ಮಂಗಳಮುಖಿಯರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಪಡೆದು ವಂಚನೆ: ಖಾಸಗಿ ಬ್ಯಾಂಕ್ ನೌಕರ ಬಂಧನ
ಮೈಸೂರು

ಮಂಗಳಮುಖಿಯರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಪಡೆದು ವಂಚನೆ: ಖಾಸಗಿ ಬ್ಯಾಂಕ್ ನೌಕರ ಬಂಧನ

October 16, 2020

ಮಂಡ್ಯ, ಅ.15-ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಹಣ ಪಡೆದು ವಂಚಿಸುವ ಪ್ರಕರಣಗಳು ಸರ್ವೇ ಸಾಮಾನ್ಯ. ಆದರೆ ಚಿನ್ನಕ್ಕೆ ಇನ್ಸೆಂಟೀವ್ (ಪ್ರೋತ್ಸಾಹ ಧನ) ನೀಡುವುದಾಗಿ ಆಮಿಷವೊಡ್ಡಿ ಲಕ್ಷಾಂ ತರ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯದ ಗುತ್ತಲುವಿನಲ್ಲಿ ವಾಸವಿರುವ ಖಾಸಗಿ ಹಣಕಾಸು ಸಂಸ್ಥೆಯೊಂದರ ನೌಕರ ಎಸ್.ಎಂ.ಸೋಮಶೇಖರ್ ಎಂಬಾತ ಮಂಡ್ಯದ ವರ್ತಕರೊಬ್ಬರ ಸೊಸೆಯೊಡಗೂಡಿ ಹಲ ವಾರು ಮಂಗಳಮುಖಿಯರು ಹಾಗೂ ಮಹಿಳೆ ಯರನ್ನೇ ಟಾರ್ಗೆಟ್ ಮಾಡಿಕೊಂಡು ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಈ ಸಂಬಂಧ ಮಂಗಳಮುಖಿಯೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಅವರ ಬಳಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 4 ಲಕ್ಷ ರೂ. ನಗದು ಸೇರಿ ಒಟ್ಟು 19 ಲಕ್ಷ ರೂ. ಪಡೆದು ವಂಚಿಸಲಾಗಿದೆ. ವಂಚಕ ಸೋಮಶೇಖರ್ ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ಹೆಚ್ಚಿನ ವಿಚಾರಣೆ ಗಾಗಿ ಪೊಲೀಸರು 7 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.

ಈತನನ್ನು ವಿಚಾರಣೆಗೊಳಪಡಿಸಿದಾಗ ಹಲವಾರು ಮಂಗಳಮುಖಿಯರು ಹಾಗೂ ಮಹಿಳೆಯರಿಂದ ಸುಮಾರು 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿವರ: ಪೂನಾ, ಹರಿಯಾಣ, ಪಾಣಿಪತ್, ಕುರುಕ್ಷೇತ್ರ, ದೆಹಲಿ ಮುಂತಾದೆಡೆ ನಡೆಯುವ ಬ್ಲೆಸ್ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಂಗಳಮುಖಿ ಸೋನಿಯಾ, ಮಂಡ್ಯದ ನೆಹರು ನಗರದಲ್ಲಿ ವಾಸವಿದ್ದಾರೆ. ಅವರಿಗೆ ಬ್ಲೆಸ್ಸಿಂಗ್ ಕಾರ್ಯಕ್ರಮದಲ್ಲಿ
ಉಡುಗೊರೆಯಾಗಿ ಚಿನ್ನದ ಆಭರಣ ಮತ್ತು ನಗದು ದೊರೆಯುತ್ತಿತ್ತು. ಇದನ್ನರಿತ ಖಾಸಗಿ ಹಣಕಾಸು ಸಂಸ್ಥೆಯ ನೌಕರ ಸೋಮಶೇಖರ್, ಕಳೆದ ಜನವರಿ ತಿಂಗಳಿನಲ್ಲಿ ಮಂಡ್ಯದ ವರ್ತಕರೊಬ್ಬರ ಸೊಸೆ ಪೂಜಾ ಎಂಬಾಕೆಯೊಂದಿಗೆ ಸೋನಿಯಾ ಅವರನ್ನು ಸಂಪರ್ಕಿಸಿದ್ದಾನೆ.

ತಾನು ಕೆಲಸ ಮಾಡುವ ಬ್ಯಾಂಕ್‍ನಲ್ಲಿ ಟಾರ್ಗೆಟ್ ನೀಡಿದ್ದಾರೆ. ಚಿನ್ನದ ಆಭರಣಗಳನ್ನು ಕೊಟ್ಟರೆ ಅದನ್ನು ನಮ್ಮ ಬ್ಯಾಂಕ್‍ನಲ್ಲಿ ಅಡವಿಟ್ಟು ಟಾರ್ಗೆಟ್ ರೀಚ್ ಮಾಡುತ್ತೇನೆ. ಇದರಿಂದ ನನಗೆ ಹೆಚ್ಚುವರಿ ಇನ್ಸೆಂಟೀವ್ ಸಿಗುತ್ತದೆ. ಅಲ್ಲದೇ ಮ್ಯಾನೇಜರ್ ಆಗಿ ಪ್ರಮೋಷನ್ ಸಿಗುತ್ತದೆ. ನನಗೆ ಸಿಗುವ ಇನ್ಸೆಂಟೀವ್‍ನಲ್ಲಿ ಶೇ.50ರಷ್ಟು ನಿಮಗೆ ಕೊಡುತ್ತೇನೆ. ಅಲ್ಲದೇ ನಾವಿಬ್ಬರೂ (ಸೋಮಶೇಖರ್ ಮತ್ತು ಪೂಜಾ) ಸೇರಿ ಕನ್ಸಟ್ರಕ್ಷನ್ ಪ್ರಾಜೆಕ್ಟ್ ಅನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದು, ಅದರಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ನೀವು ಕೊಡುವ ಚಿನ್ನಕ್ಕೆ ಹೆಚ್ಚುವರಿ ಚಿನ್ನ ಸೇರಿಸಿ ಕೊಡುತ್ತೇನೆ ಎಂದು ಆಮಿಷವೊಡ್ಡಿದ್ದಾನೆ.

ಇದನ್ನು ನಂಬಿದ ತಾನು ತನ್ನ ಬಳಿ ಇದ್ದ 650 ಗ್ರಾಂ ಮತ್ತು ತನ್ನ ಅತ್ತಿಗೆಯ 100 ಗ್ರಾಂ ಚಿನ್ನ ಸೇರಿ 15 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನ ಕೊಟ್ಟಿದ್ದಾಗಿಯೂ, ಈ ವೇಳೆ ಸೋಮಶೇಖರ್ ಮತ್ತು ಪೂಜಾ ನನಗೆ ಹೆಚ್ಚುವರಿಯಾಗಿ 250 ಗ್ರಾಂ ಚಿನ್ನ ಕೊಡುವು ದಾಗಿ ಹೇಳಿದ್ದರು. ಆನಂತರ ಆತ ಬೆಂಗಳೂರಿನ ಬಸವನಗುಡಿಯಲ್ಲಿ ಮನೆ ನಿರ್ಮಿಸುತ್ತಿ ರುವುದಾಗಿ ಹೇಳಿ 4 ಲಕ್ಷ ರೂ. ನಗದು ಪಡೆದಿದ್ದಾಗಿಯೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಸೋನಿಯಾ ತಿಳಿಸಿದ್ದಾರೆ. ಒಮ್ಮೆ ಆತ ತನ್ನ ತಾಯಿ ತಾಯಮ್ಮ ಅವರೊಂದಿಗೆ ನನ್ನನ್ನು ಭೇಟಿ ಮಾಡಿ ಚಿನ್ನಾಭರಣ ಮತ್ತು ಹಣ ಹಿಂತಿರುಗಿಸಲು ಕಾಲಾವಕಾಶ ಕೇಳಿದ್ದ. ಆನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನನ್ನ ಸಂಪರ್ಕಕ್ಕೆ ಸಿಗಲಿಲ್ಲ. ಆತ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದ ಬ್ಯಾಂಕ್‍ಗೆ ವಿಚಾರಿಸಲಾಗಿ ಕೆಲ ದಿನ ಗಳಿಂದ ಸೋಮಶೇಖರ್ ಬ್ಯಾಂಕ್‍ಗೆ ಬಂದಿಲ್ಲ ಎಂದು ಗೊತ್ತಾಯಿತು. ನನ್ನ ಚಿನ್ನವನ್ನು ಕೆಲ ಖಾಸಗಿ ಬ್ಯಾಂಕ್‍ಗಳಲ್ಲಿ ಗಿರವಿ ಇಟ್ಟು ನಂತರ ಅದನ್ನು ಬಿಡಿಸಿಕೊಂಡು ಪೂಜಾ ಜೊತೆ ಸೇರಿ ಮಾರಾಟ ಮಾಡಿದ್ದಾನೆ ಎಂಬುದೂ ಕೂಡ ನನಗೆ ಗೊತ್ತಾಗಿದೆ. ಇದರ ಬಗ್ಗೆ ಕೇಳಿದರೆ ಚಿನ್ನಾಭರಣ ಮಾರಾಟ ಮಾಡಿರುವುದನ್ನು ಒಪ್ಪಿಕೊಳ್ಳುವ ಪೂಜಾ, ಉಡಾಫೆಯಿಂದ ಉತ್ತರ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೋನಿಯಾ ಅವರು ಸೆ.23ರಂದು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಸೋಮಶೇಖರ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಹೆಚ್ಚಿನ ವಿಚಾರಣೆಗಳಿಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಪೂಜಾ ಅವರನ್ನೂ ಕೂಡ ವಿಚಾರಣೆಗೊಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಸೋಮ ಶೇಖರ್ ಸುಮಾರು 20 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣವನ್ನು ಮಂಗಳಮುಖಿ ಯರು ಹಾಗೂ ಮಹಿಳೆಯರಿಂದ ಪಡೆದು ವಂಚಿಸಿದ್ದಾನೆ ಎಂದು ಹೇಳಲಾಗಿದೆ.

ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ವಂಚಕ ಸೋಮಶೇಖರ್ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಂತಾಗಿದೆ. ಈತ ಮಂಗಳ ಮುಖಿಯರು ಹಾಗೂ ಮಹಿಳೆಯರಿಂದ ಚಿನ್ನಾಭರಣ ಮತ್ತು ಹಣ ಪಡೆದು ವಂಚಿಸಿದ್ದ. ಆದರೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಈತ ನಾಪತ್ತೆಯಾಗಿದ್ದಾನೆ ಎಂದು ತಾಯಮ್ಮ ಅವರು ಮಂಡ್ಯ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದರು. ನಂತರ ಮಂಡ್ಯಗೆ ಬಂದ ಸೋಮಶೇಖರ್ ತನಗೆ ಕೆಲವರಿಂದ ಜೀವ ಭಯ ಇದೆ ಎಂದು ಕೆಲ ಮಂಗಳಮುಖಿ ಯರ ಹೆಸರನ್ನು ಉಲ್ಲೇಖಿಸಿ ಪೊಲೀಸರಿಗೆ ಹೇಳಿಕೆ ನೀಡಿದ್ದ ಎನ್ನಲಾಗಿದ್ದು, ಈತ ನಮೂದಿಸಿದ್ದ ಮಂಗಳಮುಖಿಯರನ್ನು ಪೊಲೀಸರು ಕರೆದು ವಿಚಾರಿಸಿದಾಗ ಈತನೇ ಅವರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಮಂಗಳಮುಖಿ ಸೋನಿಯಾ ಅವರು ಸೋಮಶೇಖರ್ ಮತ್ತು ಪೂಜಾ ಅವರಿಗೆ ಚಿನ್ನಾಭರಣ ಹಾಗೂ ಹಣ ನೀಡುವಾಗ ಅದನ್ನು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ಅದನ್ನೇ ಸಾಕ್ಷಿಯಾಗಿಟ್ಟು ದೂರು ಸಲ್ಲಿಸಿದ್ದಾರೆ. ಜೀವ ಭಯ ಇದೆ ಎಂದು ದೂರು ಕೊಟ್ಟರೆ ತಾನು ಕಬಳಿ ಸಿದ್ದ ಚಿನ್ನಾಭರಣದೊಂದಿಗೆ ತಪ್ಪಿಸಿಕೊಳ್ಳಬಹುದು ಎಂಬ ಭಾವನೆಯಿಂದ ಹೇಳಿಕೆ ಕೊಟ್ಟ ಸೋಮಶೇಖರ್, ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಂತಾಗಿದೆ.