ಮೈಸೂರು-ಬೆಂಗಳೂರುಹೆದ್ದಾರಿಗೆ `ಕಾವೇರಿ ಎಕ್ಸ್‍ಪ್ರೆಸ್ ವೇ’ ನಾಮಕರಣಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ
ಮೈಸೂರು

ಮೈಸೂರು-ಬೆಂಗಳೂರುಹೆದ್ದಾರಿಗೆ `ಕಾವೇರಿ ಎಕ್ಸ್‍ಪ್ರೆಸ್ ವೇ’ ನಾಮಕರಣಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ

December 22, 2022

ಮೈಸೂರು,ಡಿ.21(ಪಿಎಂ)-ಪ್ರಸ್ತುತ ನಿರ್ಮಾಣವಾಗುತ್ತಿರುವ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಗೆ `ಕಾವೇರಿ ಎಕ್ಸ್‍ಪ್ರೆಸ್ ವೇ’ ಎಂದು ನಾಮಕರಣ ಮಾಡಬೇಕು ಎಂಬುದು ಸೇರಿದಂತೆ ರಾಜ್ಯದ 6 ರಾಜ್ಯ ಹೆದ್ದಾರಿಗಳನ್ನು `ರಾಷ್ಟ್ರೀಯ ಹೆದ್ದಾರಿ’ಯಾಗಿ ಘೋಷಿಸಬೇಕೆಂಬ ಸಂಸದ ಪ್ರತಾಪ್‍ಸಿಂಹ ಅವರ ಮನವಿಗೆ ಕೇಂದ್ರ ಭೂ ಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್‍ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನವದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದರು, ಭೇಟಿ ಮಾಡಿ ಸಲ್ಲಿಸಿದ ಸದರಿ ಮನವಿಗೆ ಅವರು ಸಕರಾತ್ಮಕ ಸ್ಪಂದಿಸಿದ್ದಾರೆ. ಸಂಸದರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಉತ್ತರ ಪ್ರದೇಶದ ಯಮುನಾ ಎಕ್ಸ್‍ಪ್ರೆಸ್ ವೇ, ಗಂಗಾ ಎಕ್ಸ್‍ಪ್ರೆಸ್ ವೇ, ಮಧ್ಯಪ್ರದೇಶದ ನರ್ಮದಾ ಎಕ್ಸ್‍ಪ್ರೆಸ್ ವೇ’ ಇರುವಂತೆಯೇ ಮೈಸೂರು-ಬೆಂಗಳೂರು ಹೆದ್ದಾರಿಗೆ `ಕಾವೇರಿ ಎಕ್ಸ್‍ಪ್ರೆಸ್ ವೇ’ ಎಂದು ನಾಮಕರಣ ಮಾಡುವಂತೆ ಕೇಂದ್ರ ಸಚಿವ ನಿತಿನ್‍ಗಡ್ಕರಿ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಮತ್ತು ಕಾವೇರಿ ನದಿಗಳನ್ನು ಭಾರತದ ಏಳು ಅತ್ಯಂತ ಪವಿತ್ರ ನದಿಗಳೆಂದು ಪರಿಗಣಿಸಲಾಗಿದೆ. ಕಾವೇರಿ ನದಿಯು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ತಲಕಾವೇರಿಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ತನ್ನ ಮೂಲ ಹೊಂದಿದೆ. ಈ ನದಿಯು ಭಗವಾನ್ ವಿಷ್ಣುವಿನ ದಂತಕಥೆಯನ್ನು ಹೊಂದಿದೆ.

ಭಾರತಮಾಲಾ ಪರಿಯೋಜನೆ ಹಂತ-ಎಲ್ ಅಡಿಯಲ್ಲಿ ಸದರಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕಾರ್ಯಗತಗೊಳಿಸಲಾಗುತ್ತಿದೆ. ಈ ಹೆದ್ದಾರಿ ನಿರ್ಮಾಣದಿಂದ ಆರ್ಥಿಕ, ಸಾಮಾಜಿಕ ಪ್ರಗತಿ ಸೇರಿದಂತೆ ಬಹು ಉಪಯೋಗಗಳು ಆಗಲಿವೆ. ಈ ಹೆದ್ದಾರಿಗೆ `ಕಾವೇರಿ ಎಕ್ಸ್‍ಪ್ರೆಸ್ ವೇ’ ಎಂಬ ನಾಮಕರಣದ ಮೂಲಕ ಪವಿತ್ರ ಕಾವೇರಿ ನದಿಗೆ ಗೌರವ ಸಲ್ಲಿಸಬಹುದು ಎಂದು ಸಂಸದರು ತಮ್ಮ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿ: ಚನ್ನರಾಯಪಟ್ಟಣ-ಹೊಳೆನರಸೀಪುರ-ಅರಕಲಗೂಡು-ಕೊಡ್ಲಿಪೇಟೆ-ಮಡಿಕೇರಿ-ವಿರಾಜಪೇಟೆ ಮಾರ್ಗವಾಗಿ ಮಾಕುಟ್ಟ (ಕೇರಳ ಬಾರ್ಡರ್) ಸಂಪರ್ಕಿಸುವ ಹೆದ್ದಾರಿ (198 ಕಿ.ಮೀ.) ಸೇರಿದಂತೆ ರಾಜ್ಯದ 6 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವಂತೆಯೂ ಸಂಸದರು ಮನವಿ ಸಲ್ಲಿಸಿದರು. ಮೈಸೂರು-ಹುಣಸೂರು-ಗೋಣಿಕೊಪ್ಪ ಮಾರ್ಗವಾಗಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (160 ಕಿ.ಮೀ.) ಹೆದ್ದಾರಿ, ಕೆಳಪಟ್ಟ-ಮಾನಂದವಾಡಿ-ಹೆಚ್.ಡಿ.ಕೋಟೆ-ಜಯಪುರ ಮಾರ್ಗವಾಗಿ ಮೈಸೂರು ಸಂಪರ್ಕಿಸುವ (90 ಕಿ.ಮೀ.) ಹೆದ್ದಾರಿ, ಶ್ರೀರಂಗಪಟ್ಟಣ-ಕೆ.ಆರ್.ಪೇಟೆ-ಚನ್ನರಾಯಪಟ್ಟಣ ಮಾರ್ಗವಾಗಿ ಅರಸೀಕೆರೆ ಸಂಪರ್ಕಿಸುವ (56.04 ಕಿ.ಮೀ.) ಹೆದ್ದಾರಿ, ಮಳವಳ್ಳಿಯಿಂದ ಮೈಸೂರು ಸಂಪರ್ಕಿಸುವ (50 ಕಿ.ಮೀ.) ಹೆದ್ದಾರಿ ಮತ್ತು ಪಾಂಡವಪುರ-ಅರಸೀಕೆರೆ ಮಾರ್ಗವಾಗಿ ಕೆ.ಆರ್.ಪೇಟೆ ಸಂಪರ್ಕಿಸುವ (110 ಕಿ.ಮೀ.) ಹೆದ್ದಾರಿ ಸೇರಿದಂತೆ 6 ರಾಜ್ಯ ಹೆದ್ದಾರಿಗಳನ್ನು `ರಾಷ್ಟ್ರೀಯ ಹೆದ್ದಾರಿ’ ಯಾಗಿ ಘೋಷಿಸುವಂತೆ ಸಂಸದರು ಮನವಿಯಲ್ಲಿ ಕೋರಿದ್ದಾರೆ.

Translate »