ಮೈಸೂರಿನ 77 ರೆವಿನ್ಯೂ ಬಡಾವಣೆ ಸಕ್ರಮಕ್ಕೆ ಸಚಿವರಿಗೆ ಸಿಂಹ ಮನವಿ
ಮೈಸೂರು

ಮೈಸೂರಿನ 77 ರೆವಿನ್ಯೂ ಬಡಾವಣೆ ಸಕ್ರಮಕ್ಕೆ ಸಚಿವರಿಗೆ ಸಿಂಹ ಮನವಿ

October 15, 2020

ಮೈಸೂರು,ಅ.14(ಪಿಎಂ)-ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 77 ರೆವಿನ್ಯೂ ಬಡಾವಣೆಗಳನ್ನು ಅಕ್ರಮ- ಸಕ್ರಮ ಯೋಜನೆಯಡಿ ಪಾಲಿಕೆಗೆ ಸೇರ್ಪಡಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಿ.ಎ.ಬಸವ ರಾಜ್ ಹಾಗೂ ಸಹಕಾರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಸಲ್ಲಿಸಿದರು.

ಉಭಯ ಸಚಿವರನ್ನು ಬುಧವಾರ ಪ್ರತ್ಯೇಕವಾಗಿ ಭೇಟಿ ಮಾಡಿದ ಸಂಸದರು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 77 ರೆವಿನ್ಯೂ ಬಡಾವಣೆಗಳು ಇವೆ. ಇವುಗಳನ್ನು ಅಕ್ರಮ-ಸಕ್ರಮ ಯೋಜನೆಯಡಿ ಪಾಲಿಕೆಗೆ ಸೇರ್ಪಡೆ ಮಾಡಿ, ಕಂದಾಯ ನಿಗದಿಪಡಿಸಿ ಮೂಲಭೂತ ಸೌಲಭ್ಯ ಗಳನ್ನು ಒದಗಿಸುವ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಸಂಸದರು ಮನವಿ ಸಲ್ಲಿಸಿದರಲ್ಲದೆ, ಪಾಲಿಕೆ ವ್ಯಾಪ್ತಿ ಯಲ್ಲಿನ ರೆವಿನ್ಯೂ ಬಡಾವಣೆಗಳ ವಾರ್ಡ್‍ವಾರು ಮಾಹಿತಿ ಪಟ್ಟಿ ಯನ್ನೂ ನೀಡಿದರು. ಮೈಸೂರು ನಗರ ಅತ್ಯಂತ ವೇಗ ವಾಗಿ ಬೆಳೆಯುತ್ತಿದ್ದು, ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 77 ರೆವಿನ್ಯೂ ಬಡಾವಣೆಗಳು ನಿರ್ಮಾಣ ಗೊಂಡಿವೆ. ಇಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಆದರೆ ಸದರಿ ಬಡಾವಣೆಗಳು ಮೂಲ ಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಚರಂಡಿ ಹಾಗೂ ಇತರೆ ಸೌಕರ್ಯಗಳಿಂದ ವಂಚಿತವಾಗಿವೆ. ಆದ್ದರಿಂದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ರೆವಿನ್ಯೂ ಬಡಾವಣೆಗಳನ್ನು ಅಕ್ರಮ-ಸಕ್ರಮ ಯೋಜನೆಯಡಿ ಪಾಲಿಕೆಗೆ
ಸೇರ್ಪಡೆ ಮಾಡಿಕೊಂಡು ಖಾತೆ ಹಾಗೂ ಕಂದಾಯ ಪಾವತಿಸಲು ಅವಕಾಶ ಮಾಡಿಕೊಟ್ಟರೆ ಪಾಲಿಕೆ ಆದಾಯವೂ ಹೆಚ್ಚುತ್ತದೆ. ಜೊತೆಗೆ ಪ್ರಧಾನಿ ಮಂತ್ರಿಗಳು 2022ರೊಳಗೆ ಪ್ರತಿಯೊಬ್ಬರಿಗೂ ಸೂರನ್ನು ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಸವಲತ್ತುಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಉಭಯ ಸಚಿವರಿಗೆ ಸಂಸದರು ಮನವಿ ಸಲ್ಲಿಸಿದರು.

 

 

Translate »