ಕುಶಾಲನಗರ ಹಾಗೂ ಸುತ್ತಲಿನ ಗ್ರಾಮಗಳು ಸಂಪೂರ್ಣ ಬಂದ್
ಕೊಡಗು

ಕುಶಾಲನಗರ ಹಾಗೂ ಸುತ್ತಲಿನ ಗ್ರಾಮಗಳು ಸಂಪೂರ್ಣ ಬಂದ್

April 26, 2021

ಕುಶಾಲನಗರ, ಏ.25- ತಾಲೂಕು ಕೇಂದ್ರ ಕುಶಾಲ ನಗರ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾನು ವಾರ ವೀಕೆಂಡ್ ಕರ್ಫ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಯಿತು.

ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದ್ದರೂ ಕೆಲವರು ಅನಗತ್ಯವಾಗಿ ಓಡಾಟ ಮಾಡುತ್ತಿದ್ದ ದೃಶ್ಯ ಕೆಲವೆಡೆ ಕಂಡು ಬಂದಿತು. ಟೋಲ್‍ಗೇಟ್ ಬಳಿ ಸುಕಸುಮ್ಮನೆ ಬೈಕ್ ನಲ್ಲಿ ಓಡಾಡುವ ಯುವರಿಗೆ ಪಿಎಸ್‍ಐ ಗಣೇಶ್ ಲಾಠಿ ರುಚಿ ತೋರಿಸಿದರು. ಪಟ್ಟಣದಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು.

ಜನಜಂಗುಳಿಯಿಂದ ಹಾಗೂ ವಾಹನ ಸಂಚಾರ ದಿಂದ ಕೂಡಿದ್ದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.

ಅಗತ್ಯ ಸೇವೆಗಳಾದ ಔಷಧ ಅಂಗಡಿ,ಆಸ್ಪತ್ರೆಗಳು ತೆರೆದಿದ್ದವು. ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿಗಳಾದ ಗಣೇಶ್, ಶಿವಶಂಕರ್ ಹಾಗೂ ಸಿಬ್ಬಂದಿಗಳು ಭದ್ರತಾ ವ್ಯವಸ್ಥೆ ಸಲ್ಲಿಸಿದ್ದರು.

ಅಗತ್ಯ ವಸ್ತು ಖರೀದಿಗೆ ಅವಕಾಶ : ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಜನರು ಖರೀದಿಸಿದರು.
ಮಾಂಸ ಖರೀದಿಗಾಗಿ ಮುಗಿಬಿದ್ದ ಜನತೆ : ಮಹಾ ಮಾರಿ ಕೊರೊನಾ ರಾಜ್ಯದಲ್ಲಿ ಮರಣ ಮೃದಂಗ ಬಾರಿ ಸುತ್ತಿದೆ. ವೀಕೆಂಡ್ ಕಫ್ರ್ಯೂ ಸಡಿಲಿಕೆ ಸಿಕ್ಕ ತಕ್ಷಣವೇ ಜನರು ಭಾನು ವಾರದ ಬಾಡೂಟಕ್ಕೆ ಮಾಂಸ ಖರೀದಿಗಾಗಿ ಮುಗಿಬಿದ್ದರು.

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋಳಿ ಮಾಂಸ ಕೆಜಿಗೆ ರೂ 99 ಎಂಬ ನಾಮಫಲಕ ನೋಡಿ ಜನರು ಕೋವಿಡ್ ಮಾರ್ಗ ಸೂಚಿಯನ್ನು ಉಲ್ಲಂಘಿಸಿ ಮಾಂಸ ಖರೀದಿಸಲು ಮುಂದಾದರು. ಮಾಂಸ ಖರೀದಿಸಲು ನಿಯಮ ಉಲ್ಲಂಘನೆ ರಾಜರೋಷ ವಾಗಿ ನಡೆಯುತ್ತಿದ್ದರೂ ಕೂಡ ಸ್ಥಳೀಯ ಗ್ರಾಮ ಪಂಚಾ ಯಿತಿ ಆಡಳಿತವಾಗಲಿ ಅಥವಾ ಅಭಿವೃದ್ಧಿ ಅಧಿಕಾರಿ ಯಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದರು.

ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶಕ್ಕೆ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಹಣ್ಣುಹಂಪಲು, ತರಕಾರಿ,ದಿನಸಿ ಹಾಗೂ ಮಾಂಸ ಖರೀದಿಗೆ ಅವಕಾಶ ನೀಡಲಾಗಿತ್ತು.ಆದರೆ ಜನರು ಯಾವುದೇ ಅಂತರ ಕಾಯ್ದುಕೊಳ್ಳದೆ,ಮಾಸ್ಕ್ ಧರಿಸದೆ ಗುಂಪುಗುಂಪಾಗಿ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬಂದವು.

Translate »