್ರಾಮ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧತೆ ನಡೆಸಿದ್ದರು. ರಾಮನಕೊಲ್ಲಿ ಸೇತುವೆಯ ಮತ್ತೊಂದು ಬದಿಯಲ್ಲಿ 25 ಕುಟುಂಬಗಳು ನೆಲೆಸಿದ್ದು, ಈ ಪೈಕಿ ಸೇತುವೆ ಸಮೀಪ ವಿರುವ 2 ಕುಟುಂಬಗಳು ಮರದ ಸೇತುವೆ ಮೂಲಕ ಮಡಿಕೇರಿಗೆ ತೆರಳಿ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಇನ್ನುಳಿದವರು ಬಂದು ನೋಡಿದಾಗ ಆ ಹೊತ್ತಿಗಾ ಗಲೇ ಮರದ ತಾತ್ಕಾಲಿಕ ಸೇತುವೆ ದ್ವಂಸ ವಾಗಿರುವುದು ಕಂಡು ಬಂದಿದೆ. ಹೀಗಾಗಿ ಗ್ರಾಮ ತೊರೆಯಲು ಸಾಧ್ಯವಾಗದೇ, ನೂರಾರು ಗ್ರಾಮಸ್ಥರು ರಾತ್ರಿ ಪೂರ್ತಿ ಜೀವ ಕೈಯ್ಯಲ್ಲಿ ಹಿಡಿದು ದಿನ ಕಳೆದಿದ್ದಾರೆ. ಮಂಗಳವಾರ ಬೆಳಗ್ಗೆ ಹರಸಾಹಸ ಮಾಡಿದ ಗ್ರಾಮಸ್ಥರು 3 ವಿದ್ಯುತ್ ಕಂಬಗಳನ್ನು ಹೊತ್ತು ತಂದು ರಾಮನಕೊಲ್ಲಿ ಸೇತುವೆಗೆ ಅಳವಡಿಸಿ ಗ್ರಾಮಕ್ಕೆ ಮರು ಸಂಪರ್ಕ ಕಲ್ಪಿಸಿದ್ದಾರೆ. ಆ ಮೂಲಕ ಸೇತುವೆಯ ಮತ್ತೊಂದು ಬದಿಯಲ್ಲಿ ಸಿಲುಕಿದ್ದ ಗ್ರಾಮಸ್ಥರನ್ನು ಹೊರ ತಂದಿದ್ದಾರೆ. ರಾಮನಕೊಲ್ಲಿ ತೊರೆಗೆ ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದ ಪರಿಣಾಮ ತೊರೆಯ ನೀರಿನಲ್ಲಿ ಮಣ್ಣು ಕೆಸರಿನ ರಾಡಿಯಾಗಿ ಹರಿಯುತ್ತಿದ್ದು, ಆತಂಕ ಹುಟ್ಟಿಸುತ್ತಿದೆ. ಸೇತುವೆ ನಿರ್ಮಾಣ ಹಂತದಲ್ಲಿದ್ದು, ತಡೆಗೋಡೆಯ ಪಕ್ಕದಲ್ಲೇ ಈ ಹಿಂದೆ ಸುರಿದ ಮಳೆಗೆ ಮಣ್ಣು ಕೊಚ್ಚಿ ಹೋಗಿದೆ. ಇದೀಗ ಸೋಮವಾರ ರಾತ್ರಿ ಸಂಭವಿಸಿದ ಜಲ ಸ್ಫೋಟದಿಂದಾಗಿ ರಾಮನಕೊಲ್ಲಿ ತೊರೆ ಪಥ ಬದಲಿಸಿ ಮಣ್ಣು ಕೊಚ್ಚಿ ಹೋದ ಸ್ಥಳದಲ್ಲಿ ನೀರು ಹರಿಯುತ್ತಿದೆ. ಸೇತುವೆಗೆ ಭಾರಿ ಪ್ರಮಾಣದ ಮರದ ದಿಮ್ಮಿಗಳು ತೇಲಿ ಬಂದಿದ್ದು, ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದೆ.

ಬಿರುಕಿನಿಂದ ಆತಂಕ: 2ನೇ ಮೊಣ್ಣಂಗೇರಿ ಗ್ರಾಮ ನಿಶಾನಿ ಬೆಟ್ಟದ ತ್ಪಪಲಿನಲ್ಲಿ ನೆಲೆ ನಿಂತಿದ್ದು, 2018ರಲ್ಲಿ ಸಂಭವಿಸಿದ ಜಲಸ್ಫೋಟದಿಂದ ಭಾರೀ ಪ್ರಾಕೃತಿಕ ವಿಕೋಪಕ್ಕೆ ಸಾಕ್ಷಿಯಾಗಿದೆ. ಅಂದು ನಿಶಾನಿ ಬೆಟ್ಟದಲ್ಲಿ ಭಾರೀ ಭೂ ಕುಸಿತ ಸಂಭವಿಸಿದ ಪರಿಣಾಮ ಇಡೀ ಗ್ರಾಮವೇ ಸಂತ್ರಸ್ತವಾಗಿದ್ದು, ಅದೇ ಪರಿಸ್ಥಿತಿ ಪ್ರತಿ ಮಳೆಗಾಲದಲ್ಲೂ ಕಂಡು ಬರುತ್ತದೆ. ಭೂ ಕುಸಿತದ ಕಾರಣ ನಿಶಾನಿ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿದ್ದು, ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಇದೀಗ ಜಲ ಸ್ಫೋಟ ಉಂಟಾದ ಸ್ಥಳದಲ್ಲೇ ಅಂತರಜಲ ಉಕ್ಕಿ ತೊರೆಯಾಗಿ ಹರಿಯುತ್ತಿದ್ದು, ಭೀತಿ ಹುಟ್ಟಿಸುತ್ತಿದೆ. ಅತೀವ ಮಳೆ ಸುರಿದು ಬಿರುಕು ಬಿಟ್ಟ ಬೆಟ್ಟ ಪ್ರದೇಶ ಕುಸಿದು ಬಿದ್ದಲ್ಲಿ ಭಾರೀ ಅನಾಹುತವೊಂದು ಸಂಭವಿಸಲಿದ್ದು, ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಇದರ ಪರಿಣಾಮ ಬೀರಲಿದೆ.

ಘಟನಾ ಸ್ಥಳ ಪರಿಶೀಲನೆ: ಜಲಸ್ಫೋಟದಿಂದ ಸಿಲುಕಿರುವ 2ನೇ ಮೊಣ್ಣಂಗೇರಿ ಗ್ರಾಮಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಗ್ರಾಮ ಪಂಚಾಯಿತಿ ಪಿಡಿಓ ರವಿಕಿರಣ, ಕಂದಾಯ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಸೇತುವೆ ಹಾನಿ, ಭೂ ಕುಸಿತವಾದ ಸ್ಥಳ, ಬಿರುಕು ಬಿಟ್ಟ ಪ್ರದೇಶಕ್ಕೂ ತೆರಳಿದ ಶಾಸಕರು ಮತ್ತು ಅಧಿಕಾರಿಗಳು ವಾಸ್ತವ ಸ್ಥಿತಿಗತಿಗಳನ್ನು ವೀಕ್ಷಿಸಿದರು. ಗ್ರಾಮದ ಜನಸಂಖ್ಯೆ, ಒಟ್ಟು ಇರುವ ಮನೆಗಳು, ಅಪಾಯಕಾರಿ ಪ್ರದೇಶಗಳ ಕುರಿತು ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಜಿ ಬೋಪಯ್ಯ, ಈ ಭಾಗದಲ್ಲಿ ಅಪಾಯದಲ್ಲಿರುವ 32 ಮನೆಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿದ್ದು, ಕಾಟಕೇರಿಯ ಸರಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗುವುದು ಎಂದರು. ಕಳೆದ ಬಾರಿ ಭೂ ಕುಸಿತವಾಗಿ ಇಲ್ಲಿದ್ದ ಸೇತುವೆ ಕೊಚ್ಚಿ ಹೋಗಿದೆ. ಈಗ ಅದೇ ಸ್ಥಳದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪೂರ್ಣವಾಗದ ಹಿನ್ನೆಲೆ ಸಮಸ್ಯೆಯಾಗಿದೆ. ಸೇತುವೆಗೆ ಸಿಲುಕಿಕೊಂಡಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸಲು ಗ್ರಾಮಸ್ಥರಿಗೆ ತಿಳಿಸಿದ್ದು, ಅದಕ್ಕೆ ಸಂಬಳವನ್ನು ಗ್ರಾಮ ಪಂಚಾಯಿತಿ ಯಿಂದ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಅಲ್ಲದೇ ಪದೇ ಪದೆ ಇಲ್ಲಿ ಜಲಸ್ಫೋಟ ಸಂಭವಿಸುತ್ತಿರುವ ಹಿನ್ನೆಲೆ ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಕಂಡುಕೊಂಡು ಶಾಶ್ವತ ಪರಿಹಾರದ ಬಗ್ಗೆ ಚಿಂತಿಸಬೇಕಿದೆ ಎಂದರು. ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಮಾತನಾಡಿ, ರಾಮನಕೊಲ್ಲಿ ಸೇರಿದಂತೆ 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಒಟ್ಟು 132 ಮನೆಗಳಿವೆ. ಸದ್ಯ ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಜಲಸ್ಫೋಟ ಸಂಭವಿಸುತ್ತಿರುವ ಕುರಿತು ಅಧ್ಯಯನ ನಡೆಸಲು ತಜ್ಞರನ್ನು ಕರೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.

Translate »