ಬಿಳಿಗೆರೆ ಪೊಲೀಸರಿಂದ ಮರಳು ಕಲಾವಿದೆ ಬಂಧನ
ಮೈಸೂರು

ಬಿಳಿಗೆರೆ ಪೊಲೀಸರಿಂದ ಮರಳು ಕಲಾವಿದೆ ಬಂಧನ

July 3, 2020

ನಂಜನಗೂಡು, ಜು.2(ರಶಂ)- ನಂಜನಗೂಡು ತಾಲೂಕು ಹರಿಹರಪುರ ಗ್ರಾಮದ ಶೀ ಸೋಮೇಶ್ವರ ದೇವಸ್ಥಾನದ ಬಳಿ ಪುರಾತನ ವೀರಭದ್ರಸ್ವಾಮಿ ಕಲ್ಲಿನ ವಿಗ್ರಹ ಕಳವು ಆರೋಪದ ಹಿನ್ನೆಲೆಯಲ್ಲಿ ಬಿಳಿಗೆರೆ ಠಾಣೆ ಪೊಲೀಸರು ಮೈಸೂರಿನ ಮರಳು ಕಲಾವಿದೆಯನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.

ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಸ್ಯಾಂಡ್ ಮ್ಯೂಸಿಯಂ ನಡೆಸುತ್ತಿರುವ ಗೌರಿ ಎಂಬುವರೇ ಆರೋಪ ಎದುರಿಸುತ್ತಿದ್ದು, ಬಂಧನ ಕ್ಕೊಳಗಾದವರಾಗಿದ್ದಾರೆ. ಅವರಿಗೆ ನಂಜನಗೂಡು ನ್ಯಾಯಾಲಯ ದಲ್ಲಿ ಜಾಮೀನು ಮಂಜೂರಾಗಿದೆ ಎಂದು ಪ್ರಕರಣ ದಾಖಲಿಸಿ ಕೊಂಡಿರುವ ಬಿಳಿಗೆರೆ ಠಾಣೆ ಸಬ್ ಇನ್‍ಸ್ಪೆಕ್ಟರ್ ಆಕಾಶ್ ತಿಳಿಸಿದ್ದಾರೆ.

ಜೂನ್ 29ರಂದು ನಂಜನಗೂಡು ತಾಲೂಕಿನ ಹರಿಹರಪುರ ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನದ ಸಮೀಪ ಸರ್ವೆ ನಂಬರ್ 2/2ರ ಜಾಗದಲ್ಲಿದ್ದ ವೀರಭದ್ರ ಸ್ವಾಮಿ ಪುರಾತನ ವಿಗ್ರಹವನ್ನು ಗೌರಿ ಎಂಬುವರು ಕೊಂಡೊಯ್ದಿದ್ದಾರೆ ಎಂದು ಗ್ರಾಮ ಲೆಕ್ಕಿಗರಾದ ಮೋನಿಕಾ ನಂದಿ ಅವರು ದೂರು ನೀಡಿದ್ದರು ಎಂದು ತಿಳಿಸಿದ್ದಾರೆ. ಆ ಸಂಬಂಧ ಐಪಿಸಿ ಸೆಕ್ಷನ್ 379, ಕರ್ನಾಟಕ ಪ್ರಾಚ್ಯ ವಸ್ತು, ಐತಿಹಾಸಿಕ ಸ್ಮಾರಕ ಅಧಿನಿಯಮ ಹಾಗೂ ಪ್ರಾಚ್ಯ ವಸ್ತು, ಸ್ಮಾರಕ, ಪುರಾತತ್ವ ಸ್ಥಳ ಅವಶೇಷಗಳ ಅಧಿನಿಯಮಗಳಡಿ ಪ್ರಕರಣ ದಾಖಲಿಸಿ, ಗೌರಿ ಅವರನ್ನು ಬಂಧಿಸಿ, ಪುರಾತನ ಶಿಲಾ ವಿಗ್ರಹವನ್ನು ವಶಪಡಿಸಿಕೊಳ್ಳಲಾಯಿತು ಎಂದು ಸಬ್ ಇನ್‍ಸ್ಪೆಕ್ಟರ್ ತಿಳಿಸಿದರು.

ವಿಚಾರಣೆ ನಡೆಸಿದ ನಂತರ ಗೌರಿ ಅವರನ್ನು ನಂಜನಗೂಡಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದೂ ಆಕಾಶ್ ತಿಳಿಸಿದರು.

Translate »