ಮೈಸೂರಿನ ಸೌರಭ್, ಪೂಜಾ, ಡಾ.ಭಾನುಪ್ರಕಾಶ್‍ಗೆ ರ್ಯಾಂಕ್
ಮೈಸೂರು

ಮೈಸೂರಿನ ಸೌರಭ್, ಪೂಜಾ, ಡಾ.ಭಾನುಪ್ರಕಾಶ್‍ಗೆ ರ್ಯಾಂಕ್

May 24, 2023

ಮೈಸೂರು, ಮೇ 23(ಎಸ್‍ಬಿಡಿ)- ಕೇಂದ್ರ ಲೋಕ ಸೇವಾ ಆಯೋಗ (ಯುಪಿ ಎಸ್‍ಸಿ)ದ 2022ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟ ವಾಗಿದ್ದು, ಮೈಸೂರಿನ ಮೂವರು ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಮೈಸೂ ರಿನ ವಿಜಯನಗರದ ಕೆ.ಸೌರಭ್ 260, ಕುವೆಂಪು ನಗರದ ಎಂ. ಪೂಜಾ 390 ಹಾಗೂ ಕೆ.ಆರ್. ನಗರ ತಾಲೂಕಿನ ಡಾ. ಜೆ. ಭಾನುಪ್ರಕಾಶ್ 448ನೇ ರ್ಯಾಂಕ್ ಪಡೆಯುವ ಮೂಲಕ ನಾಗರಿಕ ಸೇವೆಗೆ ಸಜ್ಜಾಗಿದ್ದಾರೆ.
ಐಎಫ್‍ಎಸ್ ತರಬೇತಿಯಲ್ಲೇ ಸಾಧನೆ: ಉತ್ತರ ಖಂಡದ ಡೆಹರಾಡೂನ್‍ನಲ್ಲಿ ಇಂಡಿಯನ್ ಫಾರೆಸ್ಟ್ ಸರ್ವೀಸ್(ಐಎಫ್‍ಎಸ್)
ತರಬೇತಿಯಲ್ಲಿರುವ ಮೈಸೂರಿನ ಕೆ.ಸೌರಭ್(29 ವರ್ಷ) ಇದೀಗ 260ನೇ ರ್ಯಾಂಕ್ ಪಡೆದು ಇಂಡಿಯನ್ ಫಾರಿನ್ ಸರ್ವೀಸ್ ನಡಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದಾರೆ. ಇವರು ವಿಜಯನಗರದ ಮೂರನೇ ಹಂತದಲ್ಲಿರುವ ಮೈಸೂರು ವಿಶ್ವವಿದ್ಯಾಲಯದ
ಬಯೋಕೆಮಿಸ್ಟ್ರಿ ಪ್ರಾಧ್ಯಾಪಕ ಡಾ.ಕೆ.ಕೆಂಪರಾಜು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲ ಯದ ಪ್ರಾಧ್ಯಾಪಕಿ ಡಾ.ಎಂ.ಜಾನಕಿ ದಂಪತಿ ಪುತ್ರ. ಸಿಎಫ್‍ಟಿಆರ್‍ಐ ಶಾಲೆಯಲ್ಲಿ 10ನೇ ತರಗತಿ ವರೆಗೆ ಕಲಿತ ಇವರು, ಎಸ್‍ವಿಇಐ ಸಂಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. ನಂತರ ಎಸ್‍ಜೆಸಿಇ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್‍ನಲ್ಲಿ ಇಂಜಿ ನಿಯರಿಂಗ್ ಮುಗಿಸಿ, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಪವರ್ ಎಲೆಕ್ಟ್ರಾನಿಕ್ಸ್‍ನಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ಓದಿನ ನಂತರ ನವದೆಹಲಿಯಲ್ಲಿ ಒಂದು ವರ್ಷ ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ ಪಡೆದು ನಂತರ ಮನೆಯಲ್ಲೇ ಅಧ್ಯಯನ ನಡೆಸಿದ್ದರು. `ಮೈಸೂರು ಮಿತ್ರ’ನೊಂದಿಗೆ ಕೆ.ಸೌರಭ್ ಮಾತನಾಡಿ, 2019ರಲ್ಲಿ ಮೊದಲ ಪ್ರಯತ್ನದಲ್ಲಿ ವಿಫಲನಾದೆ. 2ನೇ ಪ್ರಯತ್ನದಲ್ಲಿ 725ನೇ ರ್ಯಾಂಕ್‍ನೊಂದಿಗೆ ಇಂಡಿಯನ್ ಫಾರೆಸ್ಟ್ ಸರ್ವೀಸ್ ಹಾಗೂ ಇಂಡಿಯನ್ ಪೋಸ್ಟಲ್ ಸರ್ವೀಸ್‍ಗೆ ಆಯ್ಕೆಯಾದೆ. ರ್ಯಾಂಕ್ ಉತ್ತಮಗೊಳಿಸಿಕೊಳ್ಳಲು ಮೂರನೇ ಪ್ರಯತ್ನ ಮಾಡಿದೆ ಆದರೆ ಅದರಲ್ಲಿ ವಿಫಲನಾದೆ. ಹಾಗಾಗಿ ಇಂಡಿಯನ್ ಫಾರೆಸ್ಟ್ ಸರ್ವೀಸ್ ತರಬೇತಿಗೆ ಸೇರಿದೆ. ತರಬೇತಿ ಅವಧಿಯಲ್ಲೇ ನಾಲ್ಕನೇ ಬಾರಿ ಪರೀಕ್ಷೆ ಬರೆದು 260ನೇ ರ್ಯಾಂಕ್ ಪಡೆದಿದ್ದೇನೆ. ಈ ರ್ಯಾಂಕ್‍ಗೆ ಐಎಎಸ್, ಐಎಫ್‍ಎಸ್ ಸಿಗಬಹುದು. ಆದರೆ ನನ್ನ ಆಯ್ಕೆಯ ಇಂಡಿಯನ್ ಫಾರಿನ್ ಸರ್ವೀಸ್‍ಗೆ ಸೇರುತ್ತೇನೆ. ಜಾಗತಿಕ ಮಟ್ಟದಲ್ಲಿ ಭಾರತದ ಗತ್ತು ಹೆಚ್ಚಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಅಗ್ರಪಂಕ್ತಿಯಲ್ಲಿ ಮುನ್ನುಗ್ಗುತ್ತಿದೆ. ಹಾಗೆಯೇ ರಾಜತಾಂತ್ರಿಕತೆ ಕೆಲಸವೇ ವಿಭಿನ್ನ ಹಾಗೂ ಸವಾಲು. ಹಾಗಾಗಿ ನಾನು ಈ ಸೇವೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಅಮ್ಮನ ಕನಸು ನನಸು ಮಾಡಿದರು: ಯುಪಿಎಸ್‍ಸಿ ಪರೀಕ್ಷೆಯಲ್ಲಿ 390ನೇ ರ್ಯಾಂಕ್ ಪಡೆಯುವ ಮೂಲಕ ಎಂ.ಪೂಜಾ, ತಮ್ಮ ತಾಯಿಯ ಕನಸನ್ನು ನನಸು ಮಾಡಿದ್ದಾರೆ. ಇವರು ಕುವೆಂಪುನಗರ ನಿವಾಸಿ, ಖಾಸಗಿ ಕಂಪನಿ ಉದ್ಯೋಗಿ ಮುಕುಂದರಾವ್ ಹಾಗೂ ಎಂ.ಪದ್ಮಾವತಿ ದಂಪತಿ ಪುತ್ರಿ. ಕುವೆಂಪುನಗರ ಕಾವೇರಿ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ ಇವರು, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ, ನಂತರ ಗೋಕುಲಂನ ವಿಧ್ಯಾವರ್ದಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಇವರು ಕೆಲ ತಿಂಗಳಲ್ಲೇ ಕೆಲಸ ಬಿಟ್ಟು ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿದರು. ಮೊದಲ ಪ್ರಯತ್ನ ವಿಫಲವಾದರೂ 2ನೇ ಪ್ರಯತ್ನದಲ್ಲಿ ಗುರಿ ಸಾಧಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಪೂಜಾ ಮಾತನಾಡಿ, ಯಾವುದೇ ಪರೀಕ್ಷೆ ಎದುರಿಸಬೇಕಾದರೆ ಗುರಿ, ಶಿಸ್ತು, ಶ್ರದ್ಧೆ ತುಂಬಾ ಮುಖ್ಯ. ಯಾವುದೇ ಕೋಚಿಂಗ್ ಕ್ಲಾಸಿಗೆ ಹೋಗದೆ 390ನೇ ರ್ಯಾಂಕ್ ಪಡೆದಿರುವುದರಿಂದ ಖುಷಿ ಹೆಚ್ಚಾಗಿದೆ. ಮೊದಲ ಪ್ರಯತ್ನ ವಿಫಲವಾಗಿದ್ದರಿಂದ ಈ ಬಾರಿ ಸಾಕಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿ ನನ್ನದೆ ನೋಟ್ಸ್ ತಯಾರಿಸಿಕೊಂಡಿದ್ದೆ. ಇದು ತುಂಬಾ ಪ್ರಯೋಜನಕ್ಕೆ ಬಂತು. ತಂದೆ-ತಾಯಿ ನನಗಿಂತ ಮೊದಲೇ ಪತ್ರಿಕೆಗಳನ್ನು ಓದಿ ಪ್ರಮುಖ ಅಂಶಗಳ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು. ಈ ಮೂಲಕ ನನ್ನ ವಿಶ್ವಾಸ ಹೆಚ್ಚಿಸಿದರು. ನನಗಿಂತ ನನ್ನ ತಾಯಿಗೆ ತುಂಬಾ ವಿಶ್ವಾಸವಿತ್ತು. ನಾಗರಿಕ ಸೇವೆಗೆ ಸೇರಬೇಕೆನ್ನುವುದು ನನ್ನ ತಾಯಿಯ ಕನಸಾಗಿತ್ತು. ಅದನ್ನು ನಾನು ನನಸು ಮಾಡಿದ್ದೇನೆ. ನಾನು ತಾಂತ್ರಿಕ ವಿದ್ಯಾರ್ಥಿನಿಯಾದರೂ ಸಮಾಜಶಾಸ್ತ್ರ ವಿಷಯ ತೆಗೆದುಕೊಂಡಿದ್ದೆ. ಸಂದರ್ಶನಕ್ಕೆ ಹೋಗುವಾಗ ರಾಜ್‍ಕುಮಾರ್ ಅಕಾಡೆಮಿ ಹಾಗೂ ಇನ್ಸೈಟ್ಸ್ ಆನ್ ಇಂಡಿಯಾದ ಸಹಕಾರ ಪಡೆದೆ. 2020 ಡಿಸೆಂಬರ್‍ನಿಂದ ತಯಾರಿ ಆರಂಭಿಸಿದೆ. 2021ರ ಮೊದಲ ಪ್ರಯತ್ನ ವಿಫಲವಾಯಿತು. 2022ರಲ್ಲಿ ತೇರ್ಗಡೆಯಾ ಗಿದ್ದೇನೆ. ಐಎಎಸ್ ಅಥವಾ ಐಪಿಎಸ್ ಹುದ್ದೆ ಸಿಗುವ ನಿರೀಕ್ಷೆ ಇದೆ ಎಂದು ನುಡಿದರು.

ಅಂಗನವಾಡಿ ಶಿಕ್ಷಕಿ ಪುತ್ರ: ಯುಪಿಎಸ್‍ಸಿ ಪರೀಕ್ಷೆಯಲ್ಲಿ 448ನೇ ರ್ಯಾಂಕ್ ಪಡೆದಿರುವ ಡಾ.ಜೆ.ಭಾನುಪ್ರಕಾಶ್ ವೈದ್ಯ ವೃತ್ತಿಯೊಂದಿಗೆ ಸತತ ಪರಿಶ್ರಮದಿಂದ ಗುರಿ ಸಾಧಿಸಿದ್ದಾರೆ. ಇವರು ಮೂಲತಃ ಕೆ.ಆರ್.ನಗರ ತಾಲೂಕು, ಹೆಬ್ಬಾಳು ಹೋಬಳಿ, ಕೆಸ್ತೂರು ಕೊಪ್ಪಲು ಗ್ರಾಮದ ನಿವಾಸಿ ಜಯರಾಮೇಗೌಡ ಹಾಗೂ ಗಿರಿಜಮ್ಮ ದಂಪತಿ ಪುತ್ರ. ಮೈಸೂರಿನ ಖಾಸಗಿ ಕಂಪನಿಯಲ್ಲಿದ್ದ ಜಯರಾಮೇಗೌಡರು ನಿವೃತ್ತಿ ನಂತರ ಸ್ವಗ್ರಾಮದಲ್ಲಿ ಕೃಷಿಕರಾಗಿದ್ದಾರೆ. ತಾಯಿ ಗಿರಿಜಮ್ಮ ಮೈಸೂರಿನ ಬೆಳವಾಡಿಯಲ್ಲಿ ಅಂಗನವಾಡಿ ಶಿಕ್ಷಕಿಯಾಗಿದ್ದಾರೆ. 1ರಿಂದ 5ನೇ ತರಗತಿವರೆಗೆ ಬೆಳವಾಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ ಭಾನುಪ್ರಕಾಶ್, ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 6ರಿಂದ 12ನೇ ತರಗತಿವರೆಗೆ ಚಾಮರಾಜನಗರದ ಹೊಂಡರಬಾಳಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಬಳಿಕ ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಎಂಬಿಬಿಎಸ್ ಹಾಗೂ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಎಂ.ಡಿ (ಪಿಡಿಯಾಟ್ರಿಕ್ಸ್) ಪದವಿ ಪಡೆದಿದ್ದಾರೆ. ಕೋವಿಡ್ ಸಂದರ್ಭದಲ್ಲಿ 2 ವರ್ಷ ಬೆಂಗಳೂರಿನ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ, ಸದ್ಯ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಶ್ರದ್ಧೆಯಿಂದ ಓದಿ, ಸ್ವಯಂ ತಯಾರಿಯೊಂದಿಗೆ ಮೂರನೇ ಪ್ರಯತ್ನದಲ್ಲಿ ತಮ್ಮ ಗುರಿ ಸಾಧಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಸಂತಸ ಹಂಚಿಕೊಂಡ ಡಾ.ಜೆ.ಭಾನುಪ್ರಕಾಶ್, ಪೋಷಕರು ಹಾಗೂ ಪತ್ನಿ ಡಾ.ಚೈತ್ರಾ ಪ್ರೋತ್ಸಾಹ ಹಾಗೂ ಸಹಕಾರವೇ ಈ ಸಾಧನೆಗೆ ಕಾರಣ. ವಿವಾಹವಾದ ಬಳಿಕ ನಾನು ಯುಪಿಎಸ್‍ಸಿ ಪರೀಕ್ಷೆ ತಯಾರಿ ಆರಂಭಿಸಿದೆ. ಮೊದಲೆರಡು ಪ್ರಯತ್ನದಲ್ಲಿ ಪ್ರಿಲಿಮ್ಸ್ ಕೂಡ ಆಗಿರಲಿಲ್ಲ. 3ನೇ ಪ್ರಯತ್ನದಲ್ಲಿ 448ನೇ ರ್ಯಾಂಕ್ ದಕ್ಕಿರುವುದು ತುಂಬಾ ಸಂತೋಷ ತಂದಿದೆ. ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡುವಾಗ ನಾಗರಿಕ ಸೇವಾ ಅಧಿಕಾರಿಯಾದರೆ ಸಮಾಜಕ್ಕೆ ಸಾಕಷ್ಟು ಕೆಲಸ ಮಾಡಬಹುದು ಎಂದೆನಿಸಿತು. ವಿವಾಹವಾಯ್ತು, ಮಗ ಅಥರ್ವ ಹುಟ್ಟಿದ. ವೃತ್ತಿ, ಸಾಂಸಾರಿಕ ಜವಾಬ್ದಾರಿಗಳೊಂದಿಗೆ ತಯಾರಿ ನಡೆಸಿದೆ. ಸಂಜೆ 5 ಗಂಟೆಗೆ ಮನೆಗೆ ಬಂದು ನಿತ್ಯ 4ರಿಂದ 5 ಗಂಟೆ ಅಭ್ಯಾಸ ನಡೆಸಿದ್ದೆ. ಮುಖ್ಯ ಪರೀಕ್ಷೆಯಲ್ಲಿ ತೇರ್ಗ ಡೆಯಾದ ನಂತರ ಡಾ.ರಾಜ್‍ಕುಮಾರ್ ಅಕಾಡೆಮಿ, ಮ್ಯಾನಿಫೆಸ್ಟ್ ಅಕಾಡೆಮಿ ಹೀಗೆ ಹಲವು ಅಕಾಡೆಮಿಗಳ ಮೂಲಕ ಅಣಕು ಸಂದರ್ಶನದಲ್ಲಿ ಭಾಗಿಯಾಗಿದ್ದೆ. ಐಪಿಎಸ್ ಹುದ್ದೆ ಸಿಗಬಹುದು. ಸೇವೆಗೆ ಸೇರಿ ಐಎಎಸ್‍ಗೆ ಮತ್ತೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

Translate »