ದಿನದಿಂದ ದಿನಕ್ಕೆ ಸೋಂಕಿತರ ಸಾವಿನ ಸಂಖ್ಯೆ  ಹೆಚ್ಚಳ: ಮುಕ್ತಿಧಾಮ ಚಿತಾಗಾರದಲ್ಲಿ ಒತ್ತಡ
ಮೈಸೂರು

ದಿನದಿಂದ ದಿನಕ್ಕೆ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳ: ಮುಕ್ತಿಧಾಮ ಚಿತಾಗಾರದಲ್ಲಿ ಒತ್ತಡ

May 5, 2021

ಮೈಸೂರು, ಮೇ4(ಆರ್‍ಕೆ)-ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದಂತೆಯೇ ಮೈಸೂರಿನಲ್ಲಿ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆ, ಕೆಆರ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಕೊರೊನಾ ಸೋಂಕಿತರ ಮೃತದೇಹಗಳನ್ನು ಮೈಸೂರಿನ ವಿಜಯನಗರ 4ನೇ ಹಂತದ ಯಶಸ್ವಿನಿ ಕಲ್ಯಾಣ ಮಂಟಪದ ಹಿಂಭಾಗವಿರುವ ಮುಕ್ತಿಧಾಮ ಹೈಟೆಕ್ ಚಿತಾಗಾರದಲ್ಲೇ ಗ್ಯಾಸ್ ಮತ್ತು ವಿದ್ಯುತ್ ಚಿತಾಗಾರ ಘಟಕಗಳಲ್ಲಿ ಭಸ್ಮ ಮಾಡುವ ಮೂಲಕ ಕೋವಿಡ್-19 ಮಾರ್ಗಸೂಚಿಗಳನ್ವಯ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
ಪ್ರತೀದಿನ 8ರಿಂದ 10 ಮೃತದೇಹಗಳು ಈವರೆಗೆ ಬರುತ್ತಿದ್ದವು. ಕಳೆದ 2 ದಿನಗಳಿಂದ 10ರಿಂದ 14 ಮೃತದೇಹಗಳನ್ನು ಕೊಂಡೊಯ್ಯುತ್ತಿರುವುದರಿಂದ ಮುಕ್ತಿಧಾಮ ಚಿತಾಗಾರ ದಲ್ಲಿ ಕಾರ್ಯಒತ್ತಡ ಜಾಸ್ತಿಯಾಗುತ್ತಿದೆ. ಅನಿಲ ಮತ್ತು ವಿದ್ಯುತ್ ಚಿತಾಗಾರ ಘಟಕ ಗಳೆರಡರಲ್ಲೂ ಸುಡುತ್ತಿರುವುದರಿಂದ ನಿರಂತರವಾಗಿ ಅಂತ್ಯಕ್ರಿಯೆ ನಡೆಯುತ್ತಿದೆ. ಪರಿಣಾಮ ಯಂತ್ರಗಳು ಹಾಗೂ ಮಾನವ ಸಂಪನ್ಮೂಲಕ್ಕೂ ಬಿಡುವು ಇಲ್ಲದಂತಾಗಿದೆ. ಚಿತಾಗಾರದಲ್ಲಿ ಸರತಿ ಸಾಲಿನಲ್ಲಿರುವ ಮೃತದೇಹಗಳ ಅಂತ್ಯಕ್ರಿಯೆ ಮುಗಿಯದೇ, ಹೆಚ್ಚುವರಿ ದೇಹಗಳ ಸ್ವೀಕರಿಸಲು ಮುಕ್ತಿಧಾಮ ಸಿಬ್ಬಂದಿ ಒಪ್ಪುವುದಿಲ್ಲ. ಅಲ್ಲಿಯವರೆಗೆ ಕೆಆರ್ ಆಸ್ಪತ್ರೆ, ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಶವಾಗಾರದಿಂದ ದೇಹಗಳನ್ನು ಹೊರಗೆ ಕೊಡಲು ಸಾಧ್ಯವಾಗುವುದಿಲ್ಲ. ಕೆಆರ್ ಆಸ್ಪತ್ರೆಯ ಕಲ್ಲು ವಾರ್ಡ್ (ಸರ್ಜಿಕಲ್ ವಾರ್ಡ್) ಮತ್ತು ಮೆಡಿಸಿನ್ ವಾರ್ಡ್‍ಗಳಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ದಿನಕ್ಕೆ 4ರಿಂದ 6 ಮಂದಿ ಸಾವನ್ನಪ್ಪುತ್ತಾರೆ. ತಕ್ಷಣ ನಾವು ಕೋವಿಡ್ ವಾರ್ ರೂಂ ಮತ್ತು ಮೈಸೂರು ಮಹಾನಗರ ಪಾಲಿಕೆ ಕಚೇರಿಗೆ ಮಾಹಿತಿ ನೀಡುತ್ತೇವೆ ಎಂದು ಕೆಆರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎನ್. ನಂಜುಂಡಸ್ವಾಮಿ ತಿಳಿಸಿದ್ದಾರೆ.

ನಿನ್ನೆ (ಸೋಮವಾರ) ರಾತ್ರಿ ನಮ್ಮ ಆಸ್ಪತ್ರೆಯಲ್ಲಿ 4 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದರು. ಪಾಲಿಕೆಗೆ ಮಾಹಿತಿ ನೀಡಲಾಗಿತ್ತಾದರೂ, ಮುಕ್ತಿಧಾಮದಲ್ಲಿ ಜಾಗ ಖಾಲಿ ಇಲ್ಲ ಹಾಗೂ ಶವ ಸಾಗಿಸುವ ವಾಹನದಲ್ಲಿ ತಾಂತ್ರಿಕ ದೋಷವಿದೆ ಎಂಬ ಕಾರಣ ನೀಡಿ ಸಿಬ್ಬಂದಿ ಬಂದಿರಲಿಲ್ಲ. ಹಾಗಾಗಿ ನಾವು ಮೃತದೇಹಗಳನ್ನು ಹಸ್ತಾಂತರಿ ಸದೆ, ಆಸ್ಪತ್ರೆಯ ಪ್ರತ್ಯೇಕ ಶವ ಇರಿಸಲು ಮೀಸಲಾಗಿರಿಸಿರುವ ಕೊಠಡಿಯಲ್ಲಿರಿಸಿ ಇಂದು ಮಧ್ಯಾಹ್ನ ಹಸ್ತಾಂತರಿಸಿದೆವು ಎಂದು ಡಾ. ನಂಜುಂಡಸ್ವಾಮಿ ತಿಳಿಸಿದರು.

ಅಷ್ಟರಲ್ಲಾಗಲೇ ಬಾಡಿ ಕೊಡುತ್ತಿಲ್ಲ ಎಂದು ವಾರಸುದಾರರು ಆರೋಪಿಸಿ ಟಿವಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಮುಕ್ತಿಧಾಮ ಚಿತಾಗಾರದಲ್ಲಿ ಕಾಯುತ್ತಿರುವ ದೇಹಗಳನ್ನು ದಹನ ಮಾಡುವವರೆಗೆ ಹೆಚ್ಚುವರಿ ದೇಹಗಳನ್ನು ಅವರು ತೆಗೆದುಕೊಳ್ಳುತ್ತಿಲ್ಲ ವಾದ್ದರಿಂದ ನಾವು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

Translate »