ನಂಜನಗೂಡು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಡುವಿನಹಳ್ಳಿ ಎಂ.ಶಾಂತಮೂರ್ತಿ, ಉಪಾಧ್ಯಕ್ಷರಾಗಿ ಶಂಕರಪುರ ಕೃಷ್ಣ ಆಯ್ಕೆ
ಮೈಸೂರು ಗ್ರಾಮಾಂತರ

ನಂಜನಗೂಡು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಡುವಿನಹಳ್ಳಿ ಎಂ.ಶಾಂತಮೂರ್ತಿ, ಉಪಾಧ್ಯಕ್ಷರಾಗಿ ಶಂಕರಪುರ ಕೃಷ್ಣ ಆಯ್ಕೆ

March 3, 2020

ನಂಜನಗೂಡು, ಮಾ.2- ಇಲ್ಲಿನ ಶ್ರೀಕಂಠೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ 3ನೇ ಬಾರಿಗೆ ಮಡುವಿನಹಳ್ಳಿ ಎಂ.ಶಾಂತಮೂರ್ತಿ ಉಪಾಧ್ಯಕ್ಷರಾಗಿ ಶಂಕರಪುರ ಕೃಷ್ಣ ಆಯ್ಕೆಯಾದರು.

ಓರ್ವ ನಾಮ ನಿರ್ದೇಶಕ ಹಾಗೂ 14 ಚುನಾಯಿತ ನಿರ್ದೇಶಕರು ಸೇರಿ ಒಟ್ಟು 15 ನಿರ್ದೇಶಕರ ಬಲ ವಿರುವ ಬ್ಯಾಂಕಿಗೆ ಬೆಳಿಗ್ಗೆ 10 ಗಂಟೆಗೆ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣೆ ಅಧಿಕಾರಿಯಾದ ಮಂಜುನಾಥ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ ದೇವನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾರ್ಯ ಚಿಕ್ಕಲಿಂಗಣ್ಣ ಅವರನ್ನು ಹೊರತುಪಡಿಸಿ ಉಳಿದ 14 ನಿರ್ದೇಶಕರು ಪಾಲ್ಗೊಂಡಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಮಡುವಿನಹಳ್ಳಿ ಎಂ.ಶಾಂತಮೂರ್ತಿ ಹಾಗೂ ಹುಲ್ಲಹಳ್ಳಿ ಮೋಹನ್ ಉಮೇದುವಾರಿಕೆ ಸಲ್ಲಿಸಿದರು. ಚುನಾವಣೆಯಲ್ಲಿ ಮೋಹನ್ 4 ಮತ ಪಡೆದರೆ, ಎಂ.ಶಾಂತಮೂರ್ತಿಗೆ 10 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಶಂಕರಪುರ ಕೃಷ್ಣ ಅವರನ್ನು ಹೊರತುಪಡಿಸಿ ಉಳಿದ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜು, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕುಂಬ್ರಳ್ಳಿ ಸುಬ್ಬಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಅಳಗಂಚಿ ಮಹೇಶ್, ಛತ್ರ ಚಂದ್ರು, ಬದನವಾಳು ಮೂರ್ತಿ, ಹಗಿನವಾಳು ಚಿಕ್ಕಣ್ಣ, ಮಲ್ಕುಂಡಿ ನಾಗಣ್ಣ, ವಕೀಲ ಶಿವಬಸಪ್ಪ, ದೇವಿರಮ್ಮನಹಳ್ಳಿ ಲೋಕೇಶ್ ಸೇರಿದಂತೆ ಇತರರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಅಧ್ಯಕ್ಷ ಶಾಂತಮೂರ್ತಿ ಮಾತನಾಡಿ, ಸಾಲಮನ್ನಾ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕಿನ ವಹಿವಾಟಿನಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಿದ್ದು, ಮಾರ್ಚ್ ನಂತರ ಬ್ಯಾಂಕ್‍ನ ಎಲ್ಲಾ ಗೊಂದಲ ಸರಿಪಡಿಸಲಾಗುವುದು. ನಿರ್ದೇಶಕರು ಮತ್ತು ಸದಸ್ಯರ ಸಹಕಾರ ಪಡೆದು ಬ್ಯಾಂಕ್‍ನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ನಿರ್ದೇಶಕರಾದ ಹೆಚ್.ಕೆ.ಚೆನ್ನಪ್ಪ, ಸಿ.ಗುರುಪ್ರಸಾದ್, ಮಹದೇವಸ್ವಾಮಿ, ಪಿಎಸ್‍ಕೆ ಚೆಲುವಪ್ಪ, ಮಹದೇವನಾಯಕ, ಶ್ರೀವಳ್ಳಿ, ನಾಗಮ್ಮ, ಕೆಂಪಣ್ಣ, ಗುರುಸ್ವಾಮಿ, ನಂಜನಗೂಡು ಮಧು, ನಾಮ ನಿರ್ದೇಶಕ ಹರದನಹಳ್ಳಿ ಬಸಪ್ಪ ಇದ್ದರು.

Translate »