ಮೈಸೂರು ಜನರ ಬೆಂಬಲದಿಂದ ಲಾಕ್‍ಡೌನ್ ಯಶಸ್ವಿ: ಡಿಸಿಪಿ
ಮೈಸೂರು

ಮೈಸೂರು ಜನರ ಬೆಂಬಲದಿಂದ ಲಾಕ್‍ಡೌನ್ ಯಶಸ್ವಿ: ಡಿಸಿಪಿ

May 25, 2020

ಮೈಸೂರು, ಮೇ 24(ಎಂಕೆ)- ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿ ಸಲು ಭಾನುವಾರ ರಾಜ್ಯದಾದ್ಯಂತ ಜಾರಿಯಾಗಿದ್ದ ಲಾಕ್ ಡೌನ್‍ಗೆ ಮೈಸೂರಿನ ಜನತೆ ಸಂಪೂರ್ಣ ಬೆಂಬಲ ಸೂಚಿಸಿ ಯಶಸ್ವಿಗೊಳಿಸಿದ್ದಾರೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ವಿಡಿಯೋ ಸಂದೇಶ ನೀಡಿರುವ ಅವರು, ತುರ್ತು ಅಗತ್ಯಗಳಿಗೆ ಸಂಚಾರ, ವಹಿವಾಟಿಗೆ ಅವಕಾಶ ಮಾಡಿ ಕೊಡಲಾಗಿತ್ತು. ಅಲ್ಲಲ್ಲಿ ವಾಹನ ತಪಾಸಣೆ ನಡೆಸಲಾಗಿದೆ. ಯಾವುದೇ ವಾಹನ ವಶಕ್ಕೆ ಪಡೆದಿಲ್ಲ. ಮೈಸೂರಿಗರು ಉತ್ತಮ ಸಹಕಾರ ನೀಡಿದ್ದು, ಭಾನುವಾರದ ಲಾಕ್‍ಡೌನ್ ಶಾಂತಿ ಯುತವಾಗಿ ಪೂರ್ಣಗೊಂಡಿದೆ. ನಗರದಲ್ಲಿ ಸೋಮವಾರ ಬೆಳಿಗ್ಗೆ 7 ಗಂಟೆ ನಂತರ ಎಂದಿನಂತೆ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದರು.

ರಂಜಾನ್ ಬಂದೋಬಸ್ತ್: ನಗರದಲ್ಲಿನ ಎಲ್ಲಾ ಮುಸ್ಲಿಂ ಧರ್ಮಗುರುಗಳೊಂದಿಗೆ ಮಾತನಾಡಿದ್ದು, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಮನೆಯಲ್ಲಿಯೇ ಪಾರ್ಥನೆ ಸಲ್ಲಿಸುವುದಾಗಿ ಮುಸ್ಲಿಂ ಧರ್ಮಗುರುಗಳು, ಮುಖಂಡರು ಭರವಸೆ ನೀಡಿದ್ದಾರೆ. ಅಗತ್ಯ ಬಂದೋಬಸ್ತ್ ಮಾಡಲಾಗಿದ್ದು, 4 ಕೆಎಸ್‍ಆರ್‍ಪಿ, 12 ಸಿಆರ್‍ಪಿ ತುಕಡಿ ನಿಯೋಜಿಸಲಾಗಿದೆ. 25 ಪೊಲೀಸ್ ಇನ್ಸ್‍ಪೆಕ್ಟರ್‍ಗಳು, ಮೂವರು ಎಸಿಪಿ ಮತ್ತು ಇತರೆ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ನಗರದಲ್ಲಿನ ಎಲ್ಲಾ ಮಸೀದಿ, ಪಾರ್ಥನಾ ಮಂದಿರ ಮತ್ತು ದರ್ಗಾಗಳ ಬಳಿ ಬಂದೋಬಸ್ತ್ ಮಾಡಲಾಗಿದೆ ಎಂದರು. ರಂಜಾನ್ ಹಬ್ಬದಂದು(ಸೋಮವಾರ) ಸಾಮೂಹಿಕ ಪಾರ್ಥನೆಗೆ ಅವಕಾಶ ಕೋರಿ ಮೈಸೂರು ಮೇಯರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅವರ ಮನವಿಗೆ ಸಂಬಂಧಿಸಿ ನಮಗೆ ಸರ್ಕಾರದಿಂದ ಯಾವುದೇ ಸೂಚನೆ ಈವರೆಗೂ ಬಂದಿಲ್ಲ ಎಂದು ಹೇಳಿದರು.

Translate »