ಪಾರ್ಕ್ ಬಳಿ ಮೂತ್ರ ವಿಸರ್ಜನೆಗೆ ಆಕ್ಷೇಪ:  ಹೆಡ್‍ಕಾನ್‍ಸ್ಟೇಬಲ್ ಮೇಲೆ ಯುವಕನಿಂದ ಹಲ್ಲೆ
ಮೈಸೂರು

ಪಾರ್ಕ್ ಬಳಿ ಮೂತ್ರ ವಿಸರ್ಜನೆಗೆ ಆಕ್ಷೇಪ: ಹೆಡ್‍ಕಾನ್‍ಸ್ಟೇಬಲ್ ಮೇಲೆ ಯುವಕನಿಂದ ಹಲ್ಲೆ

September 28, 2021

ಮೈಸೂರು, ಸೆ. 27(ಆರ್‍ಕೆ)- ಪಾರ್ಕ್ ಬಳಿ ಮೂತ್ರ ವಿಸರ್ಜಿಸಬೇಡಿ ಎಂದು ಬುದ್ಧಿ ಹೇಳಿದ ಹೆಡ್‍ಕಾನ್‍ಸ್ಟೇಬಲ್ ಮೇಲೆ ಯುವಕ ನೋರ್ವ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ಸಿದ್ಧಾರ್ಥ ಬಡಾವಣೆ ಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮೈಸೂರಿನ ನಜರ್‍ಬಾದ್ ಠಾಣೆ ಪೊಲೀಸ್ ಹೆಡ್‍ಕಾನ್‍ಸ್ಟೇಬಲ್ ಜಿ.ಟಿ.ಮುರಳಿ ಹಲ್ಲೆ ಗೊಳಗಾಗಿ ಗಾಯಗೊಂಡವರಾಗಿದ್ದು, ಅವ ರನ್ನು ಶಾಂತವೇರಿ ಗೋಪಾಲಗೌಡ ಸ್ಮಾರಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಮುರಳಿ ಅವರು ಸಿದ್ಧಾರ್ಥ ಬಡಾವಣೆಯ ಸ್ಕೇಟಿಂಗ್ ಪಾರ್ಕ್ ಬಳಿ ಕಾರು ನಿಲ್ಲಿಸಿ ಕೊಂಡು ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕನಿಗೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಬುದ್ಧಿ ಹೇಳಿ, ಕಳುಹಿಸಿದರು. ನಂತರ ತುಸು ದೂರ ಹೋಗಿ ಬೈಕ್ ನಿಲ್ಲಿಸಿಕೊಂಡು ಅದರ ಮೇಲೆ ಕುಳಿತಿದ್ದಾಗ ರಾತ್ರಿ ಸುಮಾರು 7.30 ಗಂಟೆ ವೇಳೆಗೆ ಆ ಯುವಕ ಮತ್ತೋರ್ವನೊಂದಿಗೆ ಕಾರಿನಲ್ಲಿ ಬಂದು ಏಕಾಏಕಿ ರಾಡಿನಿಂದ ಮುರಳೀಧರ ತಲೆಗೆ ಹೊಡೆದು ಪರಾರಿಯಾದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಜಿ.ಎನ್. ಶ್ರೀಕಾಂತ್ ಹಾಗೂ ಸಿಬ್ಬಂದಿ, ಮುರಳಿ ಅವರನ್ನು ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಗೆ ದಾಖಲಿಸಿದರು.

ಸ್ಕೇಟಿಂಗ್ ಪಾರ್ಕ್ ಬಳಿ ಮೂತ್ರ ವಿಸ ರ್ಜಿಸಬೇಡಿ ಎಂದು ಬುದ್ಧಿ ಹೇಳಿ ಕಳುಹಿಸಿದ ಯುವಕನೇ ಮತ್ತೆ ಬಂದು ಏಕಾಏಕಿ ಬೈಕ್ ಮೇಲೆ ಕುಳಿತಿದ್ದ ನನ್ನ ಮೇಲೆ ಹಲ್ಲೆ ನಡೆಸಿ, ಪರಾರಿಯಾದ. ಆತ ಯಾರು, ಕಾರು ಯಾವುದೆಂದು ತಿಳಿಯಲಿಲ್ಲ ಎಂದು ಮುರಳಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಜರ್ ಬಾದ್ ಠಾಣೆ ಪೊಲೀಸರು, ಆ ಭಾಗದ ಸಿಸಿ ಕ್ಯಾಮರಾ ಫುಟೇಜಸ್‍ಗಳನ್ನು ಪರಿಶೀಲಿಸುತ್ತಿದ್ದು, ಸಮವಸ್ತ್ರದಲ್ಲಿ ಕರ್ತವ್ಯದ ಮೇಲಿದ್ದರೂ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Translate »