ಕೋವಿಡ್ ಸೋಂಕು ಹೆಚ್ಚಳ ಅಧಿಕಾರಿಗಳು, ಆರೋಗ್ಯ  ತಜ್ಞರೊಂದಿಗೆ ಇಂದು ಸಿಎಂ ಸಭೆ
News

ಕೋವಿಡ್ ಸೋಂಕು ಹೆಚ್ಚಳ ಅಧಿಕಾರಿಗಳು, ಆರೋಗ್ಯ ತಜ್ಞರೊಂದಿಗೆ ಇಂದು ಸಿಎಂ ಸಭೆ

March 15, 2021

ಬೆಂಗಳೂರು,ಮಾ.14-ಇತ್ತೀಚೆಗೆ ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಅಧಿಕಾರಿಗಳು ಮತ್ತು ಆರೋಗ್ಯ ತಜ್ಞರ ಸಭೆ ಕರೆದಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಸಂಜೆ 5 ಗಂಟೆಗೆ ರಾಜ್ಯ ವಿಧಾನಸಭೆ ಮತ್ತು ಕಾರ್ಯದರ್ಶಿಗಳ ಸ್ಥಾನವಾಗಿರುವ ವಿಧಾನಸೌಧದಲ್ಲಿ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕ ಟಣೆಯಲ್ಲಿ ತಿಳಿಸಿದೆ. ಜನವರಿ 22ರ ನಂತರ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನ 900ಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಿನ್ನೆ ರಾಜ್ಯದಲ್ಲಿ ಒಟ್ಟೂ 921 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 630 ಕೇಸ್‍ಗಳು ಪತ್ತೆಯಾಗಿವೆ. ಕಳೆದ ಸೋಮವಾರದಿಂದ, ರಾಜ್ಯದಲ್ಲಿ 4,300ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ಒಟ್ಟೂ ಕೊರೊನಾ ಸೋಂಕಿತರ ಸಂಖ್ಯೆ 9,59,338ರಷ್ಟಿದ್ದು, 12,387 ಸಾವು ಸಂಭ ವಿಸಿದ್ದರೆ 9,38,890 ಮಂದಿ ಗುಣಮುಖವಾಗಿದ್ದಾರೆ. ಕಳೆದ ತಿಂಗಳು ಸುಮಾರು 4,000-5,000ರಷ್ಟಿದ್ದ ಸಕ್ರಿಯ ಪ್ರಕರಣಗಳು ಇದೀಗ 8,042ಕ್ಕೆ ಮುಟ್ಟಿದೆ. ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ವಿವಾಹ ಸೇರಿ ದಂತೆ ಶುಭ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆಗೆ ಸರ್ಕಾರ ಮಿತಿ ಹಾಕಿದೆ. ಕೊರೊನಾದ ಹೊಸ ಅಲೆ ಭೀತಿಯ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಹೊಸ ನಿಯಮಗಳ ಪ್ರಕಾರ, ಹೊರಾಂಗಣ ಜಾಗದಲ್ಲಿ ವಿವಾಹಕ್ಕೆ 500 ಮಂದಿಗೆ ಅವಕಾಶವಿರಲಿದೆ. ಹಾಲ್ ಅಥವಾ ಇನ್ನಿತರೆ ಒಳಾಂಗಣ ಪ್ರದೇಶವಾಗಿದ್ದರೆ ಕೇವಲ 200 ಜನರಿಗೆ ಮಾತ್ರ ಅವಕಾಶವಿರುತ್ತದೆ. ಅದೇ ರೀತಿ ಹುಟ್ಟುಹಬ್ಬದ ಆಚರಣೆಗಳಿಗೆ, ಹೊರಾಂಗಣದಲ್ಲಿ 100 ಮಂದಿಗೆ ಒಳಾಂಗಣದಲ್ಲಿ ಐವತ್ತು ಮಂದಿಗೆ ಮಾತ್ರ ಅವಕಾಶವಿರಲಿದೆ. ಅಂತ್ಯಕ್ರಿಯೆಗಳಿಗೆ ಕೇವಲ 50 ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಮುಕ್ತ ಸ್ಥಳಗಳಲ್ಲಿ ಧಾರ್ಮಿಕ ಮತ್ತು ರಾಜಕೀಯ ಕೂಟಗಳಿಗೆ ಗರಿಷ್ಠ 500 ಜನರಿಗೆ ಅವಕಾಶ ನೀಡಲಾಗುವುದು.
ನೈಟ್ ಕರ್ಫೂ ಬಗ್ಗೆ ಚರ್ಚೆ ಆಗಿಲ್ಲ: ಕೊರೊನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ ಕರ್ಫೂ ಜಾರಿ ಬಗ್ಗೆ ಇದುವರೆಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Translate »