ದಿಢೀರ್ ಸಚಿವ ಮುರುಗೇಶ್ ನಿರಾಣಿಗೆ ವರಿಷ್ಠರ ಬುಲಾವ್
ಮೈಸೂರು

ದಿಢೀರ್ ಸಚಿವ ಮುರುಗೇಶ್ ನಿರಾಣಿಗೆ ವರಿಷ್ಠರ ಬುಲಾವ್

February 24, 2021

ಬೆಂಗಳೂರು, ಫೆ.23(ಕೆಎಂಶಿ)-ಪಂಚಮಸಾಲಿ ಸಮುದಾಯ ಮೀಸಲಾತಿ ಹೋರಾಟ ರಾಜ್ಯ ರಾಜಕೀಯ ಚಿತ್ರಣವನ್ನು ಬದಲಿಸುವಂತೆ ಕಾಣುತ್ತಿದೆ. ಈ ಹೋರಾಟವನ್ನು ಬಿಜೆಪಿ ವರಿಷ್ಠರು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಕುಂದು ತರುತ್ತದೋ ಇಲ್ಲ ಅವರ ವಿರೋಧಿ ಗಳ ಮಟ್ಟ ಹಾಕುತ್ತದೋ ಕಾದು ನೋಡಬೇಕು.

ಗಣಿ ಸಚಿವ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡ ಮುರುಗೇಶ್ ನಿರಾಣಿ ಅವರನ್ನು ಕೇಂದ್ರ ವರಿಷ್ಠರು ಹಠಾತ್ ಆಗಿ ಇಂದು ದೆಹಲಿಗೆ ಕರೆಸಿಕೊಂಡು, ಚರ್ಚೆ ಮಾಡಿರುವುದೇ ರಾಜಕೀಯ ವಲಯದಲ್ಲಿ ಗುಸುಗುಸುಗೆ ಕಾರಣ ವಾಗಿದೆ. ಮೈಸೂರು ಪ್ರವಾಸದಲ್ಲಿದ್ದ ನಿರಾಣಿ ಅವರನ್ನು ತಕ್ಷಣವೇ ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವಾಲಯ ಸಂದೇಶ ರವಾನೆ ಮಾಡಿದ್ದಲ್ಲದೆ, ನಿಮಗೆ ಅಮಿತ್ ಶಾ ಭೇಟಿಗೆ 25 ನಿಮಿಷಗಳ ಕಾಲ ನಿಗದಿಪಡಿಸಿದ್ದೇವೆ ಎಂದಿತ್ತು. ತಾವು ಪ್ರವಾಸದಲ್ಲಿದ್ದು, ಸಂಜೆ ವೇಳೆಗೆ ದೆಹಲಿಗೆ ಬರುವುದಾಗಿ ನಿರಾಣಿಯವರು ಮಾಡಿದ ಮನವಿಗೂ ಸಚಿವಾಲಯ ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ ಕೇಂದ್ರ ಗೃಹ ಸಚಿವಾಲಯವೇ ನಿನ್ನೆ ಮುಂಜಾನೆ ವಿಮಾನದ ಟಿಕೆಟ್ ಕಾಯ್ದಿರಿಸಿತ್ತು. ತಡರಾತ್ರಿ ಮೈಸೂರಿನಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿದ ನಿರಾಣಿ ಅವರು, ದೆಹಲಿ ಯಲ್ಲಿಂದು ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿ, ನಗರಕ್ಕೆ ಹಿಂತಿರುಗಿದ್ದಾರೆ.

ನಿರಾಣಿ ಅವರನ್ನು ರಾಜಕೀಯ ದಾಳವಾಗಿ ಬಳಸಿ ಕೊಳ್ಳಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ. ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪಡೆದ ಗೃಹ ಸಚಿವರು, ಅವ ರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ವರಿಷ್ಠರು ನೀಡುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದ್ದಾರೆ. ಗೃಹ ಸಚಿವರ ಭೇಟಿಯ ನಂತರ ನಡ್ಡಾ ಅವರ ಜೊತೆಯು ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆದಿದೆ. ನಿರಾಣಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಯಡಿಯೂರಪ್ಪ ಆಸಕ್ತಿ ತೋರಿರಲಿಲ್ಲ. ವರಿಷ್ಠರ ಸೂಚನೆ ಮೇರೆಗೆ ಈಗ ನಿರಾಣಿ ಮಂತ್ರಿಯಾಗಿದ್ದಾರೆ.

ನಿರಾಣಿ ಅವರನ್ನೇ ಕರ್ನಾಟಕದ ಮುಂದಿನ ಬೆಳವಣಿಗೆಗಳಿಗೆ ಸೂತ್ರದಾರರನ್ನಾಗಿ ಮಾಡಿಕೊಳ್ಳಲು ವರಿಷ್ಠರು ಹೊರಟಿದ್ದಾರೆ ಎನ್ನಲಾಗಿದೆ. ನಿರಾಣಿ ಭೇಟಿಗೂ ಮುನ್ನ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿರುವ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕರೆಸಿಕೊಂಡು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸಮಾಲೋಚನೆ ಮಾಡಿದ್ದಾರೆ.

ಗಣಿ ಸಚಿವ ನಿರಾಣಿಗೆ ಆಘಾತ
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹೀರೇನಾಗವಲ್ಲಿ ಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಿಸಿ 6 ಮಂದಿ ಸಾವನ್ನಪ್ಪಿರುವ ಘಟನೆಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಆಘಾತ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಮೃತರ ಕುಟುಂಬ ಸದಸ್ಯರಿಗೆ ಮತ್ತು ಗಾಯಾಳುಗಳಿಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಶಿವಮೊಗ್ಗ ಸ್ಫೋಟದ ನಂತರ ಮತ್ತೊಂದು ದುರಂತ ನಡೆದಿರುವುದು ತನಗೆ ತೀವ್ರ ನೋವಾಗಿದೆ. ಜಿಲೆಟಿನ್ ಕಡ್ಡಿ ಸ್ಫೋಟ ದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿರುವುದು ತುಂಬಾ ನೋವು ತಂದಿದೆ ಎಂದು ಕಂಬನಿ ಮಿಡಿ ದಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿ ಸುತ್ತೇನೆ. ಗಾಯಾಳುಗಳ ಶೀಘ್ರ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಂತ್ರಸ್ತರ ಕುಟುಂಬಗಳಿಗೆ ಮತ್ತು ಗಾಯಗೊಂಡ ವ್ಯಕ್ತಿಗೆ ಸರ್ಕಾರ ಎಲ್ಲಾ ಸಹಾಯವನ್ನು ನೀಡಲಿದೆ ಎಂದು ಅಭಯ ನೀಡಿದ್ದಾರೆ. ಘಟನೆಗೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕಾನೂನು ತೆಗೆದುಕೊಳ್ಳಲಾಗುವುದು. ಸರ್ಕಾರ ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಶಿವಮೊಗ್ಗ ಸ್ಫೋಟಕ್ಕೆ ಮೊದಲೇ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತೇ? ಎಂಬ ಬಗ್ಗೆ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಯಾರು ಎಷ್ಟೇ ಪ್ರಭಾವ ಬೀರಿ ದರೂ ಆರೋಪಿಗಳನ್ನು ರಕ್ಷಣೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕೆಲವು ಅಧಿಕೃತ ಕೆಲಸಗಳಿಂದಾಗಿ ನಾನು ದೆಹಲಿಯಲ್ಲಿದ್ದೇನೆ. ಬೆಂಗಳೂರಿಗೆ ಬಂದಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಸಚಿವರಾದ ಬಸವರಾಜ್ ಬೊಮ್ಮಾಯಿ, ಡಾ.ಸುಧಾಕರ್, ಡಿಸಿ, ಎಸ್ಪಿ ಮತ್ತು ನಮ್ಮ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂಥ ದುರಂತಗಳು ಮರುಕಳಿಸದಂತೆ ಎಚ್ಚರವಹಿಸಲು ನುರಿತ ಕೆಲಸಗಾರರಿಗೆ ತರಬೇತಿ ನೀಡುವುದು ಮತ್ತು ಗಣಿಗಾರಿಕೆ ಶಾಲೆಯ ರಚನೆಯ ಮಹತ್ವದ ಬಗ್ಗೆ ನಿರಾಣಿ ಪುನರುಚ್ಚರಿಸಿದರು.

 

 

Translate »