ದಾಖಲೆ ಜಂಬೂಸವಾರಿ
ಮೈಸೂರು

ದಾಖಲೆ ಜಂಬೂಸವಾರಿ

October 27, 2020

ಮೈಸೂರು, ಅ.25(ಆರ್‍ಕೆ)- ಕೊರೊನಾ ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕಾ ಕ್ರಮವಾಗಿ ಪೂರ್ವ ನಿರ್ಧಾರದಂತೆ ಮೈಸೂರು ಅರಮನೆ ಆವರಣದಲ್ಲಿ ಆಯ್ದ ನೂರಾರು ಮಂದಿ ಸಮ್ಮುಖದಲ್ಲಿ ಜಂಬೂ ಸವಾರಿ ನೆರವೇರಿಸುವ ಮೂಲಕ ಈ ಸಾಲಿನ ದಸರಾ ಮಹೋತ್ಸವಕ್ಕೆ ಇಂದು ತೆರೆ ಬಿದ್ದಿತು. ಅರಮನೆ ಆವರಣದಲ್ಲಿ ಕೇವಲ 23 ನಿಮಿಷಗಳ ಕಾಲ 400 ಮೀಟರ್ ಅಂತರ ಜಂಬೂಸವಾರಿ ಮೆರವಣಿಗೆ ಸರಳ ಹಾಗೂ ಸಾಂಪ್ರದಾಯಿಕ ದಸರಾ ಯಾವುದೇ ವಿಘ್ನವಿಲ್ಲದೆ ನೆರವೇರಿತು.

ಕೋವಿಡ್-19 ಸಂಕಷ್ಟ ಪರಿಸ್ಥಿತಿ ಹಿನ್ನೆಲೆ ಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ನಿಗದಿ ಪಡಿಸಿದಂತೆ ಸುಮಾರು 300 ಮಂದಿ ಆಹ್ವಾ ನಿತರಿಗೆ ಸೀಮಿತಗೊಳಿಸಿ, ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ನವರಾತ್ರಿ ಉತ್ಸವದ ಅಂತಿಮ ಪ್ರಮುಖ ಆಕರ್ಷಣೆ ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ಶಾಸ್ತ್ರೋಕ್ತವಾಗಿ ನೆರವೇರಿತು. ನಾಡಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇಂದು ಮಧ್ಯಾಹ್ನ 3 ಗಂಟೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ನೆರ ವೇರಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾ ಸೋದ್ಯಮ ಸಚಿವ ಸಿ.ಟಿ.ರವಿ ಸೇರಿದಂತೆ ಸಚಿವ ಸಂಪುಟದ ಕೆಲ ಸದಸ್ಯರು ಹಾಗೂ ಗಣ್ಯರೊಂದಿಗೆ ಮುಖ್ಯಮಂತ್ರಿಗಳು ಮಧ್ಯಾಹ್ನ 2.57 ಗಂಟೆಗೆ ಐರಾವತ ಬಸ್ಸಿನಲ್ಲಿ ಅರಮನೆ ಆವರಣಕ್ಕೆ ಆಗಮಿಸಿದರು. ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಮೇಯರ್ ತಸ್ನೀಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನಂತರ ಅಲಂಕೃತಗೊಂಡಿದ್ದ ನಿಶಾನೆ ಆನೆ ಗೋಪಿ ಮತ್ತು ನೌಪತ್ ಆನೆ ವಿಕ್ರಮ ಗಾಂಭೀರ್ಯದಿಂದ ಹೆಜ್ಜೆಹಾಕಿ ಅರಮನೆ ಮುಂಭಾಗ ಕುಳಿತಿದ್ದ ಗಣ್ಯರಿಗೆ ನಮಿಸಿ ಮುಂದೆ ಸಾಗಿದವು. ಮಧ್ಯಾಹ್ನ 3.24 ಗಂಟೆ ವೇಳೆಗೆ ವಿಜಯದಶಮಿ ಮೆರವಣಿಗೆ ಆರಂಭ ವಾಯಿತು. ವಿದ್ವಾನ್ ವಿ.ಕೃಷ್ಣಮೂರ್ತಿ ಮತ್ತು ವಿದ್ವಾನ್ ಎ.ಪುಟ್ಟಸ್ವಾಮಿ ನೇತೃತ್ವದ ನಾದಸ್ವರ ವಾದನ, ರಾಜಪ್ಪ ಮತ್ತು ತಂಡದವರ ವೀರಗಾಸೆ ಕುಣಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಕೊರೊನಾ ವಾರಿಯರ್ಸ್ ಸ್ತಬ್ಧಚಿತ್ರ, ಶ್ರೀನಿವಾಸ್ ಮತ್ತು ತಂಡದ ಚಂಡೇಮೇಳ, ಸಿದ್ದರಾಜು ಮತ್ತು ತಂಡದ ಮರಗಾಲು ವೇಷ, ಟಿ.ಕೆ.ರಾಜ ಶೇಖರ್ ಮತ್ತು ತಂಡದ ಚಿಲಿಪಿಲಿ ಗೊಂಬೆ, ಕರ್ನಾಟಕ ಪೊಲೀಸ್ ಬ್ಯಾಂಡ್ ನಾದಸ್ವರ ಕಲಾವಿದರ ಒಳಗೊಂಡ ಆನೆಬಂಡಿ (ಅರಮನೆ ವಾದ್ಯಗೋಷ್ಠಿ), ಕೆಎಸ್‍ಆರ್‍ಪಿ ಕಮಾಂ ಡೆಂಟ್ ಎಂ.ಜಿ.ನಾಗರಾಜ್, ನೇತೃತ್ವದ ಪೊಲೀಸ್ ಅಶ್ವದಳದ ಸಿಬ್ಬಂದಿ ಮೆರವಣಿಗೆ ಯಲ್ಲಿ ಸಾಗುವ ಮೂಲಕ ಕಣ್ಮನ ಸೆಳೆದರಲ್ಲದೆ ನಾಡಿನ ಕಲೆ, ಸಂಸ್ಕøತಿ, ಸಂಗೀತವನ್ನು ಅನಾವರಣಗೊಳಿಸಿದರು. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನ ರಾಗಿದ್ದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತ ಕ್ಯಾಪ್ಟನ್ ಅಭಿಮನ್ಯು, ಎಡಗಡೆ ಕಾವೇರಿ ಮತ್ತು ಬಲಬದಿ ವಿಜಯರೊಂದಿಗೆ ಗಜಗಾಂಭಿರ್ಯದಿಂದ ಮಧ್ಯಾಹ್ನ 3.50ರ ವೇಳೆಗೆ ಹೆಜ್ಜೆ ಹಾಕಿದಾಗ ಅರಮನೆ ಆವರಣ ದಲ್ಲಿ ನೆರೆದಿದ್ದ ಜನರು ಭಕ್ತಿಭಾವದಿಂದ ಎದ್ದುನಿಂತು ನಮಿಸಿ, ಕಣ್ತುಂಬಿಕೊಂಡರು. ನಂತರ ಸರಿಯಾಗಿ ಮಧ್ಯಾಹ್ನ 3.53ರ ವೇಳೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿದರು. ಇದೇ ವೇಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಾಜವಂಶಸ್ಥ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ತಸ್ನೀಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಚಂದ್ರ ಗುಪ್ತ ಸಹ ಚಿನ್ನದ ಅಂಬಾರಿಯಲ್ಲಿ ಪ್ರತಿಸ್ಥಾಪಿಸಲಾಗಿದ್ದ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು.

ಈ ವೇಳೆ 12 ಬಾರಿ ಕುಶಾಲತೋಪು ಸಿಡಿಸಲಾಯಿತಲ್ಲದೆ ರಾಷ್ಟ್ರಗೀತೆ ಮೊಳಗಿತು. ನಂತರ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು, ಕಾವೇರಿ ಮತ್ತು ವಿಜಯ ರೊಂದಿಗೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಅರಮನೆ ಉತ್ತರ ದ್ವಾರದ ಶ್ರೀ ಭುವನೇ ಶ್ವರಿ ದೇವಸ್ಥಾನದವರೆಗೆ ಸಾಗಿ ಪೂರ್ವನಿಗದಿಯಂತೆ ಅಲ್ಲಿ ಮೆರವಣಿಗೆ ಅಂತ್ಯ ಗೊಂಡಿತು. ಈ ಮೂಲಕ ನಾಡಿನ ಐತಿಹಾಸಿಕ ವಿಜಯದಶಮಿ ಮೆರವಣಿಗೆಯು ಕೇವಲ 23 ನಿಮಿಷದೊಳಗೆ ಮುಕ್ತಾಯಗೊಂಡಿತು. ಅರಮನೆ ಆವರಣದ ಶ್ವೇತವರಹಾ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಕಲಾತಂಡ ಹಾಗೂ ಸ್ತಬ್ಧಚಿತ್ರಗಳು ಸುಮಾರು 270 ಮೀಟರ್ ಸಾಗಿ ಅರಮನೆ ಬಲರಾಮ ದ್ವಾರದ ಬಳಿ ಅಂತ್ಯಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಅತ್ಯಂತ ಸರಳ ಹಾಗೂ ಸಾಂಪ್ರದಾಯಕ ದಸರಾ ಉತ್ಸವ, ಜಂಬೂಸವಾರಿ ನೆರವೇರುವ ಮೂಲಕ ಇತಿಹಾಸದ ಪುಟದಲ್ಲಿ ದಾಖಲಾಯಿತು.

ಮೆರವಣಿಗೆಯಲ್ಲಿ ಸಾಗಿದ ಕೊರೊನಾ ವೈರಸ್ ಸೊಂಕು ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ಜಾಗೃತಿ ಸ್ತಬ್ಧಚಿತ್ರ ಅತ್ಯಾರ್ಷಕ ಹಾಗೂ ಅರ್ಥಪೂರ್ಣವಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾಮಾಜಿಕ ಅಂತರ ಕಾಪಾಡಬೇಕು, ಎಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕು, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ, ಕೋವಿಡ್-19 ವಿರುದ್ಧ ಹೋರಾಟ-ನಮ್ಮೆಲ್ಲರ ಹೋರಾಟ ಎಂಬಿತ್ಯಾದಿ ಘೋಷಣೆಗಳೊಂ ದಿಗೆ ಕೊರೊನಾ ಸೊಂಕನ್ನು ತಡೆಯಬೇಕೆಂಬ ಸಂದೇಶವನ್ನು ಈ ಶಬ್ಧಚಿತ್ರದಲ್ಲಿ ರವಾನಿಸ ಲಾಯಿತು. ಅದೇ ರೀತಿ ಸಿದ್ಧರಾಜು ಮತ್ತು ತಂಡದ ಮರಗಾಲು ವೇಷಧಾರಿಗಳು ತಾಯಿ ಚಾಮುಂಡೇಶ್ವರಿ ದೇವಿಯು ಸಿರಿಂಜ್ ಹಿಡಿದು ಕೋವಿಡ್ ಸಂಕೇತ ಚಿತ್ರಕ್ಕೆ ತಿವಿಯುವ ದೃಶ್ಯ ಪ್ರದರ್ಶಿಸಿ ಕೋವಿಡ್ ಅನ್ನು ಸಂಪೂರ್ಣ ಸಂಹಾರ ಮಾಡುವ ಪ್ರಾತ್ಯಕ್ಷಿಕೆ ಪ್ರದರ್ಶನ ಮಾಡಿದ್ದು, ಸಂಕಷ್ಟದ ಇಂತಹ ಪರಿಸ್ಥಿತಿಯಲ್ಲಿ ಅತ್ಯಂತ ಅರ್ಥಗರ್ಭಿತವಾಗಿತ್ತು.

ಈವರೆಗೆ ದಸರಾ ಜಂಬೂಸವಾರಿ ದಿನ ಅರಮನೆ ಆವರಣ, ಸುತ್ತಮುತ್ತಲಿನ ರಸ್ತೆಗಳು ಹಾಗೂ ವಿಜಯದಶಮಿ ಮೆರವಣಿಗೆ ಮಾರ್ಗದುದ್ದಕ್ಕೂ ಲಕ್ಷಾಂತರ ಮಂದಿ ಜಮಾಯಿಸಿ ಐತಿಹಾಸಿಕ ಕಲಾತಂಡಗಳು, ಸ್ತಬ್ಧಚಿತ್ರಗಳು ಹಾಗೂ ಚಿನ್ನದ ಅಂಬಾರಿಯಲ್ಲಿ ವೀರಾಜಮಾ ನಳಾಗುತ್ತಿದ್ದ ತಾಯಿ ಶ್ರೀ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸೊಂಕಿನ ಹಿನ್ನಲೆಯಲ್ಲಿ ಈ ಭಾರಿ ಅತ್ಯಂತ ಸರಳ ರೀತಿಯಲ್ಲಿ ದಸರಾ ಮಹೋತ್ಸವವನ್ನು ಆಚರಿಸಿದ ಹಿನ್ನೆಲೆಯಲ್ಲಿ ಇಂದು ನಡೆದ ಜಂಬೂಸವಾರಿ ವೇಳೆ ಅರಮನೆ ಆವರಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತಲ್ಲದೆ, ಸುತ್ತಲಿನ ರಸ್ತೆಗಳು, ರಾಜಮಾರ್ಗ ಮರುಭೂಮಿಯಂತೆ ಕಂಡು ಬಂದಿತು. ಆ ಮೂಲಕ 2020ರ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಂತಾಗಿದ್ದು, ಜಂಬೂಸವಾರಿ ಸರಳವಾದರೂ ಸಾಂಪ್ರದಾಯಿಕ ಹಾಗೂ ಅರ್ಥಗರ್ಭಿತವಾಗಿ ಯಾವುದೇ ಅಡ್ಡಿ-ಆತಂಕವಿಲ್ಲದೆ ಸುಸೂತ್ರವಾಗಿ ನೆರವೇರಿತು. ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಡಾ.ಎ.ಎನ್. ಪ್ರಕಾಶಗೌಡ, ಗೀತಾಪ್ರಸನ್ನ, ಎಸ್ಪಿ ಸಿ.ಬಿ.ರಿಷ್ಯಂತ್ ನೇತೃತ್ವದಲ್ಲಿ ಅರಮನೆ ಆವರಣ ಮತ್ತು ಎಲ್ಲಾ ಪ್ರವೇಶ ದ್ವಾರಗಳಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡ ಲಾಗಿತ್ತು. ಅರಣ್ಯ ಇಲಾಖೆ ವತಿಯಿಂದ ಮೈಸೂರು ವೃತ್ತದ ಸಿಸಿಎಫ್ ಟಿ. ಹೀರಾ ಲಾಲ್, ಡಿಸಿಎಫ್‍ಗಳಾದ ಎಂ.ಜಿ ಅಲೆಕ್ಸಾಂಡರ್, ಡಾ.ಕೆ.ಸಿ.ಪ್ರಶಾಂತ್‍ಕುಮಾರ್, ಆರ್‍ಎಫ್‍ಓ ಕೆ.ಸುರೇಂದ್ರ, ಡಿಆರ್‍ಎಫ್‍ಓ ಪುಟ್ಟಮಾದೇಗೌಡ ಸೇರಿದಂತೆ ಪ್ರೊಬೆಷನರಿ ಅಧಿಕಾರಿಗಳು ಗಜಪಡೆಯ ಮೇಲುಸ್ತುವಾರಿ ವಹಿಸಿದ್ದರು. ಅರಮನೆಯ ಸುತ್ತಲ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳ ವಡಿಸಿದ್ದರಿಂದ ಸಾರ್ವಜನಿಕರಿಗೆ ಅರಮನೆಯತ್ತ ಸುಳಿಯಲು ಸಾಧ್ಯವಾಗಲಿಲ್ಲ.

Translate »