ನ.1ರವರೆಗೆ ಮೈಸೂರು, ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಮೈಸೂರು

ನ.1ರವರೆಗೆ ಮೈಸೂರು, ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

October 15, 2020

ಮೈಸೂರು, ಅ.14(ಆರ್‍ಕೆ)-ಕೊರೊನಾ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರು ನಗರ ಮತ್ತು ಸುತ್ತಮುತ್ತಲ ಪ್ರವಾಸಿತಾಣಗಳಲ್ಲಿ ನವೆಂಬರ್ 1ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಮೈಸೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂ ದಿಗೆ ಸಭೆ ನಡೆಸಿದ ಅವರು, ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಬಾರಿಯ ನಾಡಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸುತ್ತಿರುವುದರಿಂದ ಈ ಸಂದರ್ಭದಲ್ಲಿ ಮೈಸೂರು ಮತ್ತು ಸುತ್ತಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಗ ಮಿಸದಂತೆ ಮನವಿ ಮಾಡಿದ್ದಾರೆ. ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಸುಮಾರು 900 ಮಂದಿ ಮೃತಪಟ್ಟಿದ್ದು, 6,800ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸುವುದು ಸೂಕ್ತ ವಲ್ಲ. ಕಳೆದ ವರ್ಷ ದಸರಾ ಸಮಯದಲ್ಲಿ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸಿ ದ್ದರು. ಈ ಬಾರಿ ಕೊರೊನಾ ಪರಿಸ್ಥಿತಿ ಇರುವುದರಿಂದ ಇಲ್ಲಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚಾಮುಂಡಿಬೆಟ್ಟಕ್ಕೆ ಅಕ್ಟೋ ಬರ್ 14ರಿಂದ, ಅರಮನೆ, ಮೃಗಾ ಲಯ, ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯದ ಪ್ರವೇಶವನ್ನು ಅ.17ರಿಂದ ನ.1 ರವರೆಗೆ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಅದೇ ರೀತಿ ಮೈಸೂರಿಗೆ ಸಮೀಪದಲ್ಲಿರುವ ಕೆಆರ್‍ಎಸ್, ರಂಗನತಿಟ್ಟು, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ನಿಮಿಷಾಂಬ ದೇವ ಸ್ಥಾನ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೂ ಪ್ರವೇಶ ನಿರ್ಬಂಧಿಸುವಂತೆ ಮಂಡ್ಯ ಜಿಲ್ಲಾ ಡಳಿತಕ್ಕೆ ಮನವಿ ಮಾಡಲಾಗುವುದು ಎಂದರು. ಅ.16ರಂದು ಮುಖ್ಯಮಂತ್ರಿಗಳು ಕೊರೊನಾ ನಿಯಂತ್ರಣ ಸಂಬಂಧ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಪಾಲಿಕೆ ಅಧಿಕಾರಿ ಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿಗಳು, ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಸಿ.ಬಿ. ರಿಷ್ಯಂತ್, ಜಿಪಂ ಸಿಇಓ ಡಿ.ಭಾರತಿ, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಎಡಿಸಿ ಮಂಜುನಾಥ ಸ್ವಾಮಿ, ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಇತರರಿದ್ದರು.

ಮನೆಯಲ್ಲೇ ದಸರಾ ಸಂಭ್ರಮಿಸಿ
ಮೈಸೂರು, ಅ.14(ಎಸ್‍ಬಿಡಿ)- ಈ ಬಾರಿ ದಸರಾ ಉತ್ಸವವನ್ನು ಸಾರ್ವಜನಿಕರು ಮನೆಯಲ್ಲೇ ಕುಳಿತು ವೀಕ್ಷಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಗಮನಿಸಿ ತಾಂತ್ರಿಕ ಸಮಿತಿ ದಸರಾ ಆಚರಣೆ ಸಂಬಂಧ ತಾಂತ್ರಿಕ ತಂಡ ವರದಿ ನೀಡಿದ್ದು, ಅದರ ಆಧಾರದಲ್ಲೇ ಈ ಬಾರಿ ಸರಳ, ಸಾಂಪ್ರದಾ ಯಿಕ ದಸರಾ ಆಚರಿಸಲಾಗುವುದು. ಅ.17ಕ್ಕೆ ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ದಸರಾ ಉದ್ಘಾಟನೆಯಾಗಲಿದ್ದು, ಅಂದು ಸಂಜೆ ಅರಮನೆ ಆವರಣದ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಅ.26ರವರೆಗೆ ನಿತ್ಯ 2 ಗಂಟೆಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ. ಅರಮನೆ ಆವರಣದಲ್ಲೇ ಅರ್ಧ ಕಿಮೀನಷ್ಟು ದೂರ ಜಂಬೂ ಸವಾರಿ ಮೆರವಣಿಗೆ ಇರಲಿದೆ. ಸಂಪ್ರದಾಯ ಬಿಡಬಾರದು ಎಂಬ ಕಾರಣಕ್ಕೆ ವಿಧಿ ವಿಧಾನದಂತೆ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನೂ ವರ್ಚುವಲ್ ನೇರ ಪ್ರಸಾರ ಮಾಡಲಾಗುತ್ತದೆ. ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿ ದಸರಾ ವೀಕ್ಷಿಸಬೇಕು. ಸುರಕ್ಷತೆ ದೃಷ್ಟಿ ಯಿಂದ ಈ ಬಾರಿ ಶೇ.50ರಷ್ಟು ದೀಪಾಲಂಕಾರ ಮಾಡಿದ್ದು, ಈಗಾಗಲೇ ದಸರಾ ಸಂಭ್ರಮ ಕಳೆಗಟ್ಟಿದೆ ಎಂದು ಫೇಸ್‍ಬುಕ್ ಲೈವ್‍ನಲ್ಲಿ ತಿಳಿಸಿದರು.

 

 

 

Translate »