ಕಿಕ್ಕೇರಿಯಲ್ಲಿ ಹೊನ್ನಾರು ಸಂಭ್ರಮ
ಮೈಸೂರು

ಕಿಕ್ಕೇರಿಯಲ್ಲಿ ಹೊನ್ನಾರು ಸಂಭ್ರಮ

April 27, 2021

ಕಿಕ್ಕೇರಿ, ಏ.26- ಹೊನ್ನಾರು ಸಂಭ್ರಮ ಕ್ಕಾಗಿ ಪಟ್ಟಣದ ಉಪ್ಪರಿಗೆ ಬಸವಣ್ಣನ ಗುಡಿಯ ಬಳಿ ರೈತಾಪಿ ಜನತೆ ಉತ್ತಮ ಬೇಸಾಯ ಮಾಡಲು ಮಳೆ ಬೆಳೆಯಾಗಲು ಪ್ರಾರ್ಥಿಸಿ ರಾಸುಗಳಿಗೆ ಪೂಜಿಸಿದರು.

ಆರಂಭದಲ್ಲಿ ಬಸವಣ್ಣ ದೇವರಿಗೆ ಅಗ್ರ ಪೂಜೆ ಸಲ್ಲಿಸಲಾಯಿತು. ಕಪ್ಪು ಹಾಗೂ ಬಿಳಿ ಎತ್ತುಗಳನ್ನು ಹುಡುಕಿ ತರಲಾಯಿತು. ಕಪ್ಪು ಬಿಳಿ ಹಸುಗಳು ಶುಭ ಸಂಕೇತ ವಾಗಿದ್ದು, ಗ್ರಾಮದಲ್ಲಿ ಸಮೃದ್ಧಿಯಾಗಿ ಕೃಷಿ ಚಟುವಟಿಕೆ ಆರಂಭವಾಗಲು ದೇವರಲ್ಲಿ ಪ್ರಾರ್ಥಿಸಲಾಯಿತು.
ಎತ್ತುಗಳನ್ನು ತೊಳೆದು, ಕೊಂಬು, ಮೈಗೆ ಎಣ್ಣೆ ಹಚ್ಚಲಾಯಿತು. ನೊಸಲಿಗೆ ಕುಂಕುಮ ಅರಿಷಿಣ ತಿಲಕವನ್ನು ಇಟ್ಟು ಕೊರಳಿಗೆ ಹೂಮಾಲೆ ತೊಡಿಸಲಾಯಿತು. ಕೊರಳಿಗೆ ನೊಗವನ್ನು ಕಟ್ಟಿ ನೇಗಿಲು ಹೂಡ ಲಾಯಿತು. ರಾಸುಗಳಿಗೆ ಆರತಿ ಎತ್ತಿ ಬಾಳೆಹಣ್ಣು ತಿನ್ನಿಸಲಾಯಿತು. ರಾಸುಗಳಿಗೆ ನಮಸ್ಕರಿಸಿ ಹೊನ್ನಾರಿಗೆ ಚಾಲನೆ ನೀಡಲಾಯಿತು.

ತಮಟೆ ವಾದ್ಯದೊಂದಿಗೆ ಹೊನ್ನಾರು ಸಂಭ್ರಮದ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ಊರ ಹೊರವಲಯದಲ್ಲಿರುವ ಕಿಕ್ಕೇರಮ್ಮ ಗುಡಿಗೆ ರಾಸುಗಳ ಮೆರವಣಿಗೆ ಸಾಗಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.

ರಾಸುಗಳಿಗೆ ರೋಗರುಜಿನ ಬಾರದಂತೆ, ಗ್ರಾಮದಲ್ಲಿ ಸಮೃದ್ಧಿಯಾಗಿ ಮಳೆ ಬೀಳಲಿ, ಉತ್ತಮ ಬೆಳೆ, ಫಸಲು ಲಭಿಸಲಿ. ರೈತನ ಬದುಕು ಹಸನಾಗಲಿ ಎಂದು ರೈತರು ಪ್ರಾರ್ಥಿಸಲಾಯಿತು. ಮುಖಂಡರಾದ ಶಿವರಾಮೇಗೌಡ, ಕೆ.ಟಿ. ಪುಟ್ಟೇ ಗೌಡ, ಉಮೇಶ್, ನಾಗೇಗೌಡ, ಮಂಜೇಗೌಡ, ಬಾಬು ಮೊದಲಾದವರು ಹಾಜರಿದ್ದರು.

Translate »