ಪ್ರಧಾನಿ ಮೋದಿಗೆ ಬೋಸ್ ಪ್ರತಿಮೆ ನೀಡಿದ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್
ಮೈಸೂರು

ಪ್ರಧಾನಿ ಮೋದಿಗೆ ಬೋಸ್ ಪ್ರತಿಮೆ ನೀಡಿದ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್

April 6, 2022

ಮೈಸೂರು,ಏ.೫(ಪಿಎಂ)- ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಭೇಟಿ ಯಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಟ್ಟ ಪ್ರತಿಮೆಯನ್ನು ನೀಡಿದ್ದಾರೆ.

ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಮಂಗಳವಾರ ಬೆಳಗ್ಗೆ ಪ್ರಧಾನಿ ಅವರನ್ನು ಭೇಟಿಯಾದ ಅರುಣ್ ಯೋಗಿ ರಾಜ್, ತಾವೇ ಕೆತ್ತನೆ ಮಾಡಿದ ಸುಭಾಷ್ ಚಂದ್ರಬೋಸ್ ಅವರ ಪುಟ್ಟ ಪ್ರತಿಮೆಯನ್ನು ನೀಡಿ, ತಮ್ಮ ತಾತ ಹಾಗೂ ತಂದೆಯ ಶಿಲ್ಪ ಸಾಧನೆ ಬಗ್ಗೆ ತಿಳಿಸಿದರು.

ಈ ವೇಳೆ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ಅರುಣ್ ಯೋಗಿರಾಜ್ ಅವರಿಗೇ ನೀಡುವುದಾಗಿ ಪ್ರಧಾನಿಯವರು ಭರವಸೆ ನೀಡಿದರು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಉತ್ತರಾಖಂಡದ ಕೇದಾರನಾಥದಲ್ಲಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವ ಶಂಕರಾಚಾರ್ಯರ ಸುಂದರ ಪ್ರತಿಮೆಯನ್ನು ತಂದೆ ಯೋಗಿರಾಜ್ ಅವರ ಸಹಕಾರದೊಂದಿಗೆ ಅರುಣ್ ನಿರ್ಮಿಸಿದ್ದರು. ಸ್ವತಃ ಪ್ರಧಾನಿ ಸಚಿವಾಲಯದ ಅಧಿಕಾರಿಗಳೇ ದೇಶಾದ್ಯಂತ ಶಿಲ್ಪಿಗಳಿಂದ ಮಾದರಿ ಪ್ರತಿಮೆಗಳನ್ನು ಸಂಗ್ರಹಿಸಿ, ಪರಾಮರ್ಶಿಸಿ ಅಂತಿಮವಾಗಿ ಅರುಣ್ ಯೋಗಿರಾಜ್ ಅವರಿಗೆ ಜವಾಬ್ದಾರಿ ನೀಡಿದ್ದರು.

ಹೆಗ್ಗಡದೇವನಕೋಟೆಯಿಂದ ತರಿಸಿ ಕೊಂಡ ೧೨೦ ಟನ್‌ನ ಕೃಷ್ಣಶಿಲೆ ಬಳಸಿ, ಸುಮಾರು ೯ ತಿಂಗಳ ಪರಿಶ್ರಮದಿಂದ ಸಿದ್ಧವಾದ ೧೨ ಅಡಿ ಎತ್ತರದ ಕುಳಿತ ಭಂಗಿ ಯಲ್ಲಿರುವ ೩೫ ಟನ್ ಪ್ರತಿಮೆಯನ್ನು ಮೈಸೂರಿಂದ ಚಮೋಲಿ ಏರ್‌ಬೇಸ್‌ವರೆಗೆ ರಸ್ತೆಯ ಮೂಲಕ ಸಾಗಿಸಲಾಗಿತ್ತು. ಅಲ್ಲಿಂದ ಕೇದಾರನಾಥದಲ್ಲಿರುವ ಸಮಾಧಿ ಸ್ಥಳಕ್ಕೆ ಭಾರತೀಯ ವಾಯು ಪಡೆ ವಿಮಾನದ ಮೂಲಕ ಸಾಗಿಸಿ, ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದನ್ನು ಸ್ಮರಿಸಬಹುದು.

Translate »