ಮೈಸೂರು, ಜೂ.23(ಎಂಕೆ)- ದೇವ ಸ್ಥಾನದ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾ ರಕ್ಕೆ ಘರ್ಷಣೆ ನಡೆದು, ಗ್ರಾಪಂ ಅಧ್ಯಕ್ಷ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ತಾಲೂಕಿನ ಆನಂದೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಆನಂದೂರು ಗ್ರಾಪಂ ಅಧ್ಯಕ್ಷ ರಾಮೇಗೌಡ ಹಾಗೂ ಅದೇ ಗ್ರಾಮದ ಚಂದ್ರಶೇಖರ್, ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆನಂದೂರಿನಿಂದ ಗ್ರಾಮದೇವತೆ ಆಲಕ್ಕಮ್ಮ ದೇವಸ್ಥಾನ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಪರಿಶೀಲನೆಗೆ ಹೋಗಿದ್ದ ಗ್ರಾಪಂ ಅಧ್ಯಕ್ಷ ರಾಮೇಗೌಡರು, ರಸ್ತೆಯನ್ನು ಚಂದ್ರಶೇಖರ್ ಒತ್ತುವರಿ ಮಾಡಿಕೊಂಡಿದ್ದಾರೆ ಎಂದರಂತೆ. ಆಗ ಸ್ಥಳದಲ್ಲಿದ್ದ ಚಂದ್ರಶೇಖರ್, ನಾನು ಒತ್ತುವರಿ ಮಾಡಿಕೊಂಡಿಲ್ಲ. ಬದಲಿಗೆ ನನ್ನ ಜಮೀನಿನ ಮೇಲೆಯೇ ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪರಸ್ಪರ ಹೊಡೆದಾಡಿದ್ದರಿಂದ ಇಬ್ಬರಿಗೂ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಪಂ ಅಧ್ಯಕ್ಷ ರಾಮೇಗೌಡ ಹಾಗೂ ಅವರ ಐದಾರು ಮಂದಿ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದಾಗಿ ಚಂದ್ರಶೇಖರ್ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಇಲವಾಲ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬಂದೋಬಸ್ತ್: ರಾಮೇಗೌಡ ಹಾಗೂ ಚಂದ್ರಶೇಖರ್ ನಡುವೆ ರಾಜಕೀಯ ವೈಷಮ್ಯವಿತ್ತು ಎಂದು ತಿಳಿದುಬಂದಿದ್ದು, ಇಲವಾಲ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮೂವರು ಸಿಬ್ಬಂದಿ ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.