ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ
ಮೈಸೂರು

ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ

September 29, 2020

ಮೈಸೂರು, ಸೆ.28(ಎಂಟಿವೈ)- ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸುಗ್ರಿ ವಾಜ್ಞೆ ಮೂಲಕ ಜಾರಿಗೊಳಿಸಿರುವ ಕ್ರಮ ಖಂಡಿಸಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ರೈತ, ದಲಿತ, ಕಾರ್ಮಿಕ ಹಾಗೂ ಜನ ವಿರೋಧಿ ನೀತಿ ಅನುಸರಿಸು ತ್ತಿವೆ ಎಂದು ಆರೋಪಿಸಿ ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ `ಕರ್ನಾಟಕ ಬಂದ್’ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

`ಕರ್ನಾಟಕ ಬಂದ್’ಗೆ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಐ(ಎಂ), ಸಮತಾ ಸೈನಿಕ ದಳ ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿದ್ದವು. ಈ ಹಿನ್ನೆಲೆಯಲ್ಲಿ ಮೈಸೂರಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇತ್ತು. ಆದರೆ ಬಂದ್ ಮೈಸೂರು ನಗರದ ಹೃದಯಭಾಗ ಹೊರತು ಪಡಿಸಿ, ಬಡಾವಣೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳ್ಳಂಬೆಳಿಗ್ಗೆಯೇ ರಸ್ತೆ ತಡೆ: ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್‍ಗೆ ಬೆಂಬಲ ಘೋಷಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಬೆಳಿಗ್ಗೆಯೇ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ಬಳಿ ಜಮಾಯಿಸಿ, ಪ್ರತಿಭಟ ನೆಗೆ ಮುಂದಾದರು. ಬೆಳಿಗ್ಗೆ 7 ಗಂಟೆವರೆಗೂ ಗ್ರಾಮಾಂ ತರ ಬಸ್ ನಿಲ್ದಾಣದಿಂದ ಒಂದೊಂದೇ ಬಸ್ ವಿವಿಧೆಡೆ ಸಂಚರಿಸುತ್ತಿದ್ದವು. ವಿವಿಧ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ಆರಂಭಿಸಿ, ಬಸ್ ಸಂಚಾರ ಸ್ಥಗಿತಗೊಳಿಸು ವಂತೆ ಆಗ್ರಹಿಸಿದರು. ಆದರೆ ಇದಕ್ಕೆ ಪೊಲೀಸರು ಆಸ್ಪದ ನೀಡದೆ ಪ್ರತಿಭಟನೆ ನಡುವೆಯೂ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಒಂದೆರಡು ಬಸ್ ತೆರಳಿದ ನಂತರ ಪ್ರತಿ ಭಟನಾಕಾರರು ನಿಲ್ದಾಣದಿಂದ ಹೊರಗೆ ಬರುತ್ತಿದ್ದ ಮತ್ತೊಂದು ಬಸ್ ಮುಂದೆ ಮಲಗಿ ಪ್ರತಿಭಟನೆ ಮುಂದುವರೆಸಿದರು. ಬಳಿಕ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ಕೆಲಕಾಲ ಬಸ್ ಸಂಚಾರ ಸ್ಥಗಿತ ಗೊಳಿಸಲಾಯಿತು. ಒಂದೆಡೆ ರಸ್ತೆಯಲ್ಲಿ ಮಲಗಿ ಐಕ್ಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಕೆಲ ರೈತ ಮುಖಂಡರು ಬಸ್ ನಿಲ್ದಾಣ ಪ್ರವೇಶಿಸಿ ಪ್ರಯಾಣಿಕರಿಗೆ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ಕಾರ್ಮಿಕ ಕಾಯ್ದೆ, ವಿದ್ಯುತ್ ಬಿಲ್ ಕಾಯ್ದೆ, ರೈಲ್ವೆ, ಬಿಎಸ್‍ಎನ್‍ಎಲ್ ಖಾಸಗೀಕರಣ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ, ಕೃಷಿ ವಿರೋಧಿ ನೀತಿ ಹಾಗೂ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿರುವ ಬಗ್ಗೆ ವಿವರಿಸಿ ಕರ್ನಾಟಕ ಬಂದ್‍ಗೆ ಸಹಕರಿಸುವಂತೆ ಮನವರಿಕೆ ಮಾಡಲು ಮುಂದಾದರು. ಇದನ್ನು ಗಮನಿಸಿದ ಸಾರಿಗೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರತಿಭಟನಾಕಾರರನ್ನು ಹೊರಗೆ ಕಳಿಸುವಂತೆ ಕೋರಿದರು. ಸ್ಥಳಕ್ಕೆ ಬಂದ ಪೊಲೀಸರು ಬಸ್ ನಿಲ್ದಾಣದೊಳಗೆ ಪ್ರತಿಭಟನೆ ನಡೆಸುವ ಹಾಗೂ ಪ್ರಯಾಣಿಕರಿಗೆ ಅಡ್ಡಪಡಿಸಲು ಯಾರಿಗೂ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಿಂದ ಹೊರ ಹೋಗುವಂತೆ ಸೂಚಿಸಿದರು. ಆದರೆ ರೈತ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಾವು ಪ್ರತಿಭಟನೆ ಮಾಡದೆ ಜಾಗೃತಿ ಮೂಡಿಸಿ ಬೆಂಬಲ ಯಾಚಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಅವಕಾಶ ನೀಡದ ಪೊಲೀಸರು ಎಲ್ಲರನ್ನು ಬಸ್ ನಿಲ್ದಾಣದಿಂದ ಹೊರಗೆ ಕಳಿಸಿದರು.

ಮೆರವಣಿಗೆ: ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಕೆಲಕಾಲ ರಸ್ತೆ ತಡೆ ನಡೆಸಿದ ಕಾರ್ಯಕರ್ತರು ನಂತರ ಪುರಭವನದ ಆವರಣಕ್ಕೆ ಮೆರವಣಿಗೆಯಲ್ಲಿ ಬಂದರು. ಅಲ್ಲಿಯೂ ಕೆಲಕಾಲ ಪ್ರತಿಭಟನೆ ನಡೆಸಿ ಪುನಃ ಆಂಜನೇಯ ದೇವಾಲಯದ ಮುಂಭಾಗಕ್ಕೆ ಬಂದರು. ಸುಮಾರು ಒಂದು ಗಂಟೆ ಕಾಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೆರವಣಿಗೆಗೆ ಯತ್ನ, ಬಂಧನ: ಬೆಳಗಿನಿಂದ ಪ್ರತಿಭಟನೆ ನಡೆಸುತ್ತಿದ್ದ ರೈತ, ದಲಿತ, ಪ್ರಗತಿಪರ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ನಡೆಸುತ್ತಿದ್ದ ಪ್ರತಿಭಟನೆ ಸ್ಥಗಿತಗೊಳಿಸುವಂತೆ ಪೊಲೀಸರು ಮನವಿ ಮಾಡಿದರು. ಆದರೆ ಇದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ. ಬದಲಾಗಿ ಮೆರವಣಿಗೆ ನಡೆಸಿದ ಬಳಿಕ ಅಂತ್ಯಗೊಳಿಸುವುದಾಗಿ ಪಟ್ಟು ಹಿಡಿದರು. ಅಲ್ಲದೆ ಕೆ.ಆರ್.ವೃತ್ತದ ಮಾರ್ಗ ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ನೀಡಿದ ಸೂಚನೆ ಮೇರೆಗೆ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕೆಲವರನ್ನು ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್, ಮತ್ತೆ ಕೆಲವರನ್ನು ಸಿಎಆರ್ ಮೈದಾನಕ್ಕೆ ಕರೆದೊಯ್ದರು. ಅವರನ್ನು ಸಂಜೆ ವೇಳೆಗೆ ಬಿಡುಗಡೆ ಮಾಡಿದರು.

ಬಿಕೋ ವಾತಾವರಣ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಸಂತೇಪೇಟೆ, ಚಿಕ್ಕಗಡಿಯಾರ ವೃತ್ತ, ವಿನೋಬಾ ರಸ್ತೆ, ರಮಾವಿಲಾಸ ರಸ್ತೆ ಸೇರಿದಂತೆ ಮೈಸೂರಿನ ಹೃದಯಭಾಗದಲ್ಲಿ ಬೆಳಿಗ್ಗೆ 7ರಿಂದ 12 ಗಂಟೆವರೆಗೆ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿತ್ತು. ಮಧ್ಯಾಹ್ನದ 12 ಗಂಟೆ ಬಳಿಕ ಅಂಗಡಿಗಳು ತೆರೆದವು. ಸಂಜೆ ವೇಳೆಗೆ ವಹಿವಾಟು ಸಹಜ ಸ್ಥಿತಿಯತ್ತ ಮರಳಿತು.

ವಾಹನ ಸಂಚಾರವೂ ವಿರಳ: ಬಂದ್ ಹಿನ್ನೆಲೆಯಲ್ಲಿ ಮೈಸೂರಲ್ಲಿ ಸೋಮವಾರ ಬೆಳಗ್ಗೆಯಿಂದ ಮದ್ಯಾಹ್ನದವರೆಗೂ ವಾಹನ ಸಂಚಾರ ವಿರಳವಾಗಿತ್ತು. ಬಹುತೇಕ ಸಿಗ್ನಲ್‍ಗಳನ್ನು ಆಫ್ ಮಾಡಲಾಗಿತ್ತು. ಆಟೋ ರಿಕ್ಷಾ, ಟ್ಯಾಕ್ಸಿಗಳ ಸಂಖ್ಯೆಯೂ ಕಡಿಮೆಯಿತ್ತು.

ಸ್ಥಬ್ದವಾಯ್ತು ಎಪಿಎಂಸಿ: ಕರ್ನಾಟಕ ಬಂದ್‍ಗೆ ಎಪಿಎಂಸಿ ವರ್ತಕರು ಸಂಪೂರ್ಣ ವಾಗಿ ಬೆಂಬಲ ಘೋಷಿಸಿದ್ದರಿಂದ ಎಪಿಎಂಸಿಯಲ್ಲಿನ ಎಲ್ಲಾ ವಹಿವಾಟು ಸ್ಥಗಿತಗೊಂಡಿ ದ್ದವು. ಎಪಿಎಂಸಿ ಮುಂದೆ ಸಾಂಕೇತಿಕವಾಗಿ ವರ್ತಕರು ಪ್ರತಿಭಟನೆ ನಡೆಸಿದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿದರು. ಇದರಿಂದ ಸದಾ ರೈತರು, ವರ್ತಕರು ಹಾಗೂ ನೌಕರರಿಂದ ಗಿಜಿಗುಡುತ್ತಿದ್ದ ಎಪಿಎಂಸಿ ಮಾರುಕಟ್ಟೆ ಇಂದು ಮೌನಕ್ಕೆ ಶರಣಾಗಿತ್ತು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ವಿವಿಧ ಸಂಘಟನೆಗಳ ಮುಖಂಡರಾದ ಪ್ರಸನ್ನ ಗೌಡ, ದ್ಯಾವಪ್ಪನಾಯಕ, ಶಿವಶಂಕರ್, ಉಗ್ರ ನರಸಿಂಹೇಗೌಡ, ಭಾನು ಮೋಹನ್, ಸೀಮಾ, ಸಂಧ್ಯಾ, ಚಂದ್ರಶೇಖರ್ ಮೇಟಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 

 

 

Translate »