ಇಂದಿನಿಂದ ಕೊಡಗಲ್ಲಿ ವಾರದಲ್ಲಿ 3 ದಿನ ಮಾಂಸ ಮಾರಾಟಕ್ಕೆ ಅವಕಾಶ
ಕೊಡಗು

ಇಂದಿನಿಂದ ಕೊಡಗಲ್ಲಿ ವಾರದಲ್ಲಿ 3 ದಿನ ಮಾಂಸ ಮಾರಾಟಕ್ಕೆ ಅವಕಾಶ

April 13, 2020

ಮಡಿಕೇರಿ, ಏ.12- ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ನಿಷೇಧಿ ಸಿದ್ದ ಮೀನು, ಮಾಂಸ ಮಾರಾಟವನ್ನು ಜಿಲ್ಲಾಡಳಿತ ಸರಕಾರದ ಸೂಚನೆಯಂತೆ ಹಿಂಪಡೆದಿದೆ. ನಾಳೆ (ಸೋಮವಾರ) ಯಿಂದ ಜಿಲ್ಲೆಯಲ್ಲಿ ಕೋಳಿ, ಕುರಿ, ಆಡು, ಹಂದಿ ಮತ್ತು ಹೊಳೆ ಮೀನು(ಕಾಟ್ಲ) ಮಾರಾಟಕ್ಕೆ ವಾರದಲ್ಲಿ 3 ದಿನಗಳ ಕಾಲ ಅವಕಾಶ ನೀಡಿದೆ.

ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮೀನು-ಮಾಂಸ ಖರೀದಿಗೆ ಅವಕಾಶ ನೀಡಲಾಗಿದೆ. ಇನ್ನು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮೀನು ಮತ್ತು ಮಾಂಸಕ್ಕೆ ದರಗಳನ್ನು ಕೂಡ ನಿಗದಿ ಮಾಡಿದ್ದು, ಪ್ರತಿ ಕೆಜಿ ಹೊಳೆ ಮೀನು 200 ರೂ., ಕುರಿ 600 ರೂ., ಕೋಳಿ 180, ಹಂದಿ ಮಾಂಸ 220 ಎಂದು ದರ ನಿಗದಿಪಡಿಸಿದೆ. ಇದನ್ನು ಹೊರತುಪಡಿಸಿ ದುಬಾರಿ ದರಕ್ಕೆ ಮಾರಾಟ ಮಾಡಿದ ಆರೋಪಗಳು ಕೇಳಿ ಬಂದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಸಿದೆ. ಈ ಆದೇಶ ಮಾಂಸಾಹಾರ ಪ್ರಿಯರಿಗೆ ನಿರಾಳತೆ ಮೂಡಿಸಿದೆ.

ಭಾರೀ ಬೇಡಿಕೆ: ಇನ್ನು ಜಿಲ್ಲೆಯಲ್ಲಿ ಎಲ್ಲಾ ರೀತಿ ಮಾಂಸಗಳು ನಿಷೇಧ ಮಾಡಿದ ಬಳಿಕ ನಾಟಿ ಹಾಗೂ ಫಾರಂ ಕೋಳಿ ಕೆ.ಜಿ.ಗೆ 200 ರಿಂದ 400 ರೂ.ಗಳ ವರೆಗೆ ಮಾರಾಟವಾಗಿದ್ದರೆ, ಹಂದಿ ಮಾಂಸ ಕೆ.ಜಿ.ಗೆ 200ರಿಂದ 250ರೂ.ಗಳ ವರೆಗೆ ಮಾರಾಟವಾಗಿದೆ. ಇದು ಕೂಡ ಕೆಲವೇ ದಿನಗಳಲ್ಲಿ ಅಲಭ್ಯವಾಗಿದ್ದು, ಇಷ್ಟು ದುಬಾರಿ ದರ ನೀಡಿ ನೂರಾರು ಮಂದಿ ಸ್ಥಳೀಯವಾಗಿಯೇ ಖರೀದಿ ಮಾಡಿದ್ದಾರೆ. ಜಿಲ್ಲಾಡಳಿತದ ಹೊಸ ಆದೇಶದಿಂದ ಮಾಂಸ ಪ್ರಿಯರ ಬಾಯಲ್ಲಿ ನೀರೂರುವಂತೆ ಮಾಡಿದೆ.

ಇನ್ನು ಸಮುದ್ರ ಮೀನು ಸದ್ಯಕ್ಕಂತೂ ಕೊಡಗು ಜಿಲ್ಲೆಗೆ ಬರಲಾರದು ಎನ್ನುವ ಸ್ಥಿತಿ ಇದೆ. ಕೊಡಗು ಜಿಲ್ಲೆಗೆ ನೆರೆಯ ಕೇರಳ ಮತ್ತು ಮಂಗಳೂರಿನಿಂದ ಸಮುದ್ರ ಮೀನು ಬರುತ್ತಿದ್ದು, ಕೇರಳ ಮತ್ತು ದಕ್ಷಿಣ ಕನ್ನಡದ ಗಡಿಗಳು ಸಂಪೂರ್ಣ ಬಂದ್ ಆಗಿರುವು ದರಿಂದ ಸಮುದ್ರ ಮೀನಿನ ಕೊರತೆ ಜಿಲ್ಲೆಯನ್ನು ಕಾಡಲಿದೆ. ಮೀನುಗಾರರು ಕೂಡ ಲಾಕ್‍ಡೌನ್‍ನಿಂದ ತಮ್ಮ ಊರುಗಳಿಗೆ ತೆರಳಿರುವ ಹಿನ್ನೆಲೆಯಲ್ಲಿ “ಉಪ್ಪು ನೀರಿನ” ಮತ್ಸೋದ್ಯಮ ಸದ್ಯಕ್ಕಂತೂ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

Translate »