ಲಾಕ್‍ಡೌನ್ ಎಫೆಕ್ಟ್: ನಿಮ್ಹಾನ್ಸ್ ಸಹಾಯವಾಣಿಗೆ ಭಯ, ಆತಂಕ, ಒತ್ತಡದ 4 ಸಾವಿರಕ್ಕೂ ಹೆಚ್ಚು ಕರೆ
ಮೈಸೂರು

ಲಾಕ್‍ಡೌನ್ ಎಫೆಕ್ಟ್: ನಿಮ್ಹಾನ್ಸ್ ಸಹಾಯವಾಣಿಗೆ ಭಯ, ಆತಂಕ, ಒತ್ತಡದ 4 ಸಾವಿರಕ್ಕೂ ಹೆಚ್ಚು ಕರೆ

April 5, 2020

ಬೆಂಗಳೂರು,ಏ.4- ಕೊರೊನಾ ವೈರಸ್ ಸೋಂಕು ಹಬ್ಬುವು ದನ್ನು ತಡೆಗಟ್ಟಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ 21 ದಿನಗಳ ಭಾರತ ಲಾಕ್‍ಡೌನ್ ಘೋಷಿಸಿದೆ.

ಯಾರೂ ಕೂಡ ಅಗತ್ಯ ತುರ್ತು ಕೆಲಸಗಳನ್ನು ಹೊರತು ಪಡಿಸಿ ಬೇರೆಯದ್ದಕ್ಕೆ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಮನೆಯೊಳಗೆ ಒಂದು ದಿನ, ಎರಡು ದಿನ, ಮೂರು ದಿನ, 4 ದಿನ ಕೂರಬಹುದು, ಅದಕ್ಕಿಂತ ಹೆಚ್ಚು ದಿನ ಕೂರಬೇಕೆಂದರೆ ಶಿಕ್ಷೆ, ಬಂಧನದ ತರಹ ಕಾಡುತ್ತದೆ, ಬಹುತೇಕರಿಗೆ ಮಾನಸಿಕ ತೊಳಲಾಟ ಉಂಟಾಗಬಹುದು, ಈ ಆತಂಕದ ಪರಿಸ್ಥಿತಿಯಲ್ಲಿ ಉದ್ವೇಗ, ಮಾನಸಿಕ ಒತ್ತಡಕ್ಕೊಳಗಾಗುವುದು ಸಹಜ. ಈ ನಿಟ್ಟಿನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ ಮಕ್ಕಳಿಗೆ, ಹದಿಹರೆಯದವರಿಗೆ, ಮಧ್ಯ ವಯಸ್ಕರಿಗೆ ಮತ್ತು ಹಿರಿಯರಿಗೆ ಸಮಾಲೋಚನೆ ನೀಡಲು ಕಳೆದ 28ರಿಂದ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜೊತೆ ಕೈಜೋಡಿಸಿದೆ.

ನಿಮ್ಹಾನ್ಸ್ ಪ್ಯಾನ್ ಇಂಡಿಯಾ ಹೆಲ್ಪ್‍ಲೈನ್-080-46110007 ಅನ್ನು ತೆರೆದಿದ್ದು ಅದರ ಮೂಲಕ ಮಾನಸಿಕ ಮತ್ತು ಮನೋ ವೈಜ್ಞಾನಿಕ ಸಮಸ್ಯೆ ಹೊಂದಿರುವವರಿಗೆ ಆಪ್ತ ಸಮಾಲೋಚನೆ ಯನ್ನು ನೀಡುತ್ತದೆ. ಈ ಸಹಾಯವಾಣಿಗೆ ಇಲ್ಲಿಯವರೆಗೆ 4 ಸಾವಿರಕ್ಕೂ ಅಧಿಕ ಕರೆಗಳು ಬಂದಿವೆ. ಶೇ.90ರಷ್ಟು ಮಂದಿ ಕೊರೊನಾ ಸೋಂಕು ಮತ್ತು ಲಾಕ್‍ಡೌನ್ ನಂತರ ಭಯ ಮತ್ತು ಆತಂಕವನ್ನು ಎದುರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಗಳಲ್ಲಿ ಹಬ್ಬುತ್ತಿರುವ ಸುದ್ದಿ, ವಿಡಿಯೊಗಳನ್ನು ನೋಡಿಕೊಂಡು ಜನರಿಗೆ ಹೆಚ್ಚಿನ ಭಯ ಕಾಡುತ್ತಿದೆ, ಸೋಷಿಯಲ್ ಮೀಡಿಯಾ ಗಳಲ್ಲಿ ಬರುವ ಬಹುತೇಕ ಸುದ್ದಿಗಳು ಸುಳ್ಳಾಗಿರುತ್ತದೆ ಎಂದು ನಿಮ್ಹಾನ್ಸ್‍ನ ಡಾ.ಕೆ.ಶೇಖರ್ ತಿಳಿಸಿದ್ದಾರೆ.

ವಯಸ್ಸಾದವರಿಗೆ ಮತ್ತು ಸಮುದಾಯ ಸಂಬಂಧಿ ಸಮಸ್ಯೆಗಳು ಕೊರೊನಾ ನಂತರ ಜಾಸ್ತಿಯಾಗಿವೆ. 6ರಿಂದ 8 ವರ್ಷದೊಳಗಿನ ಮಕ್ಕಳು ಹೊರಗೆ ಹೋಗಿ ಆಟವಾಡಲು ತುಡಿಯುತ್ತಿರುತ್ತಾರೆ. 13ರಿಂದ 18 ವರ್ಷದೊಳಗಿನವರಲ್ಲಿ ಸಿಟ್ಟು ಕಾಡುತ್ತಿದ್ದು ಹೊರಗೆ ಹೋಗಿ ತಮ್ಮ ಸ್ನೇಹಿತರ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ ವಲ್ಲಾ ಎಂದು ಅನ್ನಿಸುತ್ತಿರುತ್ತದೆ. ಪೆÇೀಷಕರಲ್ಲಿ ಕೂಡ ಸಿಟ್ಟು ಬರುತ್ತಿ ರುತ್ತದೆ. ನೌಕರಿಯಲ್ಲಿರುವ ದಂಪತಿಗಳಲ್ಲಿ ಸಹ ತಳಮಳ, ಆತಂಕ, ಗೊಂದಲಗಳಿರುತ್ತವೆ. ಇಳಿ ವಯಸ್ಸಿನವರು ತಾವು ಮನೆಯವರಿಗೆ ಹೊರೆಯಾಗಿದ್ದೇವೆ, ತಮ್ಮಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ವಲ್ಲಾ ಎಂದು ಅನ್ನಿಸುತ್ತಿರುತ್ತದೆ ಎಂದು ಡಾ.ಕೆ.ಶೇಖರ್ ಹೇಳುತ್ತಾರೆ.

ಇನ್ನು ವಲಸೆ, ಕೂಲಿ ಕಾರ್ಮಿಕರಲ್ಲಿ ಜೀವನೋಪಾಯಕ್ಕೆ ಏನು ಮಾಡುವುದು ಎಂಬ ಭಯ ಕಾಡುತ್ತಿದೆಯಂತೆ. ಈ ಸಂದರ್ಭ ದಲ್ಲಿ ಏನು ಮಾಡಬೇಕೆಂದು ಯೂಟ್ಯೂಬ್‍ನಲ್ಲಿ ಸಲಹೆ, ಸೂಚನೆ, ಸಮಾಲೋಚನೆಗಳನ್ನು ನೀಡುತ್ತೇವೆ ಎಂದರು. ನಿಮ್ಹಾನ್ಸ್ ದೇಶಾದ್ಯಂತ 50 ಮಾನಸಿಕ ಆರೋಗ್ಯ ಸಂಸ್ಥೆಗಳ ಜೊತೆ ಈ ಲಾಕ್ ಡೌನ್ ಸಂದರ್ಭದಲ್ಲಿ ಕೈಜೋಡಿಸಿ ಕೆಲಸ ಮಾಡುತ್ತಿದೆ. ನಿಮ್ಹಾನ್ಸ್ ನ ಸಹಾಯವಾಣಿ 13 ಭಾಷೆಗಳಲ್ಲಿ ಲಭ್ಯವಾಗಲಿದೆ.

Translate »