ಕೆಎಸ್‍ಆರ್‍ಟಿಸಿ ಸಿಬ್ಬಂದಿಯಿಂದ ಇಂದು `ವಿಧಾನಸೌಧ ಚಲೋ’
ಮೈಸೂರು

ಕೆಎಸ್‍ಆರ್‍ಟಿಸಿ ಸಿಬ್ಬಂದಿಯಿಂದ ಇಂದು `ವಿಧಾನಸೌಧ ಚಲೋ’

December 10, 2020

ಮೈಸೂರು,ಡಿ.9(ಎಸ್‍ಪಿಎನ್)-ಸಾರಿಗೆ ಸಂಸ್ಥೆ ಸಿಬ್ಬಂದಿ ಯನ್ನು `ಸರ್ಕಾರಿ ನೌಕರರು’ ಎಂದು ಪರಿಗಣಿಸಬೇಕು ಮತ್ತಿತರೆ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಡಿ.10ರಂದು `ವಿಧಾನಸೌಧ ಚಲೋ’ಗೆ ಮುಂದಾಗಿರುವ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮಹಾಮಂಡಳಕ್ಕೆ ಮೈಸೂರು ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ.

ಸಂಘಟನೆ ಕಾರ್ಯದರ್ಶಿ ಮಹಾಂತೇಶ್ ಮಾತ ನಾಡಿ, 1992ರಿಂದ ಈವರೆಗೂ ಯಾವುದೇ ಕೈಗಾರಿಕಾ ಒಪ್ಪಂದ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ವೇತನವನ್ನು ಏಕಪಕ್ಷೀಯವಾಗಿ ಪರಿಷ್ಕರಿಸ ಲಾಗಿದೆ. ಇದರಿಂದ ಸಿಬ್ಬಂದಿಗೆ ಅನ್ಯಾಯವಾಗಿದೆ ಎಂದು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಕೆಎಸ್‍ಆರ್‍ಟಿಸಿ ನೌಕರರ ವೇತನ ಹೆಚ್ಚಳ ಸಂಬಂಧ 4 ವರ್ಷಕ್ಕೊಮ್ಮೆ ನಿಗಮ ಮತ್ತು ನೌಕರರ ಸಂಘಟನೆ ಗಳೊಂದಿಗೆ ಒಪ್ಪಂದ ಆಗಬೇಕು. 2020ರ ಜ.1ರಂದು ವೇತನ ಪರಿಷ್ಕರಣೆಯ ಮಾತುಕತೆ ನಡೆಯಬೇಕಿತ್ತು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆ ಸಭೆಯೂ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉನ್ನತ ಅಧಿಕಾರಿಗಳು ಕೈಗೊಂಡ ಏಕಪಕ್ಷೀಯ ವೇತನ ಪರಿಷ್ಕರಣೆ ಕ್ರಮದಿಂದಾಗಿ ಸಿಬ್ಬಂದಿಯ ಸಂಬಳ ಸರ್ಕಾರಿ ನೌಕರರ ವೇತನಕ್ಕಿಂತಲೂ ಶೇ.40ರಷ್ಟು ಕಡಿಮೆ ಇದೆ. ಕಾರ್ಮಿಕ ಮುಖಂಡರ ಒಡಕಿನ ಲಾಭ ಪಡೆದ ಹಿರಿಯ ಅಧಿಕಾರಿಗಳು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಕಡಿಮೆ ವೇತನ ನಿಗದಿಗೆ ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ 4 ಸಾರಿಗೆ ನಿಗಮಗಳ ಆದಾಯ ಕುಸಿದಿದೆ. ನೌಕರರಿಗೆ ವಿಶೇಷ ಭತ್ಯೆ ಸಿಗುತ್ತಿಲ್ಲ. ಸಂಸ್ಥೆಯಲ್ಲಿ ನೌಕರರ ಪ್ರತಿ ತಿಂಗಳ ಸಂಬಳಕ್ಕೆ ಅನುದಾನ ಪಡೆಯಲು ಸರ್ಕಾರದತ್ತ ಮುಖ ಮಾಡುವ ಸ್ಥಿತಿ ಇದೆ. ನೌಕರರ ಆರ್ಥಿಕ ಸ್ಥಿತಿ ಪೂರ್ಣ ಹದಗೆಟ್ಟಿದೆ. ಹಾಗಾಗಿ ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಡಿ.10ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ `ವಿಧಾನಸೌಧ ಚಲೋ’ ಹಮ್ಮಿಕೊಂಡಿದ್ದು, ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಎಂ.ಮಲ್ಲಯ್ಯ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಿ.ನಾಗಪ್ರಸಾದ್, ಸಂಘಟನಾ ಕಾರ್ಯದರ್ಶಿ ರಂಗಪ್ಪ ನೇತೃತ್ವದಲ್ಲಿ ಸಿಬ್ಬಂದಿ ಭಾಗಿ ಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

Translate »