ಅಕ್ರಮ ಮರಳು ಸಂಗ್ರಹ; ನಾಲ್ವರ ಸೆರೆ, ಲಾರಿ ವಶ
ಮೈಸೂರು

ಅಕ್ರಮ ಮರಳು ಸಂಗ್ರಹ; ನಾಲ್ವರ ಸೆರೆ, ಲಾರಿ ವಶ

June 18, 2020

ಜೂಜು ಅಡ್ಡೆ ಮೇಲೆ ಡಿಸಿಐಬಿ ಪೊಲೀಸ್ ದಾಳಿ; ಐವರ ಸೆರೆ, 20,600 ರೂ. ವಶ
ಮೈಸೂರು,ಜೂ.17(ಎಂಟಿವೈ)- ಅಕ್ರಮ ಮರಳು ಸಂಗ್ರಹ ಮತ್ತು ಜೂಜು ಅಡ್ಡೆ ಮೇಲೆ ಪ್ರತ್ಯೇಕ ದಾಳಿ ನಡೆಸಿದ `ಜಿಲ್ಲಾ ಅಪರಾಧ ಪತ್ತೆ ದಳ’(ಡಿಸಿಐಬಿ) ಪೊಲೀಸರು ಒಟ್ಟು 9 ಮಂದಿಯನ್ನು ಬಂಧಿಸಿ, ಮರಳು ಲಾರಿ ಮತ್ತು ಜೂಜಿನಲ್ಲಿ ಪಣಕ್ಕಿಟ್ಟಿದ್ದ 20,600 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಮರಳು: ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮೇನಹಳ್ಳಿ ಬಳಿ ಬಸವಣ್ಣ ಎಂಬವರಿಗೆ ಸೇರಿದ ಜಮೀನಿನಲ್ಲಿ ಸೋಮಣ್ಣ, ನಾಗರಾಜ, ತ್ಯಾಗರಾಜ ಹಾಗೂ ಚಿಕ್ಕಣ್ಣ ಎಂಬವರು ಲಾರಿಯಲ್ಲಿ(ಕೆಎ03-ಸಿ6742) ಮರಳನ್ನು ಅಕ್ರಮವಾಗಿ ಸಾಗಿಸಿಕೊಂಡು ಬಂದು ಸಂಗ್ರಹಿಸಿಡುತ್ತಿದ್ದರು. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಡಿಸಿಐಬಿ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಸಿ.ರವಿಕುಮಾರ್ ಮತ್ತು ತಂಡ ಖಚಿತ ಮಾಹಿತಿ ಮೇರೆಗೆ ಹಠಾತ್ ದಾಳಿ ನಡೆಸಿತು. ಅಕ್ರಮ ಮರಳು ಸಾಗಣೆ ಮತ್ತು ಸಂಗ್ರಹ ಆರೋಪದಡಿ ನಾಲ್ವರನ್ನು ಬಂಧಿಸಿ, ಲಾರಿಯನ್ನು ವಶಕ್ಕೆ ಪಡೆಯಿತು. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು ಅಡ್ಡೆ ಮೇಲೆ: ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಬೀಚನಕೊಪ್ಪಲು ಬಳಿ ಪಾಳು ಜಮೀನಿನಲ್ಲಿ ನಡೆಸಲಾಗುತ್ತಿದ್ದ ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಡಿಸಿಐಬಿ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಸಿ.ರವಿಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಮಹದೇವು, ಸತೀಶ್, ಸುದರ್ಶನ್, ಕುಮಾರ, ಮಂಜುನಾಥ್ ಎಂಬವರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 20,600 ರೂ.ಗಳನ್ನು ವಶಪಡಿಸಿ ಕೊಂಡಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎರಡೂ ದಾಳಿಗಳಲ್ಲಿ ಡಿಸಿಐಬಿ ಸಿಬ್ಬಂದಿ ಹರೀಶ್‍ಕುಮಾರ್, ಬಿ.ಆರ್.ಸುನೀಲ್, ಎಂ.ಕೆ.ಸಂದೀಪ್, ಸಿ.ಎಸ್.ರಾಮ್‍ಪ್ರಸಾದ್, ಜೀಪ್ ಚಾಲಕ ಚಿಕ್ಕಲಿಂಗು ಪಾಲ್ಗೊಂಡಿದ್ದರು.

Translate »