ಬೆಂಗಳೂರು,ಫೆ.14(ಕೆಎಂಶಿ)-ಬಡತನ ರೇಖೆ ಗಿಂತ ಕೆಳಗಿರುವ ಬಿಪಿಎಲ್ ಪಡಿತರದಾರರಿಗೆ ಏಪ್ರಿಲ್ 1ರಿಂದ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿ, ಅಮೃತ ಗ್ರಾಮೀಣ ವಸತಿ ಯೋಜನೆಯಡಿ 750 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೂರಿ ಲ್ಲದವರಿಗೆ ಸೂರು ಕಲ್ಪಿಸುವುದಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನಮಂಡ ಲದ ಜಂಟಿ ಅಧಿವೇಶನದಲ್ಲಿಂದು ಪ್ರಕಟಿಸಿದರು.
ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಜ್ಞಾನವನ್ನು ಸ್ವದೇಶದಲ್ಲಿ ಬಳಸಿ ಕೊಳ್ಳಲು ಮರಳಿ ತಾಯ್ನಾಡಿಗೆ ಬನ್ನಿ ಎಂದು ಕರೆ ನೀಡಿದರು. ನೂತನ ಶಿಕ್ಷಣ ಕಾಯ್ದೆಯಡಿ ಶೈಕ್ಷಣಿಕ ಮತ್ತು ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲು ಸಮಗ್ರ ವಿಶ್ವವಿದ್ಯಾ ಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆ ಯನ್ನು ಅನುಷ್ಠಾನಗೊಳಿಸಲು ಸೂಕ್ತ ನೀತಿ ರಚನೆ ಹಾಗೂ ಅನುದಾನ ಬಿಡುಗಡೆ ಮಾಡಲಾಗುವುದು, ಇದನ್ನು ಬಳಸಲು ನಿಮ್ಮ ಜ್ಞಾನದ ಅವಶ್ಯಕತೆ ಇದೆ ಎಂದಿದ್ದಾರೆ. ಬಿಪಿಎಲ್ ಪಡಿತರದಾರರಿಗೆ ಪ್ರತಿ ಯೂನಿಟ್‍ಗೆ ಮಾಸಿಕ 5 ಕೆಜಿ ಆಹಾರಧಾನ್ಯ ನೀಡಲಾಗುತ್ತಿತ್ತು, ಏಪ್ರಿಲ್ 1ರಿಂದ ಈ ಪ್ರಮಾಣ ಆರು ಕೆಜಿಗೆ ಹೆಚ್ಚಲಿದೆ.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಗ್ರಾಮೀಣ ವಸತಿ ಯೋಜನೆಯಡಿ 750 ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ವಸತಿ ರಹಿತರನ್ನು ಗುರುತಿಸಿ ಸರ್ವರಿಗೂ ಸೂರು ಕಲ್ಪಿಸುವ ಭರವಸೆಯನ್ನು ಸರ್ಕಾರ ರಾಜ್ಯಪಾಲರ ಮೂಲಕ ನೀಡಿದೆ. ಒಂದು ಗ್ರಾಮ ಪಂಚಾಯತ್‍ಗೆ ಪೆÇ್ರೀತ್ಸಾಹ ಧನದ ರೂಪದಲ್ಲಿ ತಲಾ 25 ಲಕ್ಷ ರೂ. ನೀಡಲು 187.50 ಕೋಟಿ ರೂ. ನಿಗದಿ ಮಾಡಲಾಗಿದೆ. ಕಳೆದ 6 ತಿಂಗಳಲ್ಲಿ ನನ್ನ ಸರ್ಕಾರ ಕೊರೊನಾ ಸಂಕಷ್ಟ ದಲ್ಲೂ ಹತ್ತು-ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿರುವುದಲ್ಲದೆ, ಸಂಪನ್ಮೂಲ ಪುನ ಶ್ಚೇತನಕ್ಕೂ ಒತ್ತು ಕೊಟ್ಟಿದೆÉ. ರಾಜ್ಯದ ಎಲ್ಲ ಗ್ರಾಮಗಳ ಜನರಿಗೆ ನಲ್ಲಿ ನೀರು ಒದಗಿಸುವುದಾಗಿ ಘೋಷಿಸಿದರು.
ಹಮಾಲರು, ಟೈಲರ್‍ಗಳು, ಮೆಕ್ಯಾನಿಕ್‍ಗಳು, ಅಗಸರು, ಚಿಂದಿ ಆಯುವವರು ಸೇರಿದಂತೆ ಒಟ್ಟು 2.26 ಲಕ್ಷ ಅಸಂಘಟಿತ ಕಾರ್ಮಿಕರಿಗೆ 237 ಕೋಟಿ ರೂ. ನೆರವು ನೀಡಲಾಗಿದೆ. ರಾಜ್ಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣ ಗಣನೀಯ ವಾಗಿ ಹೆಚ್ಚಿದ್ದು, ಭಾರತಕ್ಕೆ ಬಂದ ವಿದೇಶಿ ನೇರ ಬಂಡವಾಳ ಹೂಡಿಕೆಯ ಪೈಕಿ ಶೇ.48ರಷ್ಟು ಕರ್ನಾಟಕಕ್ಕೆ ಹರಿದು ಬಂದಿದೆ ಎಂದರು.
2 ವರ್ಷಗಳಲ್ಲಿ ರಾಜ್ಯದ ಎಲ್ಲ ಗ್ರಾಮಗಳ ಜನ ರಿಗೆ ನಲ್ಲಿ ನೀರು ಒದಗಿಸಲು ತೀರ್ಮಾನಿಸಲಾಗಿದ್ದು, ಮೊದಲ ವರ್ಷ 27.14 ಲಕ್ಷ ಮತ್ತು 2ನೇ ವರ್ಷ 17.45 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗುವುದು ಎಂದು ತಿಳಿಸಿದರು. ಹಾಲಿನ ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ರಾಜ್ಯ, ಮೊಟ್ಟೆ ಉತ್ಪಾದನೆಯಲ್ಲಿ ಆರನೇ ಸ್ಥಾನದಲ್ಲಿದೆ ಮತ್ತು ಮಾಂಸ ಉತ್ಪಾದನೆಯಲ್ಲಿ ಹತ್ತನೇ ಸ್ಥಾನದಲ್ಲಿದ್ದು ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ ಪೈಕಿ ಶೇ.3.58 ರಷ್ಟಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ವಿಶ್ವಾಸವಿದೆ ಎಂದರು.
ಸ್ವಾಮಿತ್ವ ಪರಿಣಾಮಕಾರಿ ಜಾರಿ: ರಾಜ್ಯದ ಹದಿನಾಲ್ಕು ಜಿಲ್ಲೆಗಳ ಗ್ರಾಮವಾಸಿಗಳಿಗೆ ಅವರ ವಾಸಸ್ಥಳದ ಆಸ್ತಿ ಪತ್ರವನ್ನು ನೀಡುವ ಸ್ವಾಮಿತ್ವ ಯೋಜನೆಯನ್ನು ಪರಿ ಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು. ವಿವಿಧ ಯೋಜನೆ ಗಳಡಿ ಮಾಸಾಶನ ಪಡೆಯುತ್ತಿರುವ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಈಗ ಪಿಂಚಣಿಯನ್ನು ತಲುಪಿಸುವ ಕೆಲಸವಾಗುತ್ತಿದ್ದು, ಮೃತಪಟ್ಟ, ವಲಸೆ ಹೋದ ಮತ್ತು ಅನರ್ಹರಾದ 3.15 ಲಕ್ಷ ಮಂದಿಯನ್ನು ಗುರುತಿಸಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂದರು. ಹೀಗೆ ಮೂರು ಲಕ್ಷಕ್ಕೂ ಅಧಿಕ ಮಂದಿಯನ್ನು ಪಟ್ಟಿಯಿಂದ ಹೊರಗಿಟ್ಟ ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೆ 378 ಕೋಟಿ ರೂ. ಉಳಿತಾಯವಾಗಿದೆ. 2021-22ನೇ ಸಾಲಿನಲ್ಲಿ ಅಕಾಲಿಕ ಮಳೆ ಮತ್ತು ನೆರೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಕುಟುಂಬಗಳು ಹಾನಿಗೆ ಒಳಗಾಗಿದ್ದು, ಪ್ರತಿ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಒದಗಿಸಲು 85.86 ಕೋಟಿ ರೂ. ವೆಚ್ಚ ಮಾಡಲಾಯಿತು ಎಂದರು.
ಹಾನಿಗೊಳಗಾದ ಮನೆಗಳ ದುರಸ್ತಿಗೆ ಹಾನಿ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ನಿಗದಿ ಮಾಡಿ, ಒಟ್ಟು 400.52 ಕೋಟಿ ರೂ. ಒದಗಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು. ಇನ್ನು ನೆರೆ ಹಾನಿಗೊಳಗಾದ 18.02 ಲಕ್ಷ ರೈತರಿಗೆ 1252.80 ಕೋಟಿ ರೂ. ಒದಗಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವವರು ಕೋವಿಡ್‍ನಿಂದ ಮೃತಪಟ್ಟರೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದ್ದು ಈ ಪೈಕಿ ತಲಾ ಐವತ್ತು ಸಾವಿರ ರೂ. ಈಗಾಗಲೇ ಪಾವತಿಸಲಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ 18,569 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದ್ದು, ಈ ಪೈಕಿ 10,534 ಕೊಳವೆ ಬಾವಿಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ನವೀಕರಿಸಬಹುದಾದ ಇಂಧನ ಮೂಲಗಳಿಂದ ಒಟ್ಟು 244.55 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗಿದೆ, ಈ ಪೈಕಿ 116.45 ಮೆಗಾವ್ಯಾಟ್ ಸೌರ ವಿದ್ಯುತ್, 128.10 ಮೆಗಾವ್ಯಾಟ್ ಪವನ ವಿದ್ಯುತ್ ಸೇರಿದೆ ಎಂದರು.
ರಾಜ್ಯದ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳನ್ನು ರೈಲಿನಲ್ಲಿ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡುವ ಕಿಸಾನ್ ರೈಲ್ ಯೋಜನೆಗೆ ಚಾಲನೆ ನೀಡಲಾಗಿದೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 59.13 ಲಕ್ಷ ಜನರಿಗೆ ಕೆಲಸ ಒದಗಿಸಲಾಗಿದ್ದು, ಒಟ್ಟು 3769.95 ಕೋಟಿ ರೂ. ಒದಗಿಸಲಾಗಿದೆ ಎಂದು ರಾಜ್ಯಪಾಲರು ವಿವರ ನೀಡಿದರು. ಜಲಸಂಪನ್ಮೂಲ ಇಲಾಖೆಯು ವಿಶ್ವ ಬ್ಯಾಂಕ್ ನೆರವಿನ ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಎರಡು ಮತ್ತು ಮೂರನೇ ಹಂತದಡಿ 1500 ಕೋಟಿ ರೂ. ವೆಚ್ಚದಲ್ಲಿ ಒಟ್ಟು ಐವತ್ತೈದು ಅಣೆಕಟ್ಟುಗಳನ್ನು ಪುನಃಶ್ಚೇತಗೊಳಿಸಲಿದೆ ಎಂದು ಅವರು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 526.256 ಮೀಟರ್‍ಗಳಿಗೆ ಹೆಚ್ಚಿಸುವುದರಿಂದ ಇಪ್ಪತ್ತು ಹಳ್ಳಿಗಳು ಮುಳು ಗಡೆಯಾಗಲಿವೆ, ಮುಳುಗಡೆಯಾಗುವ ಗ್ರಾಮಗಳ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಕ್ಕಾಗಿ 2500 ಕೋಟಿ ರೂ. ಒದಗಿಸಲಾಗುವುದು ಎಂದರು.
ಕೊಪ್ಪಳ, ಯಲಬುರ್ಗ ತಾಲೂಕುಗಳ ಕೆರೆಗಳಿಗೆ ತುಂಗಭದ್ರಾ ಮತ್ತು ಕೃಷ್ಣಾ ನದಿಯಿಂದ ಕುಡಿಯುವ ನೀರು ತುಂಬಿಸುವ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸ ಲಾಗುವುದು ಎಂದರು. ಉದ್ಯಮಿಯಾಗಿ, ಉದ್ಯೋಗದಾತರಾಗಿ ಯೋಜನೆಯಡಿ ರಾಜ್ಯಾದ್ಯಂತ ಉದ್ಯಮಿಗಳಿಗೆ ಉತ್ತೇಜನ ನೀಡಲು ಬೆಂಗಳೂರು-ಮುಂಬೈ ಹಾಗೂ ಬೆಂಗಳೂರು-ಚೆನ್ನೈ ಕಾರಿಡಾರ್‍ಗಳಲ್ಲಿ ಟೌನ್‍ಶಿಪ್‍ಗಳನ್ನು ನಿರ್ಮಿಸಲಾಗುವುದು ಎಂದರು.
ಖನಿಜ ನೀತಿಯನ್ನು ಅಂತಿಮಗೊಳಿಸಲು ವಿಷಯ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿದೆ. ಗಣಿಭಾದಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಮತ್ತು ಪ್ರದೇಶಗಳ ಅಭಿವೃದ್ಧಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ಸಂಗ್ರಹವಾಗುವ ನಿಧಿಯನ್ನು ಬಳಸಲಾಗುತ್ತಿದೆ ಎಂದರು. ರೈತರ ಮೇಲೆ ಪರೋಕ್ಷವಾಗಿ ಆಗುತ್ತಿದ್ದ ಆರ್ಥಿಕ ಹೊರೆಯಿಂದ ರಕ್ಷಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಮೇಲೆ ವಿಧಿಸಿದ್ದ ಶುಲ್ಕವನ್ನು 1.5 ರಿಂದ 0.6ಕ್ಕೆ ಇಳಿಸಲಾಗಿದೆ ಎಂದರು.
ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ 5500 ಕೋಟಿ ರೂ ವೆಚ್ಚದ ಐದನೇ ಹಂತದ ಕಾವೇರಿ ಯೋಜನೆಯಿಂದ 775 ದಶಲಕ್ಷ ಲೀಟರ್ ಹೆಚ್ಚುವರಿ ನೀರು ದೊರೆಯಲಿದೆ. ಸೇವಾ ಸಿಂಧು ಯೋಜನೆಯು ಕರ್ನಾಟಕ ಸರ್ಕಾರದ ಎಲ್ಲ ಸರ್ಕಾರಿ ಇಲಾಖೆಗಳ ಸೇವೆಯನ್ನು ಆನ್‍ಲೈನ್ ಮುಖಾಂತರ ವಿವಿಧ ನಾಗರಿಕ ಸೇವಾ ಕೇಂದ್ರಗಳಾದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕ ನಾಗರಿಕರಿಗೆ ನೀಡಲಿದೆ ಎಂದರು.
ಸರ್ಕಾರಿ ಸೇವೆಗಳು ನಗದು ಮತ್ತು ಕಾಗದ ರಹಿತವಾಗಿ ಫಲಾನುಭವಿಗಳಿಗೆ ದೊರೆಯಲಿದೆ ಎಂದು ವಿವರ ನೀಡಿದರು. ಪ್ರಸಕ್ತ ಸಾಲಿನಲ್ಲಿ ವಸತಿ ಯೋಜನೆಯಡಿ 5 ಲಕ್ಷ ಮನೆಗಳನ್ನು ನಿರ್ಮಿಸಿ ಹಂಚಲಾಗುವುದು, ಇದರಲ್ಲಿ ಗ್ರಾಮೀಣ ಪ್ರದೇಶಗಳಿಗೆ ನಾಲ್ಕು ಲಕ್ಷ ಮತ್ತು ನಗರ ಪ್ರದೇಶಗಳಿಗೆ ಒಂದು ಲಕ್ಷ ಮನೆಗಳನ್ನು ನೀಡಲಾಗುವುದು ಎಂದು ಹೇಳಿದರು. ರಾಜ್ಯವನ್ನು ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿರಿಸಲು ನೀವು (ಶಾಸಕರು) ತಮ್ಮ ಪಾಲ್ಗೊಳ್ಳುವಿಕೆ, ಸಹಕಾರ ಮತ್ತು ಪರಿಶ್ರಮಗಳ ಮೂಲಕ ಶ್ರೇಷ್ಠ ಕರ್ನಾಟಕ ಮತ್ತು ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದರು.