ಮುಡಾ ಆಸ್ತಿಯನ್ನು ಮಾರಾಟ ಮಾಡಿ ವ್ಯಕ್ತಿಗೆ ವಂಚನೆ: ಹಿನಕಲ್ ನಿವಾಸಿ ವಿರುದ್ಧ ಕೇಸ್ ದಾಖಲು
ಮೈಸೂರು

ಮುಡಾ ಆಸ್ತಿಯನ್ನು ಮಾರಾಟ ಮಾಡಿ ವ್ಯಕ್ತಿಗೆ ವಂಚನೆ: ಹಿನಕಲ್ ನಿವಾಸಿ ವಿರುದ್ಧ ಕೇಸ್ ದಾಖಲು

May 19, 2022

ಮೈಸೂರು, ಮೇ ೧೮-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಶಪಡಿಸಿಕೊಂಡಿರುವ ಆಸ್ತಿಯನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡುವ ಮೂಲಕ ವಂಚನೆ ಎಸಗಿದ ಆರೋಪದ ಮೇರೆಗೆ ಹಿನಕಲ್ ನಿವಾಸಿಯೊಬ್ಬರ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಿನಕಲ್ ನಿವಾಸಿ ಕೆಂಪನಾಯಕ ಆರೋಪಕ್ಕೆ ಗುರಿಯಾದವರಾಗಿದ್ದು, ಇವರು ವಿಜಯನಗರ ೧ನೇ ಹಂತದ ನಿವಾಸಿ ಕೆ.ಎನ್.ಹರೀಶ್ ಎಂಬುವರಿಗೆ ಮುಡಾ ವಶಪಡಿಸಿಕೊಂಡಿರುವ ನಿವೇಶನವನ್ನು ಮಾರಾಟ ಮಾಡುವ ಮೂಲಕ ವಂಚನೆ ಎಸಗಿದ್ದು, ಮೈಸೂರಿನ ೪ನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿವರ: ಹಿನಕಲ್ ಗ್ರಾಮದ ಗಿರಿಗೌಡ ಎಂಬುವರ ಮಕ್ಕಳಾದ ವಿಶ್ವನಾಥೇಗೌಡ ಮತ್ತು ಕಾಮರಾಜು ಎಂಬುವರು ಸರ್ವೆ ನಂ.೩೩೧/೫ಎ ನಲ್ಲಿ ಒಂದು ಎಕರೆ ಜಮೀನನ್ನು ಅನ್ಯಕ್ರಾಂತ ಮಾಡಿಸಿಕೊಂಡು ೧೯೯೯ರ ಅಕ್ಟೋಬರ್ ೨೫ರಂದು ಆರೋಪಿ ಕೆಂಪನಾಯಕ ಅವರಿಗೆ ನೋಂದಾಯಿತವಲ್ಲದ ಕ್ರಯಪತ್ರ ಮಾಡಿಕೊಟ್ಟಿದ್ದಾರೆ. ಆದರೆ ಮುಡಾ ಈ ಜಮೀನಿಗೆ ೧೯೮೧ರ ಏಪ್ರಿಲ್ ೧ರಂದು ಪ್ರಥಮ ನೋಟಿಸ್ ಹೊರಡಿಸಿ ೧೯೮೪ರ ಮಾರ್ಚ್ ೩೦ರಂದು ಅಂತಿಮ ಪ್ರಕಟಣೆ ಹೊರಡಿಸಿದ ನಂತರ ಜಮೀನನ್ನು ವಶಕ್ಕೆ ಪಡೆದಿತ್ತು.

ಈ ಆಸ್ತಿ ಮುಡಾ ಸ್ವಾಧೀನಪಡಿಸಿಕೊಂಡಿರುವುದು ತಿಳಿದಿದ್ದರು ಕೂಡ ಆರೋಪಿ ಕೆಂಪನಾಯಕ ೨೦೦೬ರ ಆಗಸ್ಟ್ ೮ರಂದು ವಿಜಯನಗರ ನಿವಾಸಿ ಕೆ.ಎನ್.ಹರೀಶ್ ಅವರಿಗೆ ಈ ಜಮೀನಿನ ಪೈಕಿ ೪೦ಘಿ೬೦ ಅಳತೆಯ ನಿವೇಶನವನ್ನು ಮಾರಾಟ ಮಾಡಿದ್ದಾರೆ. ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಹಿನಕಲ್ ಗ್ರಾಮ ಪಂಚಾಯ್ತಿ ಯಲ್ಲಿ ಖಾತೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬAಧ ಪೊಲೀಸರು ಕೆಂಪನಾಯಕ ವಿರುದ್ಧ ಭಾರತೀಯ ದಂಡ ಸಂಹಿತೆ ೪೦೬, ೪೨೦, ೪೬೮ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »