ಮೈಸೂರು, ಮಾ.23(ವೈಡಿಎಸ್)- ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ವಿವಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೈಸೂರು ವಿವಿ ಮೊಹಲ್ಲಾ ವ್ಯಕ್ತಿಯೊಬ್ಬರು ಮಾ.22ರಂದು ಆಸ್ಟ್ರೇಲಿಯಾದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ವ್ಯಕ್ತಿಯ ಮುಂಗೈಗೆ ಸೀಲ್ ಹಾಕಿ, ಕೊರೊನಾ ಬಾಧಿತ ದೇಶದಿಂದ ಬಂದಿದ್ದರಿಂದ 14 ದಿನಗಳ ಕಾಲ ಮೈಸೂರಿನ ತಮ್ಮ ಮನೆಯಲ್ಲೇ ಹೋಂ ಕ್ವಾರಂಟೈನ್‍ಗೆ ಒಳಪಡಿಸಿ, ಏ.6ರವರೆಗೆ ಇರುವಂತೆ ಸೂಚಿಸಲಾಗಿತ್ತು.
ಆದರೆ, ಕೊರೊನಾ ಸೋಂಕು ಬಾಧಿತ ದೇಶದಿಂದ ಬಂದವನಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಇತರರಿಗೂ ಹರಡುತ್ತದೆಂದು ಗೊತ್ತಿದ್ದರೂ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವ ಜತೆಗೆ ಸಾರ್ವಜನಿಕರೊಂದಿಗೆ ಬೆರೆಯುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳ ನಿರ್ದೇಶನಾಲಯದ ಆದೇಶವನ್ನು ಉಲ್ಲಂಘಿಸಿ ದ್ದಾರೆ. ಈ ಕುರಿತು ಪ್ರಶ್ನಿಸಿದ ಸಾರ್ವಜನಿಕರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಹಾಗಾಗಿ ಆತನನ್ನು ವಿವಿಪುರಂ ಪೊಲೀಸರು ವಶಕ್ಕೆ ಪಡೆದು ಮೊ.ನಂ.41/ 2020 ಕಲಂ.188.269.271. ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.