ಮೈಸೂರಲ್ಲಿ ಕಿಡಿಗೇಡಿಗಳಿಂದ ಚಾ.ಬೆಟ್ಟ ತಪ್ಪಲು,  ಸಿವೇಜ್ ಫಾರಂ ಸೇರಿ ಐದು ಕಡೆ ಬೆಂಕಿ
ಮೈಸೂರು

ಮೈಸೂರಲ್ಲಿ ಕಿಡಿಗೇಡಿಗಳಿಂದ ಚಾ.ಬೆಟ್ಟ ತಪ್ಪಲು, ಸಿವೇಜ್ ಫಾರಂ ಸೇರಿ ಐದು ಕಡೆ ಬೆಂಕಿ

March 6, 2023

ಮೈಸೂರು, ಮಾ.5(ಎಂಟಿವೈ,ಜಿಎ)-ಕಿಡಿಗೇಡಿ ಗಳು ಹಚ್ಚಿರುವ ಬೆಂಕಿಗೆ ಚಾಮುಂಡಿ ಬೆಟ್ಟದ ತಪ್ಪಲು ಹಾಗೂ ನಾಲ್ಕು ಸ್ಥಳಗಳಲ್ಲಿ ಬೆಂಕಿ ಹೊತ್ತಿಕೊಂಡಿ ರುವ ಘಟನೆ ಮೈಸೂರಿನಲ್ಲಿ ಭಾನುವಾರ ನಡೆದಿದೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಗೌರಿ ಶಂಕರ ನಗರದ ಬಳಿ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೇಟಗಳ್ಳಿ ಕೈಗಾರಿಕಾ ಪ್ರದೇಶ, ಸಿವೇಜ್ ಫಾರಂ ಹಾಗೂ ಮೈಪಾಲ್ ಕೈಗಾರಿಕೆ ಬಳಿ ಕಿಡಿಗೇಡಿಗಳು ಹಚ್ಚಿರುವ ಬೆಂಕಿಗೆ ಸಾಕಷ್ಟು ಪ್ರಮಾಣದ ಹಾನಿ ಯುಂಟಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಪರಿಶ್ರಮದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಗೌರಿಶಂಕರ ನಗರದ ಬಳಿ ಭಾನುವಾರ ಕಿಡಿಗೇಡಿಗಳು ಖಾಲಿ ಜಾಗದಲ್ಲಿ ಹಚ್ಚಿದ್ದ ಬೆಂಕಿಯಿಂದಾಗಿ ಕೆಲಕಾಲ ಆತಂಕ ಉಂಟಾಗಿತ್ತು.

ಶನಿವಾರವಷ್ಟೇ ಚಾಮುಂಡಿಬೆಟ್ಟದಲ್ಲಿ ಕಿಡಿಗೇಡಿ ಗಳು ಹಚ್ಚಿದ್ದ ಬೆಂಕಿಗೆ ಹಲವು ಎಕರೆ ಅರಣ್ಯ ಭಸ್ಮ ವಾಗಿತ್ತು. ಮರು ದಿನವೇ ಬೆಟ್ಟದ ತಪ್ಪಲಿನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯಿಂದಾಗಿ ಚಾಮುಂಡಿಬೆಟ್ಟಕ್ಕೆ ಮತ್ತೊಮ್ಮೆ ಬೆಂಕಿ ಆವರಿಸುವ ಆತಂಕ ನಿರ್ಮಾಣ ವಾಗಿತ್ತು. ತಪ್ಪಲಿನಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಅರಣ್ಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದ ಬೆಟ್ಟಕ್ಕೆ ಬೆಂಕಿ ವ್ಯಾಪಿಸುವುದನ್ನು ತಡೆಗಟ್ಟಿದಂತಾಯಿತು.

ಬೆಟ್ಟಕ್ಕೆ ಹೊಂದಿಕೊಂಡಂತೆ ಇರುವ ಖಾಲಿ ಜಾಗದಲ್ಲಿ ಕೆಲವರು ಟೀ ಅಂಗಡಿಗಳಲ್ಲಿ ಬಳಸಿದ ಪೇಪರ್ ಲೋಟ ಹಾಗೂ ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯ ತಂದು ಬೆಂಕಿ ಹಚ್ಚುವುದು ಕಂಡು ಬಂದಿದೆ. ಬೆಳಗ್ಗೆ ಯಾರೋ ಸುಟ್ಟಿದ್ದ ಪ್ಲಾಸ್ಟಿಕ್ ಪೇಪರ್‍ನಿಂದ ಕಿಡಿ ಹೊತ್ತಿಕೊಂಡು ಬೆಂಕಿ ವ್ಯಾಪಿಸಿದೆ. ಬೇಸಿಗೆ ಆರಂಭ ವಾಗಿರುವುದರಿಂದ ರಸ್ತೆಬದಿ ಬೀಡಿ-ಸಿಗರೇಟ್ ಕಿಡಿ ನಂದಿಸದೆ ಎಸೆಯಬಾರದು. ಬೆಟ್ಟದ ತಪ್ಪಲಿನ ಖಾಲಿ ಜಾಗದಲ್ಲಿ ಸುಖಾಸುಮ್ಮನೆ ಬೆಂಕಿ ಹಚ್ಚದಂತೆ ಅರಣ್ಯ ಸಿಬ್ಬಂದಿಗಳು ಮನವಿ ಮಾಡಿದ್ದಾರೆ. ಅಲ್ಲದೆ, ರಸ್ತೆ ಬದಿ ಬೇಲಿಗಳಿಗೆ ಬೆಂಕಿ ಹಚ್ಚುವುದರಿಂದ ಪಕ್ಷಿ ಸಂಕುಲ ಮಾತ್ರವಲ್ಲದೆ, ಗಿಡ-ಮರಗಳು ಸುಟ್ಟು ಕರಕಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ನಗರದ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ್ ಪ್ರಿಸಿಷನ್ ಡೈಸ್ ಎಂಬ ಟೈರ್ ರೀ ಬಿಲ್ಟ್ ಕಾರ್ಖಾನೆಯಲ್ಲಿ ಇಂದು ಮಧ್ಯಾಹ್ನ ಸುಮಾರು 1.30ರ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಕಾರ್ಖಾನೆಯ ಆವರಣದಲ್ಲಿದ್ದ ಒಂದು ಕ್ಯಾಂಟರ್ ವಾಹನ ಮತ್ತು ಅಪಾರ ಪ್ರಮಾಣದ ಟೈರ್ ಗಳು ಮತ್ತು ಟೈರ್ ರೀ ಬಿಲ್ಟ್‍ನ ಪದಾರ್ಥಗಳು ನಾಶವಾಗಿದೆ. ಟೈರ್‍ಗಳಿಗೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿಯೇ ಇದ್ದ ಮಾಜಿ ಶಾಸಕ ವಾಸು ಅವರ ಒಡೆತನದ ಟಿಷ್ಯೂ ಕಾರ್ಖಾನೆಯ ಆವರಣಕ್ಕೆ ಹೊತ್ತಿಕೊಂಡಿತು. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ರೈಲ್ವೇ ಹಳಿಯೂ ಪಕ್ಕದಲ್ಲಿರುವುದನ್ನು ಗಮನಿಸಿ, ರೈಲ್ವೆ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಿಳಿಸಿದರು. ಇಲ್ಲದಿದ್ದರೆ, ಈ ಮಾರ್ಗದಲ್ಲಿ ಸಂಚರಿಸುವ ರೈಲಿಗೂ ಬೆಂಕಿ ತಗುಲಿ ಭಾರೀ ಅನಾಹುತವಾಗುತಿತು. ಹಾಗೇ ಕಾರ್ಖಾನೆ ಪಕ್ಕದಲ್ಲಿಯೇ ಜಯದೇವ ನಗರ ಬಡಾವಣೆ, ಜೆಎಸ್‍ಎಸ್ ಅರ್ಬನ್ ಹಾತ್ ಹಾಗೂ ಶಾಹಿ ಗಾರ್ಮೆಂಟ್ ಸಹ ಇದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಕ್ಕೆ ಬಂದು ಬೆಂಕಿ ನಂದಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ವಾಸು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಖಾನೆ ಹಾಗೂ ಸುತ್ತಮುತ್ತ ಆವರಿಸಿದ ಭಾರೀ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಆರು ಅಗ್ನಿಶಾಮಕ ವಾಹನಗಳನ್ನು ಬಳಸಿಕೊಂಡು ಸುಮಾರು ಮೂರು ಗಂಟೆಗೂ ಅಧಿಕ ಸಮಯ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದರು.
ಸುವೇಜ್ ಫಾರಂ: ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಸುವೇಜ್ ಫಾರಂ ಆವರಣದಲ್ಲಿ ಪ್ಲಾಸ್ಟಿಕ್ ರಾಶಿಗೆ ಬೆಂಕಿ ಹೊತ್ತಿಕೊಂಡಿದ್ದು, ಶಾಸಕ ರಾಮದಾಸ್ ಸ್ಥಳದಲ್ಲಿಯೇ ಮೊಕಾಮೂ ಹೂಡಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಸುಮಾರು 9.30ರಿಂದ 10 ಗಂಟೆಯ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿರುವ ಪ್ಲಾಸ್ಟಿಕ್ ರಾಶಿಗೆ ಬೆಂಕಿ ತಗುಲಿರುವುದರಿಂದ ಬೆಂಕಿಯನ್ನು ನಂದಿಸಲು ಕಷ್ಟಕರವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು 4 ಫೈರ್ ಇಂಜಿನ್ ಮತ್ತು ಜೆಟ್‍ಗಳನ್ನು ಬಳಸಿಕೊಂಡು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಬೆಂಕಿಯ ತೀವ್ರತೆ ನೋಡುತ್ತಿದ್ದರೆ, ಕಾರ್ಯಾಚರಣೆಯೂ ಇನ್ನೂ ನಾಲ್ಕು ಗಂಟೆಗೂ ಅಧಿಕ ಸಮಯ ನಡೆಯಲಿದೆ. ವಿಷಯ ತಿಳಿಯುತ್ತಿದ್ದಂತೆ ನಾನು ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೇನೆ ಎಂದರು.
ಇದೇ ರೀತಿ ಕಿಡಿಗೇಡಿಗಳು ಹಂಚಿದ ಬೆಂಕಿಗೆ ನಗರದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಕುಸುಮ ಪ್ಯಾಕೇಜ್ ಕಾರ್ಖಾನೆ, ಮೈ ಪಾಲ್ ಕಾರ್ಖಾನೆಯ ಬಳಿಯೂ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು 18ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳನ್ನು ಬಳಸಿಕೊಂಡು ಅಗ್ನಿಶಾಮಕ ದಳ ಸಿಬ್ಬಂದಿಗಳು ಯಶಸ್ವಿಯಾಗಿ ಬೆಂಕಿಯನ್ನು ನಂದಿಸಿದ್ದಾರೆ.

Translate »