ಕೊರೊನಾ ನಿಯಂತ್ರಣಕ್ಕೆ ಖರೀದಿಸಲಾದ ವೈದ್ಯಕೀಯ ಸಾಮಗ್ರಿಗಳಲ್ಲಿ ಕೋಟ್ಯಾಂತರ ಅವ್ಯವಹಾರ
ಮೈಸೂರು

ಕೊರೊನಾ ನಿಯಂತ್ರಣಕ್ಕೆ ಖರೀದಿಸಲಾದ ವೈದ್ಯಕೀಯ ಸಾಮಗ್ರಿಗಳಲ್ಲಿ ಕೋಟ್ಯಾಂತರ ಅವ್ಯವಹಾರ

September 23, 2020

ಬೆಂಗಳೂರು, ಸೆ.22(ಕೆಎಂಶಿ)- ಕೋವಿಡ್-19ಕ್ಕೆ ಕಡಿವಾಣ ಹಾಕಲು ಖರೀದಿಸಲಾದ ವೈದ್ಯಕೀಯ ಸಾಮಗ್ರಿ ಗಳಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆ ದಿದ್ದು, ಈ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಗ್ರಹಿಸಿದರು.

ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ವಿಫಲ ವಾಗಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ದೂರಿದರು. ನಿಯಮ 69ರಡಿಯಲ್ಲಿ ಕೊರೊನಾ ನಿರ್ವಹಣೆ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ, ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2200 ಕೋಟಿ ರೂಗಳಷ್ಟು ಹಗರಣ ನಡೆದಿದೆ. ಖರೀದಿಯಲ್ಲಿ ಪಾರ ದರ್ಶಕತೆ ಇಲ್ಲದಿರುವುದರಿಂದ ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಬೇಕು. ತನಿಖೆಯಾಗದಿದ್ದರೆ, ಹಣ್ಣು ತಿಂದವರು ಬಚಾವಾಗುತ್ತಾರೆ, ಸಿಪ್ಪೆ ತಿಂದವರು ಸಿಕ್ಕಿ ಹಾಕಿಕೊಳ್ಳು ತ್ತಾರೆ. ಮಾಸ್ಕ್, ಪಿಪಿಇ ಕಿಟ್, ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಒಂದರಿಂದ ಏಳರಷ್ಟು ದುಪ್ಪಟ್ಟು ಹಣ ನೀಡಿ ಖರೀದಿ ಮಾಡಿದ್ದೀರಿ ಎಂದು ಇಲಾಖೆ ನೀಡಿದ ದಾಖಲೆಗಳ ಪ್ರತಿ ಪ್ರದರ್ಶಿಸಿದರು. ಖರೀದಿಯಲ್ಲಿ ಒಂದು ಅವ್ಯವಹಾರ ವಾದರೆ, ಕಂಟೇನ್ಮೆಂಟ್ ವಲಯ ಗುರುತಿಸಿ ಪ್ರತಿ ವಲಯಕ್ಕೆ 65ರಿಂದ 70 ಸಾವಿರ ರೂ ವೆಚ್ಚ ಮಾಡಿ ಕೋಟ್ಯಾಂತರ ರೂ. ಲೂಟಿ ಮಾಡಲಾಗಿದೆ. ಸತ್ಯಾಸತ್ಯತೆ ಅರಿಯಲು ನ್ಯಾಯಾಂಗ ತನಿಖೆ ಮಾಡಿ, ಕೇಂದ್ರ ಸರ್ಕಾರದ ವಿಫಲದಿಂದಲೇ ರಾಷ್ಟ್ರದಲ್ಲಿ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡಲು ಕಾರಣವಾಗಿದೆ ಎಂದು ದೂರಿದರು.

ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲೇ ಬಿಗಿ ಕ್ರಮ ಕೈಗೊಂಡಿದ್ದರೆ, ಜನರನ್ನು ಸಾವಿನ ದವಡೆಗೆ ನೂಕುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಕೊರೊನಾ ಒಂದು ವiಹಾಮಾರಿ ಯಾಗಿದ್ದು, ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ. ಆದರೆ, ಕೇಂದ್ರದಂತೆ ರಾಜ್ಯ ಸರ್ಕಾರವೂ ನಿರ್ಲಕ್ಷ್ಯ ವಹಿಸಿದ್ದರಿಂದ 7ನೇ ಸ್ಥಾನಕ್ಕೆ ಬಂದು ನಿಂತಿದೆ. ಕೊರೊನಾ ನಿಯಂ ತ್ರಿಸಲು ನೇಮಕವಾದ ಸಚಿವರಲ್ಲೇ ಸಮನ್ವಯತೆ ಇಲ್ಲ. ಕೇವಲ ಖರೀದಿಯಲ್ಲಿ ಹಣ ಲೂಟಿ ಮಾಡುವುದನ್ನೇ ನೋಡಿದರೆ ಸಾಲದು. ರೋಗದ ಗಂಭೀರತೆ ಅರ್ಥ ಮಾಡಿ ಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಇಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಅಸಂಘಟಿತ ಕಾರ್ಮಿಕರಿಗೆ ಪುನರ್ ಜೀವನ ಕೊಡಲು ಪ್ಯಾಕೇಜ್ ಘೋಷಿಸಲಾಯಿತು. ಇದುವರೆಗೆ ಶೇ.20ರಷ್ಟು ಮಾತ್ರ ತಲುಪಿದೆ. ಈ ಬಗ್ಗೆ ಸದನದಲ್ಲಿ ಸವಿಸ್ತಾರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

Translate »