ವಿಪಕ್ಷಗಳ ಪಾದಯಾತ್ರೆ ನಡುವೆ ಬಿಜೆಪಿ ರಥಯಾತ್ರೆಗೆ ಸಿದ್ಧತೆ
News

ವಿಪಕ್ಷಗಳ ಪಾದಯಾತ್ರೆ ನಡುವೆ ಬಿಜೆಪಿ ರಥಯಾತ್ರೆಗೆ ಸಿದ್ಧತೆ

November 8, 2022

ಬೆಂಗಳೂರುನ.7(ಕೆಎಂಶಿ)-ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿ ರಾಜ್ಯಾದ್ಯಂತ ರಥಯಾತ್ರೆ ನಡೆಸಲು ತೀರ್ಮಾನಿಸಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದಲ್ಲಿ ಪ್ರತ್ಯೇಕ ವಾಗಿ ರಥಯಾತ್ರೆನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ ಮಧ್ಯೆ ಭಾಗದಿಂದ ಆರಂಭಗೊಳ್ಳುವ ಈ ಚುನಾವಣಾ ಯಾತ್ರೆ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಸಂಚರಿಸಿ ಮತದಾರರನ್ನು ಓಲೈಸಿಕೊಳ್ಳುವ ಕೆಲಸ ಮಾಡಲಿದೆ. ರಾಜ್ಯ ನಾಯಕರೂ ರಥಯಾತ್ರೆಯ ಕೆಲ ಭಾಗಗಳಲ್ಲಿ ಪಕ್ಷದ ಪರ ಕೆಲಸ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಥಯಾತ್ರೆಗಾಗಿ ಈಗಾಗಲೇ 2 ವಿಶೇಷ ವಾಹನ ಗಳು ಸಿದ್ಧಗೊಂಡಿದ್ದು ಇನ್ನು 4 ವಾಹನಗಳು ಸಿದ್ಧತಾ ಹಂತದಲ್ಲಿವೆ. ಬಿಜೆಪಿ ಅಧಿಕಾರಕ್ಕೆ ಬಂದು ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಸಾಧನೆ, ನಮ್ಮ ಕಾರ್ಯಕ್ರಮಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಬಿಂಬಿಸು ವುದೇ ಈ ಯಾತ್ರೆಯ ಉದ್ದೇಶ. ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ರಥಯಾತ್ರೆಯ ಮೂಲಕವೇ ಜನತೆಗೆ ಉತ್ತರ ನೀಡಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ರಥಯಾತ್ರೆ ಎಲ್ಲಿ ಆರಂಭಗೊಂಡು ಎಲ್ಲಿ ಅಂತ್ಯಗೊಳ್ಳ ಬೇಕು. ರಾಷ್ಟ್ರೀಯ ನಾಯಕರು ಯಾವ ಯಾವ ಸ್ಥಳಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಬೇಕು ಎಂಬ ರೋಡ್ ಮ್ಯಾಪ್ ಸಿದ್ಧಗೊಳ್ಳುತ್ತಿದೆ. ಚುನಾವಣಾ ಪ್ರಚಾರಕ್ಕಾಗಿ ರಥಯಾತ್ರೆ ಕೈಗೊಳ್ಳುತ್ತಿರುವುದನ್ನು ಮುಖ್ಯಮಂತ್ರಿ ಬೊಮ್ಮಾಯಿ ಖಚಿತಪಡಿಸಿ ದ್ದಾರೆ. ಜನ ಸಂಕಲ್ಪ ಯಾತ್ರೆ ಪ್ರಾರಂಭವಾಗಿದೆ. ಈ ಯಾತ್ರೆಯಿಂದ ಜನರ ಸಮಸ್ಯೆಗಳಲ್ಲಿ ಹಾಲಿಸಿ ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ. ಈ ಯಾತ್ರೆ ನಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ನಮಗೆ ಹೋದೆಡೆಯಲ್ಲೆಲ್ಲ ಜನ ಬೆಂಬಲ ದೊರೆತಿದೆ. ಈ ಯಾತ್ರೆ ಮುಗಿದ ನಂತರ ಉತ್ತರ ದಕ್ಷಿಣ ಎರಡೂ ದಿಕ್ಕಿನಿಂದ ರಥಯಾತ್ರೆ ಪ್ರಾರಂಭವಾಗಲಿದೆ ಎಂದರು.

Translate »