ಕೇರಳ ಗಡಿ ಬಾವಲಿ ಚೆಕ್‍ಪೋಸ್ಟ್‍ನಲ್ಲಿ ಕಟ್ಟೆಚ್ಚರ
ಮೈಸೂರು

ಕೇರಳ ಗಡಿ ಬಾವಲಿ ಚೆಕ್‍ಪೋಸ್ಟ್‍ನಲ್ಲಿ ಕಟ್ಟೆಚ್ಚರ

February 24, 2021

ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಂದ ರಾಜ್ಯ ಪ್ರವೇಶಿಸುವವರ ಆರೋಗ್ಯ ತಪಾಸಣೆ; ಅಗತ್ಯ ಮುನ್ನೆಚ್ಚರಿಕೆ
ಮೈಸೂರು,ಫೆ.23(ಆರ್‍ಕೆ)-ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತವು ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ.

ಕರ್ನಾಟಕ-ಕೇರಳ ಗಡಿ ಭಾಗದ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‍ಪೋಸ್ಟ್ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ನಿಯೋಜಿಸಿ ಕೇರಳ ದಿಂದ ಬರುವವವರ ಆರೋಗ್ಯ ತಪಾಸಣೆ ಮಾಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಸ್ಥಳದಲ್ಲಿ ತಾತ್ಕಾಲಿಕ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಕೆಎಸ್‍ಆರ್ ಟಿಸಿ (ಕರ್ನಾಟಕ ಮತ್ತು ಕೇರಳ) ಬಸ್ಸುಗಳು, ಖಾಸಗಿ ಬಸ್ಸುಗಳು, ಟೆಂಪೋ, ಸರಕು ಸಾಗಣೆ ವಾಹನ, ದ್ವಿಚಕ್ರ ವಾಹನಗಳನ್ನು ತಡೆದು ನಿಲ್ಲಿಸಿ ಪ್ರಯಾಣಿಕರು ಎಲ್ಲಿಂದ ಬರುತ್ತಿ ದ್ದಾರೆ, ಪೂರ್ಣ ಮಾಹಿತಿ, ಆರ್‍ಪಿಸಿಆರ್ ಟೆಸ್ಟ್ ಮಾಡಿಸಲಾಗಿದೆಯೇ, ನೆಗೆಟಿವ್ ರಿಪೋರ್ಟ್ ಹೊಂದಿದ್ದಾರೆಯೇ ಎಂಬುದನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಮರನಾಥ್ ತಿಳಿಸಿದ್ದಾರೆ.

ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್, ಪಲ್ಸ್ ಆಕ್ಸಿಮೀಟರ್ ಟೆಸ್ಟ್ ಮಾಡುತ್ತಿದ್ದು, ಒಂದು ವೇಳೆ ವ್ಯತ್ಯಾಸ ಕಂಡುಬಂದಲ್ಲಿ ಅಥವಾ ಕೆಮ್ಮು, ನೆಗಡಿ, ಶೀತದಂತಹ ಲಕ್ಷಣಗಳು ಕಂಡುಬಂದಲ್ಲಿ ಅಂತಹವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ವೈದ್ಯಕೀಯ ತಪಾಸಣೆಗೊಳಪಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಆರೋಗ್ಯ ಇಲಾಖೆ ಸಿಬ್ಬಂದಿಯ ತಪಾಸಣಾ ಕಾರ್ಯಕ್ಕೆ ಸಹಕರಿಸಲು ಬಾವಲಿ ಚೆಕ್ ಪೋಸ್ಟ್‍ಗೆ ಜಿಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಪ್ರತೀ ಪಾಳಿಯಲ್ಲಿ ಓರ್ವ ಎಎಸ್‍ಐ, ಓರ್ವ ಹೆಡ್‍ಕಾನ್ ಸ್ಟೇಬಲ್, ಇಬ್ಬರು ಮಹಿಳಾ ಕಾನ್‍ಸ್ಟೇಬಲ್‍ಗಳನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಡಿವೈಎಸ್ಪಿ ಓರ್ವರನ್ನು ಪ್ರತೀ ದಿನ ಸ್ಥಳಕ್ಕೆ ತೆರಳಿ ಮೇಲ್ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

 

 

 

Translate »