ರಾಗಿ ಆಹಾರದಿಂದಷ್ಟೇ ರೋಗ ನಿರೋಧಕ ಶಕ್ತಿ ವೃದ್ಧಿಸದು; ವೈವಿಧ್ಯಮಯ ನಿಸರ್ಗದತ್ತ ಆಹಾರದಿಂದ ಆರೋಗ್ಯ ಭಾಗ್ಯ
ಮೈಸೂರು

ರಾಗಿ ಆಹಾರದಿಂದಷ್ಟೇ ರೋಗ ನಿರೋಧಕ ಶಕ್ತಿ ವೃದ್ಧಿಸದು; ವೈವಿಧ್ಯಮಯ ನಿಸರ್ಗದತ್ತ ಆಹಾರದಿಂದ ಆರೋಗ್ಯ ಭಾಗ್ಯ

April 10, 2020

ಮೈಸೂರು, ಏ.9(ಪಿಎಂ)- `ರಾಗಿ’ ಧಾನ್ಯದಿಂದ ತಯಾರಾಗುವ ಆಹಾರಗಳ ಸೇವನೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಾಗೆಂದು ಇದೊಂದೇ ಆಹಾರ ಸೇವನೆಗೆ ಮಾತ್ರವೇ ಕಟ್ಟು ಬಿದ್ದರೆ ಪ್ರಯೋಜನ ವಿಲ್ಲ ಎಂಬ ಅಭಿಪ್ರಾಯ ಆಹಾರ ತಜ್ಞರಿಂದ ವ್ಯಕ್ತ ವಾಗಿದೆ. ಆಹಾರ ಕ್ರಮದಲ್ಲಿ ಹಿಂದಿನ ಸ್ಥಳೀಯ ವೈವಿಧ್ಯ ಇರಬೇಕು ಎಂದೂ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದೀಗ ಕೊರೊನಾ ವೈರಾಣು ತಗುಲದಂತೆ, ಒಂದು ವೇಳೆ ತಗುಲಿದರೂ ರೋಗ ನಿರೋಧಕ ಶಕ್ತಿ ಇದ್ದರೆ ಅದನ್ನು ಮೆಟ್ಟಿ ಜಯಿಸಿಕೊಳ್ಳಬಹುದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ರಾಗಿ ಧಾನ್ಯದ ಆಹಾರ ಕ್ರಮ ಮುನ್ನೆಲೆಗೆ ಬರುತ್ತಿದೆ. ದಕ್ಷಿಣ ಕರ್ನಾಟಕದ ಪ್ರಮುಖ ಆಹಾರ ಕ್ರಮವಾದ ರಾಗಿ ಮುದ್ದೆ ಸೇರಿದಂತೆ ರಾಗಿಯಿಂದ ತಯಾರಾಗುವ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಕೊರೊನಾ ಸೋಂಕಿಗೆ ತುತ್ತಾದರೆ ಅದಕ್ಕೆ ಔಷಧ ವಿಲ್ಲ. ಬಾಧಿತ ವ್ಯಕ್ತಿಯ ದೇಹದಲ್ಲಿ ರೋಗ ನಿರೋ ಧಕ ಶಕ್ತಿ ಸಮರ್ಥವಾಗಿ ಕೆಲಸ ಮಾಡಿದರೆ ಅದ ರಿಂದ ಪಾರಾಗಬಹುದು ಎಂದು ವೈದ್ಯಕೀಯ ವಲಯ ಹೇಳುತ್ತಿದೆ. ಹೀಗಾಗಿ ರೋಗ ನಿರೋಧಕ ಶಕ್ತಿಗೆ ರಾಗಿ ಪರಿಣಾಮಕಾರಿ ಎಂಬ ಹಿನ್ನೆಲೆಯಲ್ಲಿ ಬಹುತೇಕರು ರಾಗಿ ಧಾನ್ಯದ ತಿನಿಸುಗಳಿಗೆ ಮಾತ್ರವೇ ಮೊರೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಆಹಾರ ತಜ್ಞರು ಹೇಳುವುದೇ ಬೇರೆ. ಕೇವಲ ರಾಗಿ ಒಂದನ್ನೇ ಅವಲಂಬಿಸಿದರೆ ಪ್ರಯೋಜನ ವಿಲ್ಲ ಎಂಬುದು ಅವರ ಅಭಿಪ್ರಾಯ.

ನೈಸರ್ಗಿಕವಾದ (ರಾಸಾಯನಿಕ ಮುಕ್ತ) ವೈವಿ ಧ್ಯತೆಯ ಆಹಾರ ಸೇವನೆ ಮಾತ್ರವೇ ನಮ್ಮಲ್ಲಿ ಸಮರ್ಥ ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ಮಾಡುತ್ತದೆ ಎಂಬುದು ಆಹಾರ ತಜ್ಞರ ಅಭಿಪ್ರಾಯ. ಈ ಸಂಬಂಧ ಸಾವಯವ ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಕ್ರಿಯಾ ಶೀಲವಾಗಿರುವ `ಸಹಜ ಸಮೃದ್ಧ’ ಸಂಘಟನೆಯ ಸಂಸ್ಥಾಪಕ ಸದಸ್ಯ ಜಿ.ಕೃಷ್ಣಪ್ರಸಾದ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ರೋಗ ನಿರೋಧಕ ಶಕ್ತಿ ವೃದ್ಧಿಸಲು ವಿಶೇಷವಾಗಿ ನೈಸರ್ಗಿಕ ಆಹಾರಗಳನ್ನು ಹೆಚ್ಚು ಸೇವನೆ ಮಾಡಬೇಕು ಎಂದು ಹೇಳಿದರು.

ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಆಹಾರ ವೈವಿ ಧ್ಯತೆ ಇತ್ತು. ಈಗ ಕಣ್ಮರೆಯಾಗುತ್ತಿದೆ. ಅಕ್ಕಿ, ಬೇಳೆಯಂ ತಹ ಆಹಾರ ಪದಾರ್ಥಗಳಿಗೆ ಹಳ್ಳಿಗರು, ಬಡವರು, ಕೂಲಿ ಕಾರ್ಮಿಕರು ಸೀಮಿತವಾಗುವ ಸನ್ನಿವೇಶ ನಿರ್ಮಾಣ ವಾಗಿದೆ. ಹಣ್ಣು-ತರಕಾರಿ ಬಳಕೆಯೂ ಕಡಿಮೆಯಾಗು ತ್ತಿದೆ. ಆಹಾರ ವೈವಿಧ್ಯತೆ ತಗ್ಗುತ್ತಿದ್ದು, ಇದರಿಂದ ದೇಹಕ್ಕೆ ಕೇವಲ ಕಾರ್ಬೋಹೈಡ್ರೇಟ್ಸ್ ಸೇರುವಂತಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಳ ಸೂಕ್ಷ್ಮ ಪೋಷಕಾಂಶ ಗಳನ್ನು ಅವಲಂಬಿಸಿದೆ ಎನ್ನುತ್ತಾರೆ ಕೃಷ್ಣಪ್ರಸಾದ್.

ಕೃಷಿಯಲ್ಲಿ ಪ್ರಸ್ತುತ ರಾಸಾಯನಿಕ ಬಳಕೆ ಹೆಚ್ಚುತ್ತಿದ್ದು, ಧಾನ್ಯಗಳ ದಾಸ್ತಾನು, ರವಾನೆ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ಅವುಗಳ ನಿರ್ವಹಣೆಯಲ್ಲಿ ರಾಸಾಯ ನಿಕ ಬಳಕೆ ಹೆಚ್ಚುತ್ತಲೇ ಇದೆ. ಪಾಲೀಶ್ ಮಾಡಿದ ರಾಸಾಯನಿಕಯುಕ್ತ ಧಾನ್ಯ ಸೇವನೆಯಿಂದ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ನಾವೀಗ ಅಜ್ಜಿ ಕಾಲದ ಅಡುಗೆ ಮನೆ ಪರಿಕಲ್ಪನೆಗೆ ಮರಳಬೇಕಿದೆ. ಈ ಪರಿಕಲ್ಪನೆಯಲ್ಲಿ ಅಡುಗೆಗೆ ಬೇಕಾದ ಸೊಪ್ಪು ಹಾಗೂ ತರಕಾರಿ ಮನೆಯ ಹಿತ್ತಲಲ್ಲೇ ದೊರೆಯು ತ್ತಿತ್ತು. ಬರಿ ರಾಗಿ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲಾಗದು ಎಂದೂ ಅವರು ಪ್ರತಿಪಾದಿಸಿದ್ದಾರೆ.

ವರ್ಷದಲ್ಲಿ 2 ಬಾರಿಯಾದರೂ ಬೆರಕೆ ಸೊಪ್ಪು ಸೇವನೆ ಒಳ್ಳೆಯದು. ಇದು ದೇಹ ಶುದ್ಧಿ ಮಾಡುವ ಕ್ರಿಯೆಯನ್ನು ನಿರ್ವಹಿಸುತ್ತದೆ. ಅಂದಿನ ಅಜ್ಜಿ ಅಡುಗೆ ಮನೆಯಲ್ಲಿ ಆಹಾರದ ವೈವಿಧ್ಯ ಇದ್ದಿತು. ನಮ್ಮ ಅಂದಿನ ಉಪ್ಪಿನ ಕಾಯಿ ಪರಿಕಲ್ಪನೆಯ ಲ್ಲಿದ್ದ ವೈವಿಧ್ಯ ಸೂಕ್ಷ್ಮ ಪೋಷಕಾಂಶ ಒದಗಿಸು ತ್ತಿತ್ತು. ಆದರೆ ಈಗ ಅಂತಹ ವೈವಿಧ್ಯ ಇಲ್ಲವಾಗಿದೆ ಎನ್ನುವ ಕೃಷ್ಣಪ್ರಸಾದ್, ಸಿರಿಧಾನ್ಯಗಳು ಬಹಳಷ್ಟು ಸೂಕ್ಷ್ಮ ಪೋಷಕಾಂಶ ಪೂರೈಸುತ್ತವೆ ಎನ್ನುತ್ತಾರೆ.

ಪ್ರಸ್ತುತ ಗೆಡ್ಡೆ ಗೆಣಸು ಮರೆತಿದ್ದೇವೆ. ಇವು ನಿಸರ್ಗದಿಂದ ದೊರೆಯುವ ಆಹಾರ, ಜತೆಗೆ ಪೋಷಕಾಂಶದ ಖಜಾನೆ. ಇದರಲ್ಲೂ ವೈವಿಧ್ಯ ಕಾಣಬಹುದು. ಆದರೆ ನಮ್ಮ ಆಹಾರ ಕ್ರಮದಲ್ಲಿ ಇವುಗಳನ್ನು ಕಡೆಗಣಿಸಲಾಗಿದೆ. ಸೀಬೆ ಹಣ್ಣಿನ ಮುಂದೆ ಸೇಬು ಏನೇನೂ ಅಲ್ಲ. ಸ್ಥಳೀಯ ಹಣ್ಣುಗಳಾದ ಕೊಡಗಿನ ಕಿತ್ತಳೆ, ಬಾಳೆಹಣ್ಣು ಬಳಕೆಗೆ ವಾಪಸ್ ಬರಬೇಕು. ರಾಗಿ ಆಹಾರ ಸೇವನೆ ಒಂದರಿಂದಲೇ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ಅವರು ಗಮನ ಸೆಳೆದಿದ್ದಾರೆ.

ಎಂ.ಬಿ.ಪವನ್ ಮೂರ್ತಿ

Translate »