ಬೇಡಿಕೆ ಈಡೇರಿಸುವ ಭರವಸೆ ನೀಡಿದ ಎಂ.ಶಿವಣ್ಣ; ಮುಷ್ಕರ ಕೈಬಿಟ್ಟ ಒಳಚರಂಡಿ ಪೌರಕಾರ್ಮಿಕರು
ಮೈಸೂರು

ಬೇಡಿಕೆ ಈಡೇರಿಸುವ ಭರವಸೆ ನೀಡಿದ ಎಂ.ಶಿವಣ್ಣ; ಮುಷ್ಕರ ಕೈಬಿಟ್ಟ ಒಳಚರಂಡಿ ಪೌರಕಾರ್ಮಿಕರು

December 17, 2020

ಮೈಸೂರು,ಡಿ.16(ಆರ್‍ಕೆ)-ಕೆಲಸ ಖಾಯಂ ಮಾಡು ವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುವುದಾಗಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಒಳಚರಂಡಿ ಪೌರಕಾರ್ಮಿಕರು ಮುಷ್ಕರವನ್ನು ಕೈಬಿಟ್ಟಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಅವರು ‘ಮೈಸೂರು ಮಿತ್ರ’ನಿಗೆ ಬುಧವಾರ ಸಂಜೆ ಈ ವಿಷಯ ತಿಳಿಸಿದರು.

`ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ನಾವು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಬಂದು ಮನವಿಪತ್ರ ಸ್ವೀಕರಿಸಿದರು. ಅಲ್ಲದೆ, ಜಲ ದರ್ಶಿನಿ ಅತಿಥಿಗೃಹದಲ್ಲಿ ಸಂಘದ ಪದಾಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಸಿದರು. ಮೈಸೂರು ಮಹಾನಗರ ಪಾಲಿಕೆಯ ಒಳಚರಂಡಿ ಸ್ವಚ್ಛತೆಯ ಗುತ್ತಿಗೆ ಪೌರಕಾರ್ಮಿಕರಾಗಿರುವ 231 ಮಂದಿಯ ಕೆಲಸ ಖಾಯಂಗೊಳಿಸುವುದಕ್ಕೆ ಸರ್ಕಾರಕ್ಕೆ ಶಿಫಾ ರಸು ಮಾಡುವೆ. ಗುತ್ತಿಗೆ ಪೌರಕಾರ್ಮಿಕರ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವುದಕ್ಕೆ ಸರ್ಕಾರದ ಮಟ್ಟ ದಲ್ಲಿ ಪ್ರ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಶಿವಣ್ಣ ಅವರು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಕ್ರಮ ಕೈಗೊಂಡು ಆ ಬಗ್ಗೆ ಮಾಹಿತಿ ನೀಡುವೆ ಎಂದು ಹೇಳಿ ದ್ದಾರೆ. ಹಾಗಾಗಿ ಮುಷ್ಕರವನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಂಘದ ಕಾರ್ಯದರ್ಶಿ ಎಸ್.ಗಣೇಶ್ ಮಾತ ನಾಡಿ, ಮುಂದಿನ ತಿಂಗಳಿನಿಂದ ಗುತ್ತಿಗೆ ಪೌರ ಕಾರ್ಮಿಕರಿಗೂ ಬೆಳಗಿನ ಉಪಾಹಾರ ನೀಡುವುದಾಗಿ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆಯೋಗದ ಅಧ್ಯಕ್ಷರು ಕೆಲಸ ಖಾಯಂಗೊಳಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದ್ದಾರೆ. 2021ರ ಜನವರಿ 15ರೊಳಗೆ ಬೇಡಿಕೆ ಈಡೇರಿಸದಿದ್ದರೆ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಮ್ಮ ಸೇವೆ ಖಾಯಂಗೊಳಿಸಿ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು. ಬೆಳಗ್ಗೆ ಉಪಾಹಾರ ನೀಡಬೇಕೆಂದು ಒತ್ತಾಯಿಸಿ ಮೈಸೂರು ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿ ಕರ ಸಂಘದ ಸದಸ್ಯರು ಮೂರು ದಿನಗಳಿಂದ ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಪಾಲಿಕೆ ಕಚೇರಿ ಎದುರು ಧರಣಿ ನಡೆಸುತ್ತಿದ್ದರು.

Translate »