ನಾಯಕತ್ವ ಬದಲಾವಣೆ: ಪಕ್ಷದ ತೀರ್ಮಾನಕ್ಕೆ ಬದ್ಧ
ಮೈಸೂರು

ನಾಯಕತ್ವ ಬದಲಾವಣೆ: ಪಕ್ಷದ ತೀರ್ಮಾನಕ್ಕೆ ಬದ್ಧ

May 27, 2021

ಆರ್‍ಎಸ್‍ಎಸ್ ರಾಷ್ಟ್ರೀಯ ಹಿರಿಯ ಸಂಚಾಲಕ ಮುಕುಂದಜೀ ಅವರಲ್ಲಿ ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ
ಪಕ್ಷದ ನಿರ್ಧಾರಕ್ಕೆ ತಲೆಬಾಗಿ: ಆರ್‍ಎಸ್‍ಎಸ್ ಸಲಹೆ

ಬೆಂಗಳೂರು,ಮೇ 26(ಕೆಎಂಶಿ)-ನಾಯಕತ್ವ ಬದಲಾವಣೆ ವಿಷಯದಲ್ಲಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಆರ್‍ಎಸ್‍ಎಸ್‍ನ ರಾಷ್ಟ್ರೀಯ ಹಿರಿಯ ಸಂಚಾಲಕ ಮುಕುಂದಜೀ ಅವರನ್ನು ಕಳೆದ ಎರಡು ಮೂರು ದಿನಗಳ ಹಿಂದೆ ಭೇಟಿ ಮಾಡಿದ ಮುಖ್ಯಮಂತ್ರಿಯವರು ಅಧಿಕಾರ ದಲ್ಲಿ ಮುಂದುವರೆಸುವ ಇಲ್ಲವೆ ಬಿಡುವ ತೀರ್ಮಾನಕ್ಕೆ ನಾನು ಪಕ್ಷದ ನಿರ್ಧಾರಕ್ಕೆ ಅಚಲನಾಗಿರುತ್ತೇನೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿನ ನಾಯಕತ್ವ ಬದಲಾವಣೆಗೆ ದೆಹಲಿ ನಾಯಕರು ಮುಂದಾಗಿರುವ ಬೆನ್ನಲ್ಲೇ ಯಡಿ ಯೂರಪ್ಪ ಅವರು, ತಮ್ಮ ನಿಲುವು ಸ್ಪಷ್ಪಪಡಿಸುವ ಮೂಲಕ ಎಲ್ಲ ಊಹಾಪೋಹ ಹಾಗೂ ಭಿನ್ನಮತಕ್ಕೆ ತೆರೆ ಎಳೆದಿದ್ದಾರೆ.
ಜುಲೈ 26, 2021ಕ್ಕೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನವರು 2 ವರ್ಷಗಳ ಅವಧಿ ಪೂರ್ಣಗೊಳಿಸುತ್ತಾರೆ. ಅದಕ್ಕೂ ಮುನ್ನವೇ ಇಲ್ಲವೇ ನಂತರ ರಾಜ್ಯದ ಆಡಳಿತದ ಚುಕ್ಕಾಣಿ ಹೊಸ ನಾಯಕರಿಗೆ ಹಸ್ತಾಂತರಗೊಳ್ಳಲಿದೆ. ವಯೋಮಿತಿ ಮೀರಿದರೂ ಪಕ್ಷದ ನಿಯಮಾವಳಿಯನ್ನು ಬದಿಗಿರಿಸಿ, ವಿಶೇಷ ಪ್ರಕರಣ ಎಂದು ಪರಿಗಣಿಸಿ, ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ವರಿಷ್ಠರು ನೇಮಕ ಮಾಡಿದ್ದರು ಎಂಬುದನ್ನು ಮಾತುಕತೆ ಸಂದರ್ಭದಲ್ಲಿ ಮುಕುಂದಜೀ ಅವರು ಯಡಿಯೂರಪ್ಪನವರ ಗಮನಕ್ಕೆ ತಂದಿದ್ದಾರೆ.
ನಿಮಗೆ ಪಕ್ಷ ನೀಡಿದ್ದ ಅವಧಿ ಮುಗಿಯುತ್ತಾ ಬಂದಿದೆ. ಪಕ್ಷದ ಆದೇಶಕ್ಕೆ ತಲೆಬಾಗಿ ಅಧಿಕಾರದಿಂದ ಗೌರವಯುತ ವಾಗಿ ನಿರ್ಗಮಿಸಿ. ಪಕ್ಷ ನಿಮ್ಮನ್ನು ಮುಂದೆ ಗೌರವ ಯುತವಾಗಿ ನಡೆಸಿಕೊಳ್ಳುತ್ತದೆ ಎಂಬ ಭರವಸೆಯನ್ನು ಮುಕುಂದಜೀ ಅವರು ನೀಡಿದ್ದಾರೆ. ಯಾವುದೇ ಷರತ್ತು ಗಳನ್ನು ಪಕ್ಷದ ಮುಂದೆ ಇಡಬೇಡಿ. ನಿಮ್ಮ ಪುತ್ರ ವಿಜ ಯೇಂದ್ರ ರಾಜಕೀಯವಾಗಿ ಬೆಳೆಯಲು ಇನ್ನೂ ಸಮಯ ವಿದೆ. ಆತುರ ಮತ್ತು ದುಡುಕು ನಿರ್ಧಾರಗಳು ಬೇಡ. ಆತನಿಗೂ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ ಎಂಬು ದನ್ನು ಮುಕುಂದಜೀ ಮುಖ್ಯ ಮಂತ್ರಿಯವರ ಗಮನಕ್ಕೆ ತಂದಿದ್ದಾರೆ.

ಪಕ್ಷ ಮುಂದೆ ನಿಮಗೆ ಏನು ಆದೇಶ ನೀಡುತ್ತ ದೆಯೋ ಅದರಂತೆ ನಡೆದುಕೊಳ್ಳಿ. ಪರ್ಯಾಯ ಅಧಿಕಾರ ನೀಡಿದರೆ, ಅದನ್ನೂ ಸ್ವೀಕರಿಸಿ ಎಂದಿದ್ದಾರೆ. ಮುಕುಂದಜೀ ಅವರ ಮಾತುಗಳಿಗೆ ಮನ್ನಣೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನಾನು ಪಕ್ಷದಿಂದ ಹೊರ ಹೋಗಿ, ಒಳಗೆ ಬಂದ ನಂತರವೂ ಅಧಿಕಾರ ನೀಡಿದ್ದೀರಿ. ಅದನ್ನು ನಾನು ಮರೆಯುವುದಿಲ್ಲ. ನನ್ನ ಪುತ್ರ ವಿಜಯೇಂದ್ರನ ಬೆಳವಣಿಗೆಯ ಬಗ್ಗೆಯು ನಾನು ದೂರದೃಷ್ಟಿ ಇಟ್ಟುಕೊಂಡಿ ದ್ದೇನೆ. ಆತನಿಗೆ ಅಧಿಕಾರ ನೀಡುವ ವಿಚಾರ ನಿಮಗೆ ಬಿಡು ತ್ತೇನೆ. ಮುಂದೆ ಪಕ್ಷದ ಹಿತದೃಷ್ಟಿಯಿಂದ ಕೆಲವು ಸಲಹೆಗಳನ್ನು ನೀಡಿದರೆ ಪರಿಶೀಲಿಸಿ ಎಂದಿದ್ದಾರೆ. ಮುಕುಂದಜೀ ಅವರ ಭೇಟಿಯ ನಂತರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಸಂಪರ್ಕಿಸಿ, ಮುಖ್ಯಮಂತ್ರಿಯವರು ಚರ್ಚೆ ಮಾಡಿದ್ದಾರೆ. ಈ ಮಧ್ಯೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್‍ನಾರಾಯಣ್‍ಗೆ ಪಕ್ಷವೇ ಹೆಚ್ಚು ಅಧಿಕಾರವನ್ನು ನೀಡಿ, ಕೋವಿಡ್ ವಿರುದ್ಧ ಹೋರಾಡಲು ಹೊಣೆಗಾರಿಕೆ ಯನ್ನು ಅವರಿಗೆ ನೀಡಿದೆ. ಅಷ್ಟೇ ಅಲ್ಲದೆ ಅಶ್ವತ್ಥ್ ನಾರಾಯಣ್ ಅವರ ಆದೇಶಗಳನ್ನು ಅಧಿಕಾರಿಗಳು ಪಾಲಿಸಬೇಕೆಂದು ಕೇಂದ್ರದ ಸೂಚನೆಯೂ ಬಂದಿದೆ. ಈ ಹಿನ್ನೆಲೆಯಲ್ಲೇ ಕಳೆದ 15 ದಿನಗಳಿಂದ ಡಾ.ಅಶ್ವತ್ಥ್‍ನಾರಾಯಣ್ ಅವರು, ಅವಿರತವಾಗಿ ಕೋವಿಡ್ -19ರ ವಿರುದ್ಧ ಸಭೆಗಳನ್ನು ನಡೆಸಿ, ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಕೋವಿಡ್-19 ಕಾರ್ಯ ಪಡೆ ಅಧ್ಯಕ್ಷರಾಗಿರುವ ಅಶ್ವತ್ಥ್‍ನಾರಾಯಣ್, ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳಿಗೆ ಮುಖ್ಯಮಂತ್ರಿ ಯವರು ಸಮ್ಮತಿಸುತ್ತಿದ್ದಾರೆ. ಇದರಿಂದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪಕ್ಕಕ್ಕೆ ಸರಿದಂತಾಗಿದೆ. ಈ ಬೆಳವಣಿಗೆ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈಗ ರಾಜಕೀಯ ಕೇಂದ್ರ ಬಿಂದುವಾಗಿದ್ದಾರೆ. ಅವರು ಕಳೆದ ವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಸಚಿವರು ಮತ್ತು ಶಾಸಕರು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ಒಂದಿಬ್ಬರು ಶಾಸಕರು ನಿನ್ನೆ ದೆಹಲಿಯಲ್ಲಿ ಜೋಶಿ ಅವರನ್ನು ಭೇಟಿ ಮಾಡಿ, ಚರ್ಚೆ ಮಾಡಿದ್ದಾರೆ.

30 ಶಾಸಕರ ದೆಹಲಿ ಯಾತ್ರೆ ಜೂನ್ 2ನೇ ವಾರ ಮಹತ್ತರ ಬದಲಾವಣೆ!

ಬೆಂಗಳೂರು, ಮೇ 26- ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹಾಗೂ ಹುಬ್ಬಳ್ಳಿ-ಧಾರವಾಡ ದಕ್ಷಿಣ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಸುಮಾರು 30 ಶಾಸಕರ ನಿಯೋಗ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿರುವ ವಿಚಾರ ಈಗ ಭಾರೀ ಕುತೂಹಲ ಕೆರಳಿಸಿದೆ. ಮುಂದಿನ ತಿಂಗಳ ಎರಡನೇ ವಾರದಲ್ಲಿ ರಾಜ್ಯ ರಾಜಕಾರಣ ದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆ ಇದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಕಳೆದ ಶನಿವಾರ ದೆಹಲಿಗೆ ತೆರಳಿದ್ದ ಈ ತಂಡ ಕರ್ನಾಟಕ ಭವನಕ್ಕೆ ಹೋಗದೆ ಖಾಸಗಿ ಹೋಟೆಲ್ ನಲ್ಲಿ ತಂಗಿ, ಕೆಲವು ವರಿಷ್ಠ ನಾಯಕರನ್ನು ಮುಖತಃ ಹಾಗೂ ಕೆಲವರನ್ನು ದೂರವಾಣಿ ಮೂಲಕ ಸಂಪ ರ್ಕಿಸಿ ಚರ್ಚಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇದೇ ವೇಳೆ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರಾಜ್ಯ ಸರ್ಕಾರದ ಆಡಳಿತ ನಿರ್ವಹಣೆ ಹಾಗೂ ಪಕ್ಷದ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯ ದಲ್ಲಿ ನಾಯಕತ್ವ ಬದಲಾವಣೆಯಾದರೆ ಪರ್ಯಾಯ ನಾಯಕತ್ವವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಲ್ಲವೇ ಶಾಸಕ ಅರವಿಂದ್ ಬೆಲ್ಲದ್ ಅವರಿಗೆ ಕಲ್ಪಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಗಣಿ ಸಚಿವ ಮುರುಗೇಶ್ ನಿರಾಣಿ ಕೂಡ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರು ನಾಳೆ ನಡೆಯಲಿರುವ ಸಂಪುಟ ಸಭೆ ನಂತರ ದೆಹಲಿ ಪ್ರಯಾಣದ ಬಗ್ಗೆ ನಿರ್ಧ ರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಮಹತ್ವದ ಸಂಗತಿಯೆಂದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಕರ್ತರಾದ ಶಾಸಕ ರಮೇಶ್ ಜಾರಕಿಹೊಳಿ, ಸಚಿವರಾದ ಭೈರತಿ ಬಸವರಾಜ್, ಡಾ. ಕೆ. ಸುಧಾಕರ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

 

Translate »