ಕರ್ತವ್ಯದ ವೇಳೆ ಮೃತಪಟ್ಟ ಪೌರಕಾರ್ಮಿಕ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು ಗ್ರಾಮಾಂತರ

ಕರ್ತವ್ಯದ ವೇಳೆ ಮೃತಪಟ್ಟ ಪೌರಕಾರ್ಮಿಕ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

June 11, 2020

ತಿ.ನರಸೀಪುರ, ಜೂ.10(ಎಸ್‍ಕೆ)-ಕರ್ತವ್ಯದ ವೇಳೆ ಮೃತಪಟ್ಟ ಹನುಮನಾಳು ಗ್ರಾಪಂ ಪೌರಕಾರ್ಮಿಕ ಮುರುಗನ್ ಕುಟುಂಬಕ್ಕೆ ಸೂಕ್ತ ಪರಿಹಾರ ವಿತರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬುಧವಾರ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟಿಸಲಾಯಿತು.

ಪಟ್ಟಣದ ತಾಲೂಕು ಕಚೇರಿ ಮಿನಿವಿಧಾನಸೌಧದ ಮುಂಭಾಗ ಜಮಾವಣೆಗೊಂಡಿದ್ದ ಸಮಿತಿಯ ಕಾರ್ಯಕರ್ತರು ಮತ್ತು ಮುಖಂಡರು ಕಳೆದ ಜೂ.6ರಂದು ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ತೆರೆದ ಚರಂಡಿಯನ್ನು ಸ್ವಚ್ಛಗೊಳಿಸುವಾಗ ಚರಂಡಿಯೊಳಗೆ ಮುಳುಗಿ ಸಾವನ್ನಪ್ಪಿರುವ ಪೌರಕಾರ್ಮಿಕ ಮುರುಗನ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು . ಬೇಜವಾಬ್ದಾರಿ ವಹಿಸಿರುವ ಪಿಡಿಓ ಮಾದೇಶ್ ಅವರನ್ನೇ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಡಾ.ಆಲಗೂಡು ಎಸ್.ಚಂದ್ರಶೇಖರ್ ಮಾತನಾಡಿ, ಪೌರಕಾರ್ಮಿಕ ಮುರುಗನ್ ಕರ್ತವ್ಯದ ವೇಳೆ ಮೃತಪಟ್ಟಿದ್ದರಿಂದ ಮಡದಿ ಹಾಗೂ ಮೂವರು ಮಕ್ಕಳಿರುವ ಕುಟುಂಬ ಈಗ ಅನಾಥರಾಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಗಮನ ಹರಿಸಿ ಸರ್ಕಾರಿಂದ ಮೃತ ಪೌರಕಾರ್ಮಿಕ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಡಿ.ನಾಗೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದಸಂಸ ಮೈಸೂರು ನಗರ ಸಂಚಾಲಕ ಅಶೋಕಪುರಂ ಪೈ.ಕೃಷ್ಣ, ಜಿಲ್ಲಾ ಸಂಘಟನಾ ಸಂಚಾಲಕ ಆರ್ಟಿಸ್ಟ್ ನಾಗರಾಜು, ವಿಭಾಗಿಯ ಸಂಚಾಲಕ ಕನ್ನಾ ಯಕನಹಳ್ಳಿ ಮರಿಸ್ವಾಮಿ, ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ಆರ್.ರಾಜು, ಮುಖಂಡರಾದ ಡಿ.ಎನ್.ಬಾಬು, ಮಹದೇವ್, ಮಾದ, ಸೋಮ, ಬನ್ನೂರು ನಾಗ, ಮಾಕನಹಳ್ಳಿ ನಟರಾಜು, ಬೈರಾಪುರ ನಂಜಯ್ಯ, ನಾಗರಾಜು, ರಂಗಸ್ವಾಮಿ ಇನ್ನಿತರರಿದ್ದರು.

Translate »