ಮೈಸೂರಲ್ಲಿ ಸುಗಮವಾಗಿ ನಡೆದ ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ ಶೇ.50ರಷ್ಟು ಅಭ್ಯರ್ಥಿಗಳು ಮಾತ್ರ ಹಾಜರು
ಮೈಸೂರು

ಮೈಸೂರಲ್ಲಿ ಸುಗಮವಾಗಿ ನಡೆದ ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ ಶೇ.50ರಷ್ಟು ಅಭ್ಯರ್ಥಿಗಳು ಮಾತ್ರ ಹಾಜರು

October 11, 2021

ಮೈಸೂರು,ಅ.10(ಆರ್‍ಕೆಬಿ)-ಐಎಎಸ್, ಐಪಿಎಸ್ ಮತ್ತು ಇತರ ನಾಗರಿಕ ಸೇವಾ ಅಧಿಕಾರಿಗಳ ಆಯ್ಕೆಗಾಗಿ ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ನಡೆಸಿದ ಪೂರ್ವಭಾವಿ ಪರೀಕ್ಷೆಗೆ ಕೇವಲ ಶೇ.50ರಷ್ಟು ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು.
ಮೈಸೂರಿನ 16 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 9.30ರಿಂದ 11.30 ಮತ್ತು ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆದ ಎರಡು ಹಂತದ ಪರೀಕ್ಷೆಯಲ್ಲಿ ಶೇ.50ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಪರೀಕ್ಷೆಗೆ ನೋಂದಾಯಿಸಿಕೊಂಡ 6463 ಅಭ್ಯರ್ಥಿಗಳ ಪೈಕಿ ಬೆಳಗ್ಗೆ ಮೊದಲ ಪತ್ರಿಕೆಯಲ್ಲಿ 3205 ಮಂದಿ ಹಾಜರಾಗಿದ್ದರು. 3258 ಮಂದಿ ಗೈರು ಹಾಜರಾಗಿದ್ದರು. ಮಧ್ಯಾಹ್ನ ನಡೆದ ಎರಡನೇ ಪತ್ರಿಕೆಯಲ್ಲಿ 3176 ಮಂದಿ ಹಾಜರಾಗಿ, 3287 ಮಂದಿ ಗೈರಾಗಿದ್ದಾರು.

ಮೈಸೂರಿನ ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜು, ಡಿ.ಬನುಮಯ್ಯ ಪಿಯು ಕಾಲೇಜು, ಮಹಾರಾಣಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಸರಸ್ವತಿ ಪುರಂ ಟಿಟಿಎಲ್ ಬಿಸಿನೆಸ್ ಮ್ಯಾನೆಜ್‍ಮೆಂಟ್ ಕಾಲೇಜು, ಮರಿಮಲ್ಲಪ್ಪನವರ ಪಿಯು ಕಾಲೇಜು, ಸರಸ್ವತಿಪುರಂನ ವಿಜಯ ವಿಠಲ ಪಿಯು ಕಾಲೇಜು, ಮಹಾಜನ ಕಾಲೇಜು, ಟೆರೆಷಿ ಯನ್ ಪಿಯು ಕಾಲೇಜು ಸೇರಿದಂತೆ ಒಟ್ಟು 16 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು. ಪರೀಕ್ಷೆಗಳು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಉಪನಿರ್ದೇಶಕ ಶ್ರೀನಿವಾಸಮೂರ್ತಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಿಆರ್‍ಪಿಸಿ ಸೆಕ್ಷನ್ 144ರ ಅಡಿಯಲ್ಲಿ ಎಲ್ಲಾ 16 ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧ ಜಾರಿಗೊಳಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಸಂಜೆಯವರೆಗೆ ಮುಚ್ಚುವಂತೆ ಆದೇಶಿಸಲಾಗಿತ್ತು. ಪೂರ್ವ ಭಾವಿ ಪರೀಕ್ಷೆಯು ಕಳೆದ ಜೂ.27ರಂದೇ ನಡೆಯಬೇಕಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಉಲ್ಬಣಿಸಿದ್ದರಿಂದ ಮುಂದೂಡಲ್ಪಟ್ಟಿತ್ತು.

Translate »