ಸಿಗದ ಮೊಬೈಲ್ ನೆಟ್‍ವರ್ಕ್… ವಿದ್ರ್ಯಾರ್ಥಿಗಳಿಂದ ನಿತ್ಯ ವರ್ಕ್‍ಔಟ್…
ಕೊಡಗು

ಸಿಗದ ಮೊಬೈಲ್ ನೆಟ್‍ವರ್ಕ್… ವಿದ್ರ್ಯಾರ್ಥಿಗಳಿಂದ ನಿತ್ಯ ವರ್ಕ್‍ಔಟ್…

July 13, 2021

ವಿರಾಜಪೇಟೆ, ಜು.12-ಮರಗಳ ಮೇಲೆ ಹತ್ತಿರುವ ಯುವಕರ ಕೈಯಲ್ಲಿ ಮೊಬೈಲ್… ಬೆಟ್ಟ-ಗುಡ್ಡಗಳ ಮೇಲೆ ಕುಳಿತಿರುವ ಮಕ್ಕಳ ಕೈಯಲ್ಲೂ ಮೊಬೈಲ್… ಮನೆಯಿಂದ ಕಿ.ಮೀ. ದೂರಲ್ಲಿರುವ ಬೃಹತ್ ಬಂಡೆ ಕಲ್ಲುಗಳ ಮೇಲೆ ಮೊಬೈಲ್ ಹಿಡಿದಿರುವ ಮಕ್ಕಳು..!
ಇದು ವಿರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡು ಬರುವ ಚಿತ್ರಣ. ಇದೇನು ಮೊಬೈಲ್ ಚಾಳಿಯೇ? ಖಂಡಿತ ಅಲ್ಲ. ಕೊಡಗಿನ ಗ್ರಾಮೀಣ ಭಾಗಗಳ ಮಕ್ಕಳು ಮೊಬೈಲ್ ನೆಟ್‍ವರ್ಕ್‍ಗಾಗಿ ಪಡುತ್ತಿರುವ ಪರದಾಟ. ಇದಕ್ಕೆ ಸರ್ಕಾರ ಇಟ್ಟಿರುವ ಹೆಸರು `ಆನ್‍ಲೈನ್ ಶಿಕ್ಷಣ’. ಗ್ರಾಮೀಣ ಭಾಗದ ಈ ದೃಶ್ಯಗಳು ನೆಟ್‍ವರ್ಕ್‍ಗಾಗಿ ವಿದ್ಯಾರ್ಥಿ ಗಳು ವರ್ಕ್‍ಔಟ್ ಮಾಡಬೇಕಾದ ಅನಿವಾರ್ಯತೆ ವಿವರಿಸುತ್ತದೆ.
ಕೊಡಗು ಜಿಲ್ಲೆಯ ಗ್ರಾಮೀಣ ಭಾಗ ಗಳಲ್ಲಿ ನೆಟ್‍ವರ್ಕ್ ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕೆಗೆ ತೊಡಕಾಗಿದೆ. ವಿರಾಜ ಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯ ತರ್ಮೆಮೊಟ್ಟೆ, ಬಾರಿಕಾಡು, ಕೊಟ್ಟೋಳಿ, ತೋಮರ ಗ್ರಾಮದ ಕೊರ್ತಿ ಕಾಡು ಭಾಗಗಳು ಭಾರೀ ಮಳೆ ಬೀಳುವ ತಂತಿಗಳ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ಬೀಳುವುದು, ವಾರ ಗಟ್ಟಲೇ ವಿದ್ಯುತ್ ಸಂಪರ್ಕ ಕಡಿತಗೊಳ್ಳು ವುದು ಇಲ್ಲಿ ಸರ್ವೇ ಸಾಮಾನ್ಯ. ಅಲ್ಲದೆ ನೆಟ್‍ವರ್ಕ ಸಮಸ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಈ ಭಾಗದ ಮಕ್ಕಳ ಪಾಲಿಗೆ ಆನ್‍ಲೈನ್ ಶಿಕ್ಷಣ ಗಗನ ಕುಸುಮವಾಗಿದೆ.

ಈ ಭಾಗದಲ್ಲಿ ಸುಮಾರು 100ಕ್ಕೂ ಅಧಿಕ ಮಕ್ಕಳು ಶಾಲಾ-ಕಾಲೇಜು ಸೇರಿ ದಂತೆ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಗುಡ್ಡಗಾಡು ಪ್ರದೇಶವಾದ ಇಲ್ಲಿ ಮೊಬೈಲ್ ಸಂಪರ್ಕ ಸಾಧಿಸಲು ಹರಸಾಹಸ ಪಡ ಬೇಕಾಗಿದೆ. ಹೀಗಾಗಿ ಇಲ್ಲಿನ ಮಕ್ಕಳು ನಿತ್ಯ ಬೆಟ್ಟಗುಡ್ಡ, ಎತ್ತರದ ಮರಗಳ ಮೇಲೇರಿ ನೆಟ್‍ವರ್ಕ್ ಹುಡುಕಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನೆಟ್‍ವರ್ಕ್ ದೊರೆಯುವ ಸ್ಥಳ ಗುರುತಿಸುವುದೇ ಒಂದು ಸಾಹಸದ ಕೆಲಸವಾಗಿದೆ. ಇದಕ್ಕಾಗಿ ಮನೆಯಿಂದ ಕಿ.ಮೀಗಳ ದೂರ ಕ್ರಮಿಸಿ ಆನ್‍ಲೈನ್ ತರಗತಿಯಲ್ಲಿ ಶಿಕ್ಷಣ ಪಡೆ ಯುವ ಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳು ಮನೆಯಿಂದ ತೆರಳುವ ಮಾರ್ಗ ದಲ್ಲಿ ಕಾಡು ಪ್ರಾಣಿಗಳ ಉಪಟಳವಿದ್ದು, ತಮ್ಮ ಕೆಲಸ ಕಾರ್ಯ ಬದಿಗೊತ್ತಿ ಪೋಷ ಕರೂ ಕೂಡ ವಿದ್ಯಾರ್ಥಿಗಳ ಜೊತೆಯಲ್ಲಿ ಸಾಗುವ ಅನಿವಾರ್ಯತೆ ಎದುರಾಗಿದೆ. ತುರ್ತು ಸಂದೇಶ ನೀಡಬೇಕು ಎಂದರೆ `ನೀವು ಕರೆ ಮಾಡಿರುವ ವ್ಯಕ್ತಿಯು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’ ಎಂಬ ಧ್ವನಿ ದಿನದ 24 ಗಂಟೆಗಳಲ್ಲೂ ಲಭ್ಯವಾಗು ತ್ತದೆ ಎಂದು ಈ ಭಾಗದ ಗ್ರಾಮಸ್ಥರು ನೊಂದು ನುಡಿಯುತ್ತಾರೆ. ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ನೆಟ್‍ವರ್ಕ್ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Translate »