ಕೆಆರ್‍ಎಸ್, ಕಬಿನಿ ಅಣೆಕಟ್ಟುಭರ್ತಿಗೆ ಒಂದೇ ಅಡಿ ಬಾಕಿ
ಮೈಸೂರು

ಕೆಆರ್‍ಎಸ್, ಕಬಿನಿ ಅಣೆಕಟ್ಟುಭರ್ತಿಗೆ ಒಂದೇ ಅಡಿ ಬಾಕಿ

July 11, 2022

ಮೈಸೂರು,ಜು.10(ಎಂಟಿವೈ)-ಕಾವೇರಿ ಕಣಿವೆ ಹಾಗೂ ಕೇರಳದ ವೈನಾಡು ಪ್ರದೇಶದಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೆಆರ್‍ಎಸ್ ಹಾಗೂ ಕಬಿನಿ ಅಣೆಕಟ್ಟೆ ಭರ್ತಿಗೆ ಕೇವಲ ಒಂದೇ ಅಡಿ ಬಾಕಿ ಇದ್ದು, ಎರಡೂ ಜಲಾಶಯಗಳ ಹಿತದೃಷ್ಟಿಯಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುತ್ತಿರುವುದರಿಂದ ನದಿ ಪಾತ್ರದ ಜನರು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಎಚ್ಚರಿಕೆಯ ಸಂದೇಶ ನೀಡಿದೆ.
ಭಾನುವಾರ ಸಂಜೆ ವೇಳೆಗೆ ಕೆಆರ್‍ಎಸ್ ಅಣೆ ಕಟ್ಟೆಯಿಂದ 27 ಸಾವಿರ ಕ್ಯೂಸೆಕ್ ನೀರನ್ನು ಹಾಗೂ ಕಬಿನಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುತ್ತಿರುವುದರಿಂದ ಎರಡೂ ನದಿ ಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ತಗ್ಗು ಪ್ರದೇಶಕ್ಕೆ ನೀರು ನುಗ್ಗುವ ಆತಂಕ ಹೆಚ್ಚಾಗಿದೆ. ಅಲ್ಲದೇ ನದಿಗೆ ಹೊಂದಿಕೊಂಡಂತೆ ಇರುವ ಗ್ರಾಮಗಳ ಜನರಿಗೂ ಎಚ್ಚರಿಕೆಯ ಸಂದೇಶ ನೀಡಲಾಗಿದ್ದು, ನದಿಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿಕೊಡಲಾಗಿದೆ.

ಜೀವನದಿ ಕಾವೇರಿ ಉಗಮ ಸ್ಥಳ ಭಾಗಮಂಡಲ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಭಾನುವಾರವೂ ಮುಂದುವರೆದಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ದಿನ ದಿಂದ ದಿನಕ್ಕೆ ಕೆಆರ್‍ಎಸ್ ಜಲಾಶಯಕ್ಕೆ ಒಳ ಹರಿ ವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲೇ ಕೆಆರ್‍ಎಸ್ ಅಣೆಕಟ್ಟು ಭರ್ತಿಯಾಗುತ್ತಿದ್ದು, ಕೇವಲ ಒಂದು ಅಡಿ ಮಾತ್ರ ಬಾಕಿ ಉಳಿದಿದೆ. ಭಾನುವಾರ ಸಂಜೆ ವೇಳೆಗೆ ಒಳ ಹರಿವಿನ ಪ್ರಮಾಣ 42,633 ಕ್ಯೂಸೆಕ್‍ನಷ್ಟು ದಾಖ ಲಾಗಿದ್ದರೆ, ಅಣೆಕಟ್ಟೆಯ ಭದ್ರತೆಯ ನಿಟ್ಟಿನಲ್ಲಿ 15 ಗೇಟ್‍ಗಳಿಂದ ನದಿಗೆ 26,143 ಕ್ಯೂಸೆಕ್, ಕಾಲುವೆ ಗಳಿಗೆ 1,560 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಒಟ್ಟು 27,753 ಕ್ಯೂಸೆಕ್ ನೀರು ಅಣೆಕಟ್ಟೆಯಿಂದ ಹೊರಗೆ ಬಿಡಲಾಗುತ್ತಿರುವುದರಿಂದ ಒಳ ಮತ್ತು ಹೊರ ಹರಿವಿನ ಸಮತೋಲನ ಕಾಪಾಡಿಕೊಳ್ಳಲಾಗಿದೆ. ಕೆಆರ್‍ಎಸ್ ಅಣೆಕಟ್ಟೆಯಿಂದ ಭಾರೀ ಪ್ರಮಾಣದ ನೀರು ಹೊರ ಬಿಡುತ್ತಿರುವ ಹಿನ್ನೆಲೆ ಯಲ್ಲಿ ನದಿ ಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಹೆಚ್ಚಾಗಿದೆ. ಮಳೆ ಕಾವೇರಿ ಕಣಿವೆಯಲ್ಲಿ ಮುಂದುವರೆಯುವ ಮುನ್ಸೂಚನೆ ಇರುವುದರಿಂದ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ ಇನ್ನೂ ಹೆಚ್ಚಾ ಗುವ ಸಾಧ್ಯತೆ ಇದೆ. ಅದರ ಜೊತೆಗೆ ಡ್ಯಾಂನಿಂದ ಬಿಡುವ ನೀರಿನ ಪ್ರಮಾಣವೂ ಹೆಚ್ಚಾಗುವುದರಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಉಲ್ಬಣಗೊಳ್ಳ ಲಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ತಗ್ಗು ಪ್ರದೇಶದಲ್ಲಿ ಪ್ರವಾಹದ ಭೀತಿ ಉಂಟಾಗುವ ಆತಂಕವಿದೆ.

ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿ ತಾಣಗಳ ಲ್ಲೊಂದಾಗಿರುವ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾ ಹದ ಭೀತಿ ಹೆಚ್ಚಾಗಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ದೋಣಿ ವಿಹಾರವನ್ನು ನಿರ್ಬಂಧಿಸ ಲಾಗಿದೆ. ಆದರೆ ಪಕ್ಷಿಧಾಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೂ ಪಕ್ಷಿಧಾಮದಲ್ಲಿ ಪ್ರವಾಸಿಗರ ಹಿತ ದೃಷ್ಟಿಯಿಂದ ಕೆಲವು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೊಳಿಸಲಾಗಿದೆ. ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಪ್ರವೇಶ ದ್ವಾರದಲ್ಲೇ ದೋಣಿ ವಿಹಾರ ಬಂದ್ ಆಗಿರುವ ಮಾಹಿತಿಯನ್ನು ನೀಡಲಾಗುತ್ತಿದೆ. ಆ ಬಳಿಕ ಸಮ್ಮತಿಸಿದ ಪ್ರವಾಸಿಗರು ಟಿಕೆಟ್ ಪಡೆದು ಪಕ್ಷಿಧಾಮವನ್ನು ಪ್ರವೇಶಿಸುತ್ತಿದ್ದಾರೆ.

ವೀಕ್ಷಣೆಗೆ ಅವಕಾಶ: ಈ ಕುರಿತು ಡಿಸಿಎಫ್ ಡಾ. ವಿ.ಕರಿಕಾಳನ್ ಮಾತನಾಡಿ, ಕಾವೇರಿ ನದಿಯಲ್ಲಿ ಹೊರ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ನಿನ್ನೆಯಿಂದ (ಜು.9) ಬೋಟಿಂಗ್ ದೋಣಿ ವಿಹಾರ ವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಪ್ರವಾಸಿಗರು ಪಕ್ಷಿಧಾಮವನ್ನು ವೀಕ್ಷಿಸಬಹುದು. ಹಲವು ಪರಗೋಲ ಗಳಿದ್ದು, ಅವುಗಳಲ್ಲಿ ವಿಶ್ರಾಂತಿ ಪಡೆಯಬಹುದು. ಇದರೊಂದಿಗೆ ಬ್ಯಾಟರಿ ಚಾಲಿತ ವಾಹನವಿದ್ದು, ಅದರ ಸವಾರಿ ಮಾಡಬಹುದಾಗಿದೆ. ಮಾಹಿತಿ ಕೇಂದ್ರದಲ್ಲೂ ಉತ್ತಮವಾದ ಮಾಹಿತಿಯನ್ನು ಪಡೆದುಕೊಳ್ಳಬಹು ದಾಗಿದೆ. ಮುಂಜಾಗ್ರತಾ ಕ್ರಮವಾಗಿ ದೋಣಿ ವಿಹಾರವನ್ನು ನಿಷೇಧಿಸಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಕುಗ್ಗಿದ ಬಳಿಕ ದೋಣಿ ಯಾನವನ್ನು ಪುನರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಮುಂಬರುವ ಎರಡು ದಿನಗಳಲ್ಲೂ ಮೋಡ ಮುಸುಕಿದ ವಾತಾವರಣ ದೊಂದಿಗೆ ತುಂತುರು ಹಾಗೂ ಸಾಧಾರಣ ಮಳೆ ಬೀಳಲಿದೆ. ಕೊಡಗು ಜಿಲ್ಲೆಯಲ್ಲಿ ಜು.11 (ಸೋಮ ವಾರ)ರಂದು ಗರಿಷ್ಠ 43 ಮಿ.ಮೀ., ಜು.12ರಂದು 38 ಮಿ.ಮೀ., ಜು.13ರಂದು 39 ಮಿ.ಮೀ. ಮಳೆ ಯಾಗಲಿದೆ. ಮೈಸೂರು ಜಿಲ್ಲೆಯಲ್ಲಿ 5 ರಿಂದ 8 ಮಿ.ಮೀ. ಮಳೆಯಾಗಲಿದೆ. ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿಯೂ ಸಾಧಾರಣ ಮಳೆಯಾಗುವುದರಿಂದ ಜನರು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹವಾ ಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಹೆಚ್.ಡಿ.ಕೋಟೆ: ಕೇರಳದಲ್ಲಿ ಉತ್ತಮ ಮಳೆಯಾಗು ತ್ತಿರುವ ಹಿನ್ನಲೆಯಲ್ಲಿ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುನ್ನೆಚ್ಚ ರಿಕಾ ಕ್ರಮವಾಗಿ ಕಬಿನಿ ಜಲಾಶಯದ 4 ಕ್ರಸ್ಟ್ ಗೇಟ್ ಗಳ ಮೂಲಕ 20 ಸಾವಿರ ಕ್ಯೂಸೆಕ್ ನೀರು ಹಾಗೂ ಸುಭಾಷ್ ಕಬಿನಿ ಪವರ್ ಪ್ರಾಜೆಕ್ಟ್(ವಿದ್ಯುತ್ ಉತ್ಪಾ ದನಾ ಘಟಕ)ನಿಂದ 5 ಸಾವಿರ ಕ್ಯೂಸೆಕ್ ಸೇರಿದಂತೆ ಒಟ್ಟು 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಕಬಿನಿ ಸಹಾಯಕ ಇಂಜಿ ನಿಯರ್ ರಮೇಶ್ ಬಾಬು ತಿಳಿಸಿದ್ದಾರೆ.

ಕಬಿನಿ ಜಲಾಶಯವು 2284 ಅಡಿ ಇದ್ದು, ಅದರಲ್ಲಿ ಭಾನುವಾರ ಸಂಜೆ ವೇಳೆಗೆ 2283 ಅಡಿ ಭರ್ತಿ ಯಾಗಿದೆ. ಜಲಾಶಯದ ಪೂರ್ಣ ಭರ್ತಿಗೆ ಕೇವಲ 1 ಅಡಿ ಬಾಕಿ ಇದ್ದು, 26,586 ಕ್ಯೂಸೆಕ್‍ಗಿಂತ ಹೆಚ್ಚಿನ ನೀರು ಡ್ಯಾಂಗೆ ಹರಿದು ಬರುತ್ತಿದೆ. ಇದರಿಂದ ಡ್ಯಾಂನ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡು 25 ಸಾವಿರ ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಬಿಡ ಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯ ದಲ್ಲಿ 2276 ಅಡಿ ನೀರು ಸಂಗ್ರಹವಾಗಿತ್ತು. ಅಲ್ಲದೇ 996 ಕ್ಯೂಸೆಕ್ಸ್ ಒಳಹರಿವು, 700 ಸಾವಿರ ಕ್ಯೂಸೆಕ್ಸ್ ಹೊರ ಹರಿವಿತ್ತು ಎಂದರು.

ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದ್ದು, ಜಲಾಶಯದ ಮುಂಭಾಗವಿರುವ ಬಿದರಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿ ನಿಂದ ಆವೃತ್ತವಾಗಿದ್ದು, ಆ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ನಿರ್ಬಂಧಿಸಿ ಪೊಲೀಸ್ ಪಹರೆ ಹಾಕಲಾಗಿದೆ. ಅಲ್ಲದೇ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಬಿದರಹಳ್ಳಿ ಗ್ರಾ.ಪಂ. ಎನ್. ಬೇಗೂರು ಗ್ರಾ ಪಂ ವ್ಯಾಪ್ತಿಯ 50 ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆ ಭಾಗದ ಜನತೆರಿಗೆ ಜಲಾಶಯದ ಅಣೆಕಟ್ಟೆಯ ಮೇಲೆ ಓಡಾಡುವ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಜಲಾಶಯಕ್ಕೆ ಮುಗಿಬಿದ್ದ ಪ್ರವಾಸಿಗರು: ಕೇರಳದಲ್ಲಿ ಉತ್ತಮ ಮಳೆಯಾಗಿಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಕಬಿನಿ ಸೊಬಗನ್ನು ಸವಿಯಲು ಆಗಮಿಸುತ್ತಿದ್ದಾರೆ. ಜಲಾಶಯಕ್ಕೆ ಅಧೀಕ್ಷಕ ಇಂಜಿನಿ ಯರ್ ಶಿವಮಾರಯ್ಯ ಭೇಟಿ ನೀಡಿ ಕಾರ್ಯಪಾಲಕ ಅಭಿಯಂತರದ ಚಂದ್ರಶೇಖರ್, ಸಹಾಯಕ ಕಾರ್ಯ ಪಾಲಕ ಅಭಿಯಂತರದ ಜನಾರ್ಧನ್, ಸಹಾಯಕ ಇಂಜಿನಿಯರ್‍ಗಳಾದ ರಮೇಶ್ ಬಾಬು, ವಿಶ್ವನಾಥ್, ಹಾಗೂ ಗೇಜ್ ಆಪರೇಟರ್ ನಾಗರಾಜು ಅಣೆಕಟ್ಟೆಗೆ ಒಳ ಮತ್ತು ಹೊರ ಹರಿವಿನ ನೀರಿನ ಪ್ರಮಾಣದ ಸಮತೋಲನದ ಸೂಕ್ಷ್ಮತೆಯನ್ನು ಗ್ರಹಿಸಿ ಕಟ್ಟೆಚ್ಚರ ದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

Translate »