ಮೈಸೂರು, ಮೇ 21 (ಆರ್‍ಕೆ)- ಈಗಾ ಗಲೇ ರಾಜ್ಯದಾದ್ಯಂತ ಸಾರಿಗೆ ಬಸ್, ರೈಲು ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿಂದ ಬೆಂಗಳೂರು ಮತ್ತು ಕಲಬುರಗಿ ನಗರಗಳಿಗೆ ವಿಮಾನ ಸೇವೆ ಪುನರಾರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದ್ದಾರೆ.
ಕೇಂದ್ರದ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲೂ ವಿವಿಧ ನಗರ ಗಳಿಗೆ ವಿಮಾನ ಸಂಚಾರ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಕಲಬುರಗಿ ನಗರಗಳಿಗೆ ವಿಮಾನ ಹಾರಾಟ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಅವಶ್ಯವಿರುವ ಮುಂಜಾಗ್ರತಾ ಕ್ರಮಗಳ ಅವಲೋಕನ ನಡೆದಿದೆ ಎಂದು ತಿಳಿಸಿದರು.
ಅಭಿಪ್ರಾಯ ಸಂಗ್ರಹ : ವಿಮಾನ ಹಾರಾಟ ಪುನರಾರಂಭ ಸಂಬಂಧ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಫೇಸ್‍ಬುಕ್ ನಲ್ಲಿ ಅಭಿಪ್ರಾಯ ಆಹ್ವಾನಿಸಲಾಗಿದೆ ಎಂದ ಅವರು, ಇವುಗಳನ್ನು ಪರಿಗಣಿಸಿ ವಿಮಾನ ಹಾರಾಟ ಸಂಬಂಧ ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೇ 25 ರಿಂದ ವಿಮಾನ ಹಾರಾಟ ಆರಂಭಿಸಲು ಸರ್ಕಾರ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಅಗತ್ಯ ಸಿದ್ಧತಾ ಕಾರ್ಯ ನಡೆಯುತ್ತಿದೆ. ವಿಮಾನಗಳ ಸೇವೆ ಆರಂಭಿಸುವ ಕುರಿತಂತೆ ಆಪರೇಟರ್ ಗಳೊಂದಿಗೆ ಏರ್‍ಪೋರ್ಟ್ ಅಥಾರಿಟಿ ಅಧಿಕಾರಿಗಳು ಸಮಾ ಲೋಚನೆ ನಡೆಸುತ್ತಿದ್ದು, ಭದ್ರತೆ, ಆರೋಗ್ಯ ತಪಾಸಣೆ ಮಾಡಲೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.