ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ನಿಷೇಧ
ಕೊಡಗು

ಗೋಣಿಕೊಪ್ಪದಲ್ಲಿ ರಸ್ತೆ ಬದಿ ವ್ಯಾಪಾರ ನಿಷೇಧ

April 6, 2020

ಗೋಣಿಕೊಪ್ಪಲು, ಏ.5- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲ ಉದ್ದೇಶದಿಂದ ಗೋಣಿಕೊಪ್ಪ ನಗರದ ರಸ್ತೆ ಬದಿಯ ವ್ಯಾಪಾರವನ್ನು ನಿಷೇಧಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ದೇಶದಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ವಾರದ ಮೂರು ದಿನಗಳಲ್ಲಿ ಆಹಾರ ಸಾಮಾಗ್ರಿ ಹಾಗೂ ತರಕಾರಿಗಳನ್ನು ಖರೀದಿಸಲು ನಾಗರಿಕರು ಹೆಚ್ಚಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತಿದೆ. ಇದರಿಂದಾಗಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಹೊರ ಜಿಲ್ಲೆ ಹಾಗೂ ತಾಲೂಕುಗಳಿಂದ ಹೆಚ್ಚಾಗಿ ವ್ಯಾಪಾರಸ್ಥರು ಗೋಣಿಕೊಪ್ಪ ನಗರಕ್ಕೆ ಆಗಮಿಸಿ ರಸ್ತೆ ಬದಿಯಲ್ಲಿ ತರಕಾರಿ, ಸೊಪ್ಪು, ಟೊಮೆಟೊ, ಹಣ್ಣು ಇತ್ಯಾದಿ ವ್ಯಾಪಾರ ಆರಂಭಿಸಿದ್ದರು. ಇದರಿಂದ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತಿತ್ತು. ಪೊಲೀಸರಿಗೆ ಇವರನ್ನು ನಿಯಂತ್ರಣ ಮಾಡಲು ಕಷ್ಟವಾಗು ತ್ತಿತ್ತು. ಇದನ್ನು ಮನಗಂಡು ಇವರಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ತಮ್ಮ ವ್ಯಾಪ್ತಿಯ ಪ್ರದೇಶವನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದಾರೆ. ಈ ಕೆಲಸಕ್ಕೆ ಗೋಣಿಕೊಪ್ಪ ಛೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರು ಬೆಂಬಲ ಸೂಚಿಸಿದ್ದಾರೆ. ತುರ್ತು ಸಭೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ವ್ಯಾಪಾರಸ್ಥರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು. ಯಾರೂ ಕೂಡ ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತಿಲ್ಲ. ಒಂದು ವೇಳೆ ವ್ಯಾಪಾರ ಕಂಡು ಬಂದಲ್ಲಿ ಕಠಿಣ ಕ್ರಮಕೈ ಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭ ಮಾತನಾಡಿದ ಗೋಣಿಕೊಪ್ಪ ಆರ್‍ಎಂಸಿ ಅಧ್ಯಕ್ಷ ಸುಜಾ ಪೂಣಚ್ಚ, ಆರ್‍ಎಂಸಿಯ ಖಾಲಿ ಜಾಗ ಹಾಗೂ ರಸ್ತೆ ಬದಿಯ 5 ಮಳಿಗೆಗಳಲ್ಲಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಿದ್ದೇವೆ. ಇದರ ಪ್ರಯೋಜನ ಪಡೆ ಯುವ ಮೂಲಕ ಜನಸಂದಣಿ ಕಡಿಮೆ ಮಾಡಬಹುದು ಎಂದರು. ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಅದೇಂಗಡ ವಿನು ಚಂಗಪ್ಪ ಮಾತನಾಡಿ, ಆರ್‍ಎಂಸಿ ಯಾರ್ಡ್‍ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆಗೆ ಖಾಲಿ ಜಾಗ ಸೇರಿದಂತೆ ವ್ಯಾಪಾರಸ್ಥರಿಗೆ ನೆರಳಿನ ವ್ಯವಸ್ಥೆ ಇರುವುದ ರಿಂದ ಇದರ ಪ್ರಯೋಜನ ಪಡೆಯಲು ತಿಳಿಸಿದರು. ತರಕಾರಿ ಹಾಗೂ ಹಣ್ಣಿನ ವ್ಯಾಪಾರಸ್ಥರಿಗೆ ಜಿಲ್ಲಾಡಳಿತ ನೀಡಿರುವ ದಿನಗಳಲ್ಲಿ ವ್ಯಾಪಾರ ನಡೆಸಲು ಯಾವುದೇ ಶುಲ್ಕವನ್ನು ವಿಧಿಸದೆ ಉಚಿತವಾಗಿ ಮಳಿಗೆ ಹಾಗೂ ಖಾಲಿ ಜಾಗವನ್ನು ನೀಡಲಾಗುವುದು ಎಂದರು. ಮಳಿಗೆಗಳ ಕೀ ಅನ್ನು ತಾಲೂಕಿನ ತಹಶೀಲ್ದಾರ್ ನಂದೀಶ್ ಕುಮಾರ್ ಅವರಿಗೆ ಇದೇ ಸಂದರ್ಭದಲ್ಲಿ ಹಸ್ತಾಂತರ ಮಾಡಲಾಯಿತು.

ಸಭೆಯಲ್ಲಿ ತಹಶಿಲ್ದಾರ್ ನಂದೀಶ್ ಕುಮಾರ್, ಆರ್‍ಎಂಸಿ ಉಪಾಧ್ಯಕ್ಷ ಸುಬ್ರಮಣಿ, ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ರಾದ ಸುವಿನ್ ಗಣಪತಿ, ಆದೇಂಗಡ ವಿನು ಚಂಗಪ್ಪ, ನಿರ್ದೇ ಶಕ ಅಜ್ಜಿಕುಟ್ಟಿರ ಪ್ರವೀಣ್, ಗುಮ್ಮಟೀರ ಕಿಲನ್ ಗಣಪತಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರಕಾಶ್, ಚೇಂಬರ್ ಆಫ್ ಕಾಮರ್ಸ್ ಅದ್ಯಕ್ಷ ಕಡೆಮಾಡ ಸುನಿಲ್ ಮಾದಪ್ಪ, ಆರ್.ಎಂ.ಸಿ. ಕಾರ್ಯದರ್ಶಿ ಎಸ್. ಶ್ರೀಧರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »