ಹಾಲಿ ಅತಿಥಿ ಉಪನ್ಯಾಸಕರಿಗೆಲ್ಲಾ ಸೇವಾ ಭದ್ರತೆ ಒದಗಿಸಿ
ಮೈಸೂರು

ಹಾಲಿ ಅತಿಥಿ ಉಪನ್ಯಾಸಕರಿಗೆಲ್ಲಾ ಸೇವಾ ಭದ್ರತೆ ಒದಗಿಸಿ

January 19, 2022

ಮೈಸೂರು, ಜ.18 (ಪಿಎಂ)- ಸೇವಾ ವಿಲೀನದ ಮೂಲಕ ಸೇವಾ ಭದ್ರತೆ ನೀಡಬೇಕೆಂಬ ನಮ್ಮ ಬೇಡಿಕೆ ಈಡೇರಿಸುವ ಬದಲು ಕೇವಲ ಮಾಸಿಕ ವೇತನ ಹೆಚ್ಚಳದೊಂದಿಗೆ ಕಾರ್ಯಾಭಾರದ ಅವಧಿ ವಿಸ್ತರಿಸಿ ರುವ ಸರ್ಕಾರದ ಕ್ರಮ ಸೂಕ್ತವಲ್ಲ. ಜೊತೆಗೆ ಶೇ.50ರಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದು ಕೊಳ್ಳಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅತಿಥಿ ಉಪನ್ಯಾಸಕರು, ಎಲ್ಲಾ ಅತಿಥಿ ಉಪನ್ಯಾಸಕರಿಗೂ ಸೇವಾ ವಿಲೀನಾತಿ ಮೂಲಕ ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.

ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ನೆಪದಲ್ಲಿ ಸರ್ಕಾರ, 14,183 ಅತಿಥಿ ಉಪನ್ಯಾಸಕರ ಪೈಕಿ ಶೇ.50ರಷ್ಟು ಮಂದಿಯ ಉದ್ಯೋಗ ಕಡಿತಗೊಳಿಸುವ ಮಾರಕ ಕ್ರಮ ಕೈಗೊಂಡಿದೆ. ಕರ್ನಾಟಕ ಸಿವಿಲ್ ಸರ್ವೀಸ್ (ಸಾಮಾನ್ಯ ನೇಮಕಾತಿ) ರೂಲ್ಸ್ 1977, ನಿಯಮ 1(3)(2) ಮತ್ತು 14ರ ಅಡಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾ ವಿಲೀನಕ್ಕೆ ಅವಕಾಶವಿದೆ. ನಮ್ಮ ಬೇಡಿಕೆ ಸಂಬಂಧ ಸರ್ಕಾರ ರಚಿಸಿದ್ದ ಸಮಿತಿಯು ಇದನ್ನು ಪರಿಗಣಿ ಸುವ ಗೋಜಿಗೆ ಹೋಗಿಲ್ಲ ಎಂದು ಕಿಡಿಕಾರಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಮೈಸೂರು ಜಿಲ್ಲಾ ಘಟಕದ ಪದಾಧಿಕಾರಿಗಳು, ಹೀಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 2.52 ಲಕ್ಷಕ್ಕೂ ಅಧಿಕ ಹುದ್ದೆಗಳು ರಾಜ್ಯ ಸರ್ಕಾರದ ವಿವಿಧ ಇಲಾಖೆ ಗಳಲ್ಲಿ ಖಾಲಿ ಇದೆ ಎಂದು ಸರ್ಕಾರವೇ ನ್ಯಾಯಾ ಲಯಕ್ಕೆ ವರದಿ ನೀಡಿದ್ದು, ಉನ್ನತ ಶಿಕ್ಷಣ ಇಲಾಖೆ ಒಂದರಲ್ಲೇ 12,319 ಹುದ್ದೆಗಳು ಖಾಲಿ ಇವೆ. ಹೀಗಿರುವಾಗ ಸೇವಾ ವಿಲೀನಕ್ಕೆ ತೊಂದರೆ ಏನು? ಎಂದು ಪ್ರಶ್ನಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ 40:60ರ ಅನುಪಾತದಲ್ಲಿ ತರಗತಿ ವಿಭಜಿಸಿ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಈ ಪ್ರಕಾರ ಕ್ರಮ ವಹಿಸಿದರೂ ಕಾರ್ಯ ಭಾರದ ಕೊರತೆ ಉಂಟಾಗುವುದಿಲ್ಲ. ಮಾತ್ರವಲ್ಲದೆ, 14,183 ಅತಿಥಿ ಉಪನ್ಯಾಸಕರಿಗೂ ಉದ್ಯೋಗ ಕಲ್ಪಿಸ ಬಹುದು ಎಂದರು. ಅತಿಥಿ ಉಪನ್ಯಾಸಕರ ಬೇಡಿಕೆ ಬೆಂಬಲಿಸಿ ಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿ ಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸೇವಾ ವಿಲೀನಗೊಳಿಸ ಬೇಕೆಂಬ ಏಕೈಕ ಬೇಡಿಕೆಯನ್ನೇ ಸರ್ಕಾರ ಪರಿಗಣಿಸಿಲ್ಲ. ಇದು ಅತ್ಯಂತ ಖಂಡನೀಯ. ಮುರಾರ್ಜಿ ವಸತಿ ಶಾಲಾ ಶಿಕ್ಷಕರು, ಜೆಓಸಿ ಉಪನ್ಯಾಸಕರನ್ನು ಸೇವೆ ಯಲ್ಲಿ ವಿಲೀನಗೊಳಿಸಿರುವ ಮಾದರಿ ರಾಜ್ಯದಲ್ಲಿದೆ. ಈ ಸಂಬಂಧ ವಿಧಾನಸಭೆ, ವಿಧಾನಪರಿಷತ್ ಎರಡರಲ್ಲೂ ನಿರ್ಣಯ ಕೈಗೊಂಡು ಖಾಯಂ ಮಾಡಲಾಗಿದೆ. ಹೀಗಿರುವಾಗ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ 39 ಇಲಾಖೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ. ಹಾಗಾಗಿ ಅತಿಥಿ ಉಪನ್ಯಾಸ ಕರ ಸೇವಾ ವಿಲೀನಕ್ಕೆ ಅವಕಾಶವಿದೆ. ಸರ್ಕಾರದ ಹೊಸ ಆದೇಶದಿಂದ ಶೇ.50ರಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಜೊತೆಗೆ ಇಲ್ಲಿಯೂ ರೋಸ್ಟರ್ ಪದ್ಧತಿ ಅನುಸರಿಸಿಲ್ಲ ಎಂದು ದೂರಿದರಲ್ಲದೆ, ಸದನದ ಒಳಗೆ ಮಾತ್ರವಲ್ಲದೆ, ಹೊರಗೂ ಅತಿಥಿ ಉಪನ್ಯಾಸಕರ ಬೇಡಿಕೆ ಬೆಂಬಲಿಸುವುದಾಗಿ ತಿಳಿಸಿದರು. ಸಮನ್ವಯ ಸಮಿತಿ ರಾಜ್ಯ ಮಾಧ್ಯಮ ವಕ್ತಾರ ಡಾ.ಜೆ.ಸಿ. ರವೀಂದ್ರ, ಮೈಸೂರು ಜಿಲ್ಲಾಧ್ಯಕ್ಷ ಹನುಂತೇಶ್, ಉಪಾ ಧ್ಯಕ್ಷ ಡಾ.ಜಿ.ಮಹೇಶ್, ಅತಿಥಿ ಉಪನ್ಯಾಸಕರಾದ ಕೆ.ಶ್ರೀಜಾ, ಚೈತ್ರಾ ಸುದ್ದಿಗೋಷ್ಠಿಯಲ್ಲಿದ್ದರು.

Translate »