ನಾಳೆ ನಮ್ಮ ಸಮಾಜದ ಮಕ್ಕಳು ಅವಮಾನ ಸಹಿಸಿಕೊಂಡಿರಬೇಕೇ?
ಮೈಸೂರು

ನಾಳೆ ನಮ್ಮ ಸಮಾಜದ ಮಕ್ಕಳು ಅವಮಾನ ಸಹಿಸಿಕೊಂಡಿರಬೇಕೇ?

March 1, 2021

ಮೈಸೂರು, ಫೆ.28(ಆರ್‍ಕೆಬಿ)- ನಮ್ಮ ಮುಂದೆ ಅನೇಕ ಸಮಸ್ಯೆಗಳಿವೆ. ನಮ್ಮ ಬಗ್ಗೆ ನಮಗೇ ಗೌರವ, ಅಭಿಮಾನ ಇಲ್ಲದಿದ್ದರೆ ಮುಂದೆ ಭಾರೀ ಬೆಲೆ ತೆರ ಬೇಕಾಗುತ್ತದೆ. ನಾಳೆ ನಮ್ಮ ಸಮಾಜದ ಮಕ್ಕಳು ನಮ್ಮ ಕಣ್ಮುಂದೆಯೇ ಅವಮಾನ ಸಹಿಸಿಕೊಂಡಿರಬೇಕೇ? ಎಂದು ಪೇಜಾವರ ಮಠದ ಶ್ರೀ ವಿಶ್ವೇಶ್ವರ ಪ್ರಸನ್ನ ತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ವಿಶ್ವೇಶ್ವರನಗರದ ಸಿಂಧೂರ ಕನ್ವೆನ್ಷನ್ ಹಾಲ್‍ನಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಿದ್ದ `ವಿಪ್ರ ಸಮ್ಮೇಳನ’ ಬ್ರಾಹ್ಮಣರ ಸಮನ್ವಯ-ಸಮಸ್ಯೆಗಳಿಗೆ ವಿದಾಯ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಘಟನೆ ಎಷ್ಟು ಅತ್ಯಗತ್ಯ ಎಂಬುದಕ್ಕೆ ಮೊನ್ನೆಯ ಪ್ರತಿಭಟನೆ ಸ್ಪಷ್ಟ ನಿದರ್ಶನ. ನಮ್ಮ ಸಮಾಜವನ್ನು ತೀರಾ ಅವಹೇಳನಕಾರಿಯಾಗಿ ಚಿತ್ರಿಸಿ, ಸಮಾಜದ ಮುಂದೆ ತೋರಿಸಿ, ಅದರಿಂದ ದುರ್ಲಾಭ ಪಡೆಯುವ ಪ್ರವೃತ್ತಿ ನೋಡಿದೆವು. ಘಟನೆ ನಡೆದಾಕ್ಷಣ ಸಮಾಜ ಜಾಗೃತವಾಗಿ ಒಗ್ಗಟ್ಟಿನಿಂದ ಪ್ರತಿಭಟನೆ, ಪ್ರತಿರೋಧ ನಡೆಸಿತು. ಇದರ ಪರಿಣಾಮ ಚಿತ್ರಮಂಡಳಿ ಕ್ಷಮೆ ಕೇಳಿ, ಚಿತ್ರದಲ್ಲಿನ ದೃಶ್ಯಗಳನ್ನು ವಾಪಸ್ ಪಡೆಯಿತು. ಇದು ಸಂಘಟನೆಯಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಇಂತಹ ಎಲ್ಲಾ ಘಟನೆಗಳನ್ನು ನಾವು ಸಮರ್ಥವಾಗಿ ಎದುರಿಸಿ, ಪರಿಹರಿಸಿಕೊಳ್ಳದಿದ್ದರೆ ಮುಂದೆ ನಮ್ಮ ಮಕ್ಕಳು ನಮ್ಮ ಕಣ್ಮುಂದೆಯೇ ಅವಮಾನ ಸಹಿಸಿಕೊಂಡು ಸಮಾಜವನ್ನು ಹೇಗೆ ಅನುಸರಿಸುತ್ತಾರೆ? ಎಂಬು ದನ್ನು ಯೋಚಿಸಿ ನೋಡುವಂತೆ ಶ್ರೀಗಳು ತಿಳಿಸಿದರು.

ಇಂದು ಬ್ರಾಹ್ಮಣ ಸಮಾಜಕ್ಕೆ ದೇವಾಲಯಗಳಲ್ಲಿ ಅರ್ಚಕ ವೃತ್ತಿಯನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆ ಯುತ್ತಿದೆ. ಹೀಗಾದರೆ ನಾವು ಬದುಕುವುದು ಹೇಗೆ? ನೂರಾರು ಸಮಸ್ಯೆಗಳು ನಮ್ಮ ಸಮಾಜದ ಮೇಲೆ ನಿರಂತರವಾಗಿ ಎಲ್ಲಾ ಮೂಲೆಗಳಿಂದ ಧಾಳಿ ಮಾಡು ತ್ತಿವೆ. ಅವೆಲ್ಲವನ್ನು ಸಮರ್ಥವಾಗಿ ಎದುರಿಸಬೇಕಾ ದರೆ ಮೊಟ್ಟ ಮೊದಲು ನಾವು ಸಮಾಜದಲ್ಲಿ ಗೌರವ ಯುತವಾಗಿ ತಲೆ ಎತ್ತಿಕೊಂಡು ಬಾಳುವಂತಾಗಬೇಕು. ನಮ್ಮ ಬಗ್ಗೆ ನಮಗೇ ಗೌರವ, ಅಭಿಮಾನ ಇಲ್ಲದಂತಾ ದರೆ, ಅಭಿಮಾನಶೂನ್ಯರಾದರೆ ಸಮಾಜದಲ್ಲಿ ಹೇಗೆ ಬದುಕಲು ಸಾಧ್ಯ? ನಮ್ಮೆಲ್ಲ ಕಷ್ಟ ಸುಖಗಳನ್ನು ಹಂಚಿ ಕೊಂಡು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ದೊಡ್ಡ ಪ್ರಯತ್ನ ಇಂತಹ ಸಮ್ಮಿಲನ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಸಮಾಜ ರೋಗಗ್ರಸ್ತವಾಗುತ್ತಿದೆ: ಹಿಂದಿನ ಕಾಲ ದಲ್ಲಿ ಮನೆ ತುಂಬ ಮಕ್ಕಳು, ಸಮಾಜದ ಎಲ್ಲಾ ರಂಗ ದಲ್ಲಿ ಮಕ್ಕಳು ಬೆಳೆಯುತ್ತಿದ್ದರು. ಸಮಾಜದ ಸಮ ತೋಲನದಿಂದಾಗಿ ಅದು ಬೆಳೆಯುತ್ತಿತ್ತು. ಆದರೆ ಇಂದು ಒಬ್ಬರೋ, ಇಬ್ಬರೋ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದೇಶಕ್ಕೆ ಕಳಿಸುತ್ತಿದ್ದೇವೆ. ವೈದ್ಯ, ಇಂಜಿನಿಯರ್ ಎಂದು ಏಕಮುಖವಾಗಿ ಬೆಳೆಸುತ್ತಿದ್ದೇವೆ. ಹೀಗಾಗಿ ನಮ್ಮ ಸಮಾಜ ರೋಗಗ್ರಸ್ತವಾಗಿದೆ ಎಂದರು.

ನಮ್ಮ ಹೆಣ್ಣು ಮಕ್ಕಳು ಎಲ್ಲೋ ದಾರಿ ತಪ್ಪಿ ಹೋಗು ತ್ತಿದ್ದಾರೆ. ದಿನವೂ ವಾಟ್ಸಾಪ್‍ನಲ್ಲಿಯೇ ಇರುತ್ತಾರೆ. ತಂದೆ ತಾಯಿಯನ್ನು ಧಿಕ್ಕರಿಸುತ್ತಿದ್ದಾರೆ. ಕೊನೆಗೆ ಇರಲು ನೆಲೆ ಇಲ್ಲ, ಬದುಕಲು ದಾರಿ ಇಲ್ಲದಂತಾಗುತ್ತಿದ್ದಾರೆ. ಇದಕ್ಕೆ ಪರಿಹಾರವೇನು? ಎಂದು ಪ್ರಶ್ನಿಸಿದರು.

ಮುಂದೆ ಯಾರಿಂದ ಸಂಸ್ಕಾರ ಮಾಡಿಸಬೇಕು?: ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಹೆಣ್ಣು ಮಕ್ಕಳು ಎಲ್ಲಿ ಹೋಗುತ್ತಿದ್ದಾರೆ. ಪರಿಹಾರ ಹೇಗೆ? ಎಲ್ಲರೂ ಕಲೆತು ದಾರಿ ಹುಡುಕಬೇಕಿದೆ. ಗಂಡು ಮಕ್ಕಳಲ್ಲಿ ಅರ್ಚಕರು, ವಿದ್ವಾಂಸರು ವಿವಾಹವೇ ಇಲ್ಲದಂತಾಗುತ್ತಿದ್ದಾರೆ. ಹೀಗಾದರೆ ನಮ್ಮ ಸಮಜ ಉಳಿಯುವುದು ಹೇಗೆ? ಇರುವ ಅರ್ಚಕರು, ವಿದ್ವಾಂಸರು, ಅಡುಗೆಯವರು ಹೊರಟು ಹೋದರೆ ಯಾರನ್ನು ಕರೆಸಿ ನಮಗೆ ಬೇಕಾದ ಸಂಸ್ಕಾರವನ್ನು ಮಾಡಿಸಬೇಕು? ಏಕೆ ಹೀಗಾಗುತ್ತಿದೆ? ಎಂದು ಆತಂಕ ವ್ಯಕ್ತಪಡಿಸಿದರು.

ಸಂಧ್ಯಾವಂದನೆ, ಮುಸ್ಸಂಜೆ ಭಜನೆ ಎಲ್ಲಿ ಹೋಯಿತು? ಹಿಂದೆ ಮನೆ ಮನೆಯಲ್ಲಿ ಸಂಧ್ಯಾವಂದನೆ ನಡೆಯು ತ್ತಿತ್ತು. ಮುಸ್ಸಂಜೆ ವೇಳೆ ತಾಳ, ಭಜನೆ ಶಬ್ಧ ಕೇಳಿ ಬರುತ್ತಿತ್ತು. ಕೈಕಾಲು ತೊಳೆದು, ತುಳಸಿ ಪ್ರದಕ್ಷಿಣೆ ಹಾಕಿ ಭಜನೆಗೆ ಕೂರುತ್ತಿದ್ದರು. ಇವೆಲ್ಲ ಇಂದು ಎಲ್ಲಿ ಹೋಯಿತು? ಕೇವಲ ಟಿವಿ ಮುಂದೆ ಕುಳಿತು, ಟಿವಿಯಲ್ಲಿ ಬೇಡ ದ್ದನ್ನೇ ಹೆಚ್ಚು ನೋಡುತ್ತಾ, ಮಕ್ಕಳಿಗೂ ಅದನ್ನೇ ಕಲಿಸುತ್ತಿದ್ದೇವೆ ಎಂದು ಬೇಸರದಿಂದ ನುಡಿದರು.

ತಾಳ ಇದ್ದ ಕಡೆ ಭಜನೆ ಇರುತ್ತದೆ. ಆದರೆ ಇಂದು ಮನೆಗಳಲ್ಲಿ ತಾಳ ಇಲ್ಲ. ಆದರೆ ಟಿವಿಗಳಿವೆ. ಹೀಗಾ ದರೆ ಮಕ್ಕಳು ಯಾವ ಆದರ್ಶ ಕಲಿಯುತ್ತಾರೆ. ಹೀಗೇ ಮುಂದುವರಿದರೆ ಸಮಾಜ ಉಳಿಯುವುದಾದರೂ ಹೇಗೆ? ಇದಕ್ಕೆಲ್ಲ ಉತ್ತರ ಎಲ್ಲರೂ ಹೀಗೆ ಒಂದೆಡೆ ಕಲೆಯಬೇಕು. ಒಗ್ಗಟ್ಟಿದ್ದರೆ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದರು. ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಪರಕಾಲ ಮಠದ ಶ್ರೀ ಕಾರ್ಯಂ ವೆಂಕಟನಾಥನ್, ಶಾಸಕ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮಾಜಿ ಎಂಎಲ್‍ಸಿ ಗೋ. ಮಧುಸೂದನ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಆರ್.ಬಾಲಕೃಷ್ಣ, ಸಿ.ವಿ.ಗೋಪಿನಾಥ್, ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಕೆ. ರಘುರಾಂ ವಾಜಪೇಯಿ, ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್‍ಶಾಸ್ತ್ರಿ, ಶ್ರೀಧರಮೂರ್ತಿ, ಮುಳ್ಳೂರು ಗುರುಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

\

 

Translate »