ಮುತ್ತಪ್ಪ ರೈ ಇನ್ನಿಲ್ಲ
ಮೈಸೂರು

ಮುತ್ತಪ್ಪ ರೈ ಇನ್ನಿಲ್ಲ

May 16, 2020

ಬೆಂಗಳೂರು, ಮೇ 15-ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಹಾಗೂ ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಶುಕ್ರವಾರ ಮುಂಜಾನೆ 2.10ರ ಸುಮಾರಿನಲ್ಲಿ ಬೆಂಗಳೂರಿನ ಮಣಿ ಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಒಂದು ವರ್ಷದಿಂದ ಲಿವರ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆ ಯುಸಿ ರೆಳೆದಿದ್ದಾರೆ. ಇಂದು ಮಧ್ಯಾಹ್ನ 2.15ರ ಸುಮಾರಿಗೆ ಬಿಡದಿ ಬಳಿ ಇರುವ ಅವರ ನಿವಾಸಕ್ಕೆ ಮೃತದೇಹವನ್ನು ತರಲಾ ಯಿತು. ಮನೆ ಮುಂದೆ 5 ನಿಮಿಷಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶ ನಕ್ಕೆ ಅವಕಾಶ ಮಾಡಿಕೊಟ್ಟು, ಅವರ ತೋಟದ ಮನೆ ಅಂಗಳದಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಬಂಟ್ಸ್ ಸಮಾಜದ ವಿಧಿ-ವಿಧಾನಗಳಿಂದ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದರು. ಈ ವೇಳೆ ಅವರ ಅಭಿ ಮಾನಿಗಳು ಗಾಳಿಯಲ್ಲಿ ಗುಂಡು ಹಾರಿ ಸುವ ಮೂಲಕ ಅಗಲಿದ ಮುತ್ತಪ್ಪ ರೈ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.

ಆಕಸ್ಮಿಕವಾಗಿ ಭೂಗತ ಜಗತ್ತಿಗೆ ಕಾಲಿಟ್ಟು ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿ, ನಂತರ ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮುತ್ತಪ್ಪ ರೈ, ಪುತ್ತೂರಿನ ನಾರಾಯಣ ರೈ ಮತ್ತು ಸುಶೀಲ ರೈ ದಂಪತಿಯ ಪುತ್ರ. ಇವರು ಕೊಡಗಿನ ರೇಖಾ ಎಂಬುವರನ್ನು ವಿವಾಹವಾಗಿದ್ದರು. ಈ ದಂಪತಿಗೆ ರಿಕ್ಕಿ ಮತ್ತು ರಾಖಿ ಎಂಬ ಇಬ್ಬರು ಪುತ್ರರಿದ್ದಾರೆ. ರೇಖಾ ಅವರು ತೀವ್ರ ಅನಾರೋಗ್ಯಕ್ಕೀ ಡಾಗಿ 2013ರಲ್ಲಿ ಸಿಂಗಪುರದ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದರು. ಆನಂತರ ರೈ ವಿಧವೆಯೊಬ್ಬರನ್ನು ವಿವಾಹವಾಗಿದ್ದರು. ಸಕಲೇಶಪುರದ ಕಾಫಿ ಎಸ್ಟೇಟ್ ವಿವಾದದ ಮೂಲಕ ಆಕಸ್ಮಿಕವಾಗಿ ಭೂಗತ ಲೋಕಕ್ಕೆ ಕಾಲಿಟ್ಟ ಮುತ್ತಪ್ಪ ರೈ,ನಂತರ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಕಚೇರಿ ತೆರೆದು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಜೊತೆಗೆ ಐಷಾರಾಮಿ ಬಾರ್ ನಡೆಸುತ್ತಿದ್ದರು. 1993-94ರ ಕಾಲಘಟ್ಟದಲ್ಲಿ ಬೆಂಗಳೂರಿ ನಲ್ಲಿ ರೌಡಿ ಚಟುವಟಿಕೆಗಳು ತೀವ್ರಗೊಂಡಿದ್ದವು. ಆ ವೇಳೆ ಬೆಂಗಳೂರಿನಿಂದ ಮುಂಬೈಗೆ ರೈ ಸ್ಥಳಾಂತರಗೊಂಡರು. ಬೆಂಗಳೂರಿನ ಭೂಗತ ಜಗತ್ತಿನ ಡಾನ್ ಎಂದೇ ಕರೆಯಲ್ಪಡುತ್ತಿದ್ದ ಜಯರಾಜ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡುವ ಮೂಲಕ ಮುತ್ತಪ್ಪ ರೈ ಭೂಗತ ಜಗತ್ತಿನಲ್ಲಿ ದೊಡ್ಡ ಹೆಸರು ಗಳಿಸಿದ್ದರು. ನಂತರ ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದ ಅವರು, ಅಲ್ಲಿ ಹೋಟೆಲ್ ಉದ್ಯಮ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ದಾವೂದ್ ಇಬ್ರಾಹಿಂನನ್ನು ಎದುರು ಹಾಕಿಕೊಂಡಿದ್ದ ರೈ, ದುಬೈನಿಂದಲೇ ತನ್ನ ಸಹಚರರ ಮೂಲಕ ಬೆಂಗಳೂರಿನಲ್ಲಿ ಚಟುವಟಿಕೆ ನಡೆಸುತ್ತಿದ್ದರು ಎಂದು ಹೇಳಲಾಗಿದ್ದು, ಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣ ಸೇರಿದಂತೆ ಸುಮಾರು 12 ಪ್ರಕರಣಗಳಲ್ಲಿ ಬೆಂಗಳೂರು ಮತ್ತು ಮುಂಬೈ ಪೊಲೀಸರಿಗೆ ಬೇಕಾಗಿದ್ದ ಮುತ್ತಪ್ಪ ರೈ ವಿರುದ್ಧ ಐಪಿಎಸ್ ಅಧಿಕಾರಿ ಕೆಂಪಯ್ಯ ಬೆಂಗಳೂರಿನ ಡಿಸಿಪಿ ಆಗಿದ್ದ ವೇಳೆ ಇಂಟರ್‍ಪೋಲ್‍ಗೆ ಮಾಹಿತಿ ನೀಡಿ ಹುಡುಕಾಟ ನಡೆಸಲಾಗಿತ್ತು. 2002ರಲ್ಲಿ ಅಂದಿನ ಅಪರಾಧ ವಿಭಾಗದ ಡಿಸಿಪಿ ರವೀಂದ್ರಪ್ರಸಾದ್, ಸಿಸಿಬಿ ಇನ್ಸ್‍ಪೆಕ್ಟರ್‍ಗಳಾದ ಎಸ್.ಕೆ.ಉಮೇಶ್ ಮತ್ತು ಗಾಂವ್ಕರ್ ಅವರು ದುಬೈಗೆ ತೆರಳಿ ಮುತ್ತಪ್ಪ ರೈನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲಾ ಪ್ರಕರಣಗಳಿಂದಲೂ ಮುತ್ತಪ್ಪ ರೈ ಖುಲಾಸೆಗೊಂಡಿದ್ದರು.

ಬಿಡದಿಯಲ್ಲಿ ಐಷಾರಾಮಿ ಬಂಗಲೆ ನಿರ್ಮಿಸಿಕೊಂಡಿದ್ದ ಮುತ್ತಪ್ಪ ರೈ, ದಾವೂದ್ ಇಬ್ರಾಹಿಂನಿಂದ ತಮಗೆ ಕೊಲೆ ಬೆದರಿಕೆ ಇದ್ದ ಕಾರಣದಿಂದ ಖಾಸಗಿ ಅಂಗ ರಕ್ಷಕರನ್ನು ನೇಮಕ ಮಾಡಿಕೊಂಡಿದ್ದರು. ಅಲ್ಲದೇ ಜಯ ಕರ್ನಾಟಕ ಸಂಘಟನೆಯನ್ನು ಸ್ಥಾಪಿಸಿ ತಮ್ಮನ್ನು ಸಂಪೂರ್ಣವಾಗಿ ಸಮಾಜ ಸೇವೆಗೆ ತೊಡಗಿಸಿಕೊಂಡರು.

ರಾಜ್ಯಾದ್ಯಂತ ತಮ್ಮದೇ ಆದ ಯುವ ಪಡೆ ಕಟ್ಟಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ಅವರ ಜೀವನಾಧಾರಿತ ಕಥೆಯನ್ನು ಚಲನಚಿತ್ರವಾಗಿ ನಿರ್ಮಾಣ ಮಾಡಲು ಬಾಲಿವುಡ್‍ನ ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮ ಮುಂದೆ ಬಂದಿದ್ದರು. `ರೈ’ ಎಂಬ ಹೆಸರಿನಲ್ಲಿ ಅವರು ಚಲನಚಿತ್ರ ನಿರ್ಮಾಣ ಮಾಡಲು ಮುತ್ತಪ್ಪ ರೈ ಒಪ್ಪಿಗೆ ಸೂಚಿಸಿ, ತನ್ನ ಜೀವನದ ಸಂಪೂರ್ಣ ವಿವರಗಳನ್ನು ಅವರಿಗೆ ನೀಡಿದ್ದರು. ಈ ಚಿತ್ರವು ಮಂಗಳೂರು, ಬೆಂಗಳೂರು, ಮುಂಬೈ, ದುಬೈ ಮತ್ತು ಲಂಡನ್‍ನಲ್ಲಿ ಚಿತ್ರೀಕರಣ ಗೊಂಡಿದ್ದು, ರಾಮ್ ಗೋಪಾಲ್ ವರ್ಮ ತನ್ನ ಜೀವನಾಧಾರಿತ ಕಥೆಯನ್ನು ಚಲನಚಿತ್ರ ವಾಗಿ ಮಾಡುತ್ತಿರುವ ಶೈಲಿ ಬಗ್ಗೆ ಮುತ್ತಪ್ಪ ರೈ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಬಿ.ಕಾಂ. ಪದವೀಧರರಾದ ಮುತ್ತಪ್ಪ ರೈ, ಆರಂಭದಲ್ಲಿ ವಿಜಯಾ ಬ್ಯಾಂಕ್ ಉದ್ಯೋಗಿ ಯಾಗಿ ಕೆಲ ವರ್ಷ ಕೆಲಸ ಮಾಡಿದ್ದರು. ನಂತರ ಭೂಗತ ಲೋಕಕ್ಕೆ ಕಾಲಿಟ್ಟರು.

ಕ್ಯಾನ್ಸರ್ ಬಹಿರಂಗಪಡಿಸಿದ್ದ ರೈ
ಬೆಂಗಳೂರು, ಮೇ 15-ಜಯ ಕರ್ನಾಟಕ ಸಂಸ್ಥಾಪಕ ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ತಾವು ಲಿವರ್ ಕ್ಯಾನ್ಸರ್‍ನಿಂದ ಕೊನೆಯ ದಿನಗಳನ್ನು ಎಣಿಸುತ್ತಿರುವು ದನ್ನು ಕಳೆದ ಜನವರಿಯಲ್ಲಿ ಸ್ವತಃ ಮಾಧ್ಯಮ ಗೋಷ್ಠಿ ನಡೆಸಿ ಬಹಿರಂಗಪಡಿಸಿದ್ದರು. ವರ್ಷದ ಹಿಂದೆ ಕುಕ್ಕೆಗೆ ಹೋಗುವಾಗ ಬೆನ್ನು ನೋವು ಕಾಣಿಸಿಕೊಂಡಿತು. ನಂತರ ಪರೀಕ್ಷೆ ಮಾಡಲಾಗಿ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ದೆಹಲಿಯ ಮ್ಯಾಕ್ಸ್, ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಕ್ಯಾನ್ಸರ್ ಮೆದುಳಿಗೂ ತಗುಲಿತ್ತು. ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದರೆ ಶೇ.90ರಷ್ಟು ಗುಣವಾಗುವುದಾಗಿ ವೈದ್ಯರು ಹೇಳಿದರು. ಆದರೆ ನಾನು ನನ್ನ ಜನರನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಆದ್ದರಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದರು. ನನಗೀಗ 68 ವರ್ಷ ವಯಸ್ಸು. 5 ಗುಂಡು ಬಿದ್ದರೂ ಬದುಕಿರುವ ನಾನು ಸಾವಿಗೆ ಹೆದರುವುದಿಲ್ಲ. ನಾನೀಗ ವಿಲ್‍ಪವರ್‍ನಿಂದ ಬದುಕುತ್ತಿದ್ದೇನೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದ್ದರು.

ವರ್ಷಕ್ಕೆ 25ರಿಂದ 30 ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇನೆ. ಆಸ್ತಿ ಸಂಬಂಧ ಈಗಾಗಲೇ ವಿಲ್ ಮಾಡಿಸಿದ್ದು, ಅದರ ಬಗ್ಗೆ ಮಕ್ಕಳಿಗೆ ತಿಳಿಸಿದ್ದೇನೆ. 15-20 ವರ್ಷದಿಂದ ನನ್ನ ಜೊತೆ ಇರುವವರಿಗೆ ಒಂದೊಂದು ನಿವೇಶನ ಕೊಡುವಂತೆ ಮಕ್ಕಳಿಗೆ ಹೇಳಿದ್ದೇನೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ ಎಂದು ತಮ್ಮ ಅಂತಿಮ ದಿನಗಳ ಸಿದ್ಧತೆ ಬಗ್ಗೆ ಮುತ್ತಪ್ಪ ರೈ ನಗು ನಗುತ್ತಲೇ ಉತ್ಸಾಹ ಹಾಗೂ ಆತ್ಮವಿಶ್ವಾಸದಿಂದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

ಮುತ್ತಪ್ಪ ರೈ ನಿಧನಕ್ಕೆ ಮೈಸೂರಲ್ಲಿ ಶ್ರದ್ಧಾಂಜಲಿ
ಮೈಸೂರು,ಮೇ15(ಆರ್‍ಕೆಬಿ)-ಜಯ ಕರ್ನಾ ಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ನಿಧನಕ್ಕೆ ಸಂಘಟನೆಯ ಯುವ ಘಟಕದ ಅಧ್ಯಕ್ಷ ಅಜಯ್ ಶಾಸ್ತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಎನ್.ಮುತ್ತಪ್ಪ ರೈ ಕನ್ನಡ, ನೆಲ, ಜಲ, ಗಡಿ, ಭಾಷೆ ವಿಚಾರದಲ್ಲಿ ಹೋರಾಟಕ್ಕಾಗಿ 13 ವರ್ಷಗಳ ಹಿಂದೆ ಜಯ ಕರ್ನಾಟಕ ಸಂಘಟನೆ ಸ್ಥಾಪಿಸಿ, ಸರ್ಕಾರಿ ಕನ್ನಡ ಶಾಲೆ ಮುಚ್ಚದಂತೆ ಹೋರಾಟ ರೂಪಿಸಿದ್ದರು. ಏಕ ರೂಪ ಶಿಕ್ಷಣ ನೀತಿ ಹೋರಾಟ, ಕಾವೇರಿ ಮಹಾ ದಾಯಿ ಕಳಸಾ ಬಂಡೂರಿ ಹೋರಾಟ, ತಮಿಳುನಾಡು, ಪುದುಚೇರಿಯಲ್ಲಿ ಜಲವಿಕೋಪ ಸಂಭವಿಸಿದಾಗ ಅಗತ್ಯ ವಸ್ತುಗಳ ಪೂರೈಕೆ, 50 ಸಾವಿರ ಸ್ವಯಂ ಸೇವಕರೊಂದಿಗೆ ಬೆಂಗಳೂರಿನಲ್ಲಿ ಸ್ವಚ್ಛತಾ ಅಭಿ ಯಾನ, ಲಕ್ಷ ಆಟೋ ಚಾಲಕರಿಗೆ ಉಚಿತ ವಿಮೆ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದರು. ಅವರ ನಿಧನದಿಂದ ಜಯ ಕರ್ನಾ ಟಕ ಸಂಘಟನೆಯ ಸಹಸ್ರಾರು ಕಾರ್ಯಕರ್ತರಿಗೆ ನೋವಾಗಿದೆ. ಅವರ ಕುಟುಂಬಕ್ಕೆ, ಅಭಿಮಾನಿ ಗಳಿಗೆ ನೋವು ಭರಿಸುವ ಶಕ್ತಿ ದೊರೆಯಲಿ ಎಂದು ಶಾಸ್ತ್ರಿ ಪ್ರಾರ್ಥಿಸಿದ್ದಾರೆ.

ಪ್ರಜಾಪಾರ್ಟಿ: ಮುತ್ತಪ್ಪ ರೈ ನಿಧನಕ್ಕೆ ಶೋಕಿ ಸಿರುವ ಕರ್ನಾಟಕ ಪ್ರಜಾ ಪಾರ್ಟಿ(ರೈತ ಪರ್ವ) ಪದಾಧಿಕಾರಿಗಳು ಮೈಸೂರು ಕಚೇರಿಯಲ್ಲಿ ಶ್ರದ್ಧಾಂ ಜಲಿ ಸಲ್ಲಿಸಿದರು. ಪಕ್ಷದ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಣ್ಣ, ಉಪಾಧ್ಯಕ್ಷ ಎ.ಜಿ.ರಾಮಚಂದ್ರ ರಾವ್, ಬಿ.ಆದರ್ಶ್, ಲೋಕೇಶ್, ಹರೀಶ್, ವಿನಯ್, ರವಿ ಇದ್ದರು.

Translate »